ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಂತೆ: ಯೋಧರ ನಿಧಿಗೆ ₹ 50 ಸಾವಿರ

Last Updated 9 ಮಾರ್ಚ್ 2019, 11:37 IST
ಅಕ್ಷರ ಗಾತ್ರ

ಬೈಂದೂರು:ಇಲ್ಲಿಯ ಸೇನೇಶ್ವರ ದೇವಸ್ಥಾನದ ಹತ್ತಿರದ ವಾರದ ಸಂತೆಯಲ್ಲಿ ಜನ ಕಿಕ್ಕಿರಿದು ಖರೀದಿಯಲ್ಲಿ ಮಗ್ನರಾಗಿದ್ದರೆ ಅಲ್ಲೇ ಹತ್ತಿರ ದೇವಸ್ಥಾನದ ಮುಂದಿನ ಕಟ್ಟೆಯ ಮೇಲೆ ಹಾಕಿದ್ದ ಶ್ಯಾಮಿಯಾನದ ನೆರಳಿನಲ್ಲಿ ಮತ್ತು ಎದುರಿನ ಶಾರದಾ ವೇದಿಕೆಯಲ್ಲಿ ಅದಕ್ಕೆ ಪೈಪೋಟಿ ನೀಡುವಂತಹ ವ್ಯಾಪಾರ, ವಹಿವಾಟು ನಡೆದಿತ್ತು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ವ್ಯಾಪಾರ ನಡೆಸುತ್ತಿದ್ದರು.

ವಿಶ್ವ ಮಹಿಳಾ ದಿನಾಚರಣೆಯನ್ನು ಹೀಗೆ ಆಚರಿಸುವುದರ ಜತೆಗೆ ಬಂದ ಲಾಭವನ್ನು ದೇಶದ ಗಡಿಕಾಯುವ ಯೋಧರ ಕಲ್ಯಾಣ ನಿಧಿಗೆ ಕೊಡುಗೆ ಯಾಗಿ ನೀಡುವ ಉದ್ದೇಶ ಅದರ ಹಿಂದಿತ್ತು.

‌ವಿದ್ಯಾರ್ಥಿಗಳು ಸಂತೆಗಿಂತ ಭಿನ್ನವಾಗಿ ವಿವಿಧ ತಿಂಡಿ, ಪಾನೀಯ ಗಳನ್ನು ಮಾರಾಟಕ್ಕೆ ಇರಿಸಿದ್ದರು. ಅವುಗಳಲ್ಲಿ ಹೆಚ್ಚಿನವುಗಳನ್ನು ತಾವೇ ಮನೆಯಲ್ಲಿ ತಯಾರಿಸಿದ್ದರು. ಬಾಳೆಹಣ್ಣಿನ ರಸಾಯನ, ಮಜ್ಜಿಗೆ, ಕೋಕಮ್, ಹೆಸರು, ನಿಂಬೆ, ಪಿಸ್ತ ಜ್ಯೂಸ್, ಮಾವು, ಸೌತೆ, ಕಲ್ಲಂಗಡಿ, ಅನಾನಸು ಸ್ಲೈಸ್, ಇಡ್ಲಿ ವಡಾ, ಚರ್ಮುರಿ ಉಪ್ಕರಿ, ಪಾನಿಪುರಿ, ವೆಜ್ ಪಲಾವ್, ವೆಜ್ ಬಿರಿಯಾನಿ, ಐಸ್‌ಕ್ರೀಂನಂತಹ ಬಾಯಿ ನೀರೂರಿಸುವ ತಿಂಡಿತಿನಿಸು ಇದ್ದುವು.ಯಾವುದು ಕೊಂಡರೂ ಒಂದು ಗ್ಲಾಸ್‌ಗೆ ಹತ್ತು ರೂಪಾಯಿ. ಪ್ರತಿ ವಿಭಾಗಕ್ಕೂ ಸಾಧಕ ವನಿತೆಯರಾದ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ, ಸಿಸ್ಟರ್ ನಿವೇದಿತಾ, ಅನ್ನಿಬೆಸೆಂಟ್, ಮೇರಿ ಕ್ಯೂರಿ, ಕಿರಣ್ ಬೇಡಿ, ಅವನಿ ಚತುರ್ವೇದಿ, ರೂಪಾ ಮೌದ್ಗಿಲ್, ಸೈನಾ ನೆಹ್ವಾಲ್, ಪಿ. ವಿ. ಸಿಂಧು, ಸುನಿತಾ ವಿಲಿಯಮ್ಸ್ ಹೆಸರು ಇಡಲಾಗಿತ್ತು.

’ಆಹಾರ ಮೇಳ’ದ ಯಶಸ್ಸಿನಿಂದ ಪ್ರೇರಿತರಾಗಿ ಸಂತೆ ನಡೆಸಲು ಮುಂದಾದೆವು. ಪ್ರಾಂಶುಪಾಲ ಪ್ರೊ. ಬಿ. ಎ. ಮೇಳಿ, ಕಾಲೇಜಿನ ಮಹಿಳಾ ಸಂಘದ ಮಾರ್ಗದರ್ಶಕಿ ಸವಿತಾ ಎಸ್ ಮತ್ತು ಎಲ್ಲ ಬೋಧಕರು ಬೆಂಬಲ, ಮಾರ್ಗದರ್ಶನ ನೀಡಿದರು ಎಂದು ಅಂತಿಮ ಬಿಕಾಂ ವಿದ್ಯಾರ್ಥಿನಿ ಲತಾ ಪಾರ್ಶ್ವನಾಥ ಜೈನ್ ಹೇಳಿದರು.

₹50 ಸಾವಿರ ಯೋಧರ ಕಲ್ಯಾಣ ನಿಧಿಗೆ: ಸಂತೆಯಿಂದ ಬಂದ ಲಾಭ ₹35,642. ಬುಧವಾರದ ಆಹಾರ ಮೇಳದ ಉಳಿಕೆ ₹ 11ಸಾವಿರ. ಆ ಮೊತ್ತಕ್ಕೆ ಯಾವುದಾದರೂ ಮೂಲದಿಂದ ಇನ್ನಷ್ಟು ಸೇರಿಸಿ ಯೋಧರ ಕಲ್ಯಾಣ ನಿಧಿಗೆ ₹50 ಸಾವಿರ ಕಳುಹಿಸಲಾಗುವುದುಎಂದು ಪ್ರಾಧ್ಯಾಪಕ ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT