ಶುಕ್ರವಾರ, ಫೆಬ್ರವರಿ 3, 2023
25 °C

ಉಡುಪಿ | ಮುಸ್ಲಿಂ ವಿದ್ಯಾರ್ಥಿಗೆ ‘ಕಸಬ್’ ಎಂದ ಉಪನ್ಯಾಸಕ: ನೆಟ್ಟಿಗರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಣಿಪಾಲದ ಮಾಹೆ ವಿವಿಯ ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ‘ಕಸಬ್’ ಎಂದು ಸಂಬೋಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ. ಪ್ರಾಧ್ಯಾಪಕರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಪ್ರಾಧ್ಯಾಪಕ ರವೀಂದ್ರನಾಥ್‌ ‘ಕಸಬ್‌’ ಶಬ್ದ ಬಳಸಿರುವುದಕ್ಕೆ ವಿದ್ಯಾರ್ಥಿ ಪಿ.ಹಮ್ಜ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಉದ್ದೇಶಪೂರ್ವಕವಾಗಿ ಪದವನ್ನು ಬಳಸಿಲ್ಲ. ಹಾಸ್ಯದ ಧಾಟಿಯಲ್ಲಿ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನೀನು ನನ್ನ ಮಗನಂತೆ ಎಂದು ಪ್ರಾಧ್ಯಾಪಕ ವಿದ್ಯಾರ್ಥಿಯ ಬಳಿ ಕೇಳಿಕೊಂಡಿದ್ದಾರೆ.

‘26/11 ಕೃತ್ಯ ಹಾಸ್ಯಾಸ್ಪದವಲ್ಲ. ಮುಸ್ಲಿಮನಾಗಿ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಮಗನಿಗೆ ಭಯೋತ್ಪಾದಕ ಎಂದು ನೀವು ಕರೆಯುವಿರಾ?’ ಎಂದು ವಿದ್ಯಾರ್ಥಿ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾನೆ.

 

ತನಿಖೆಗೆ ಸೂಚನೆ:

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಹೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್‌.ಪಿ.ಕರ್‌ ‘ಘಟನೆ ಸಂಬಂಧ ತನಿಖೆಗೆ ಸೂಚಿಸಲಾಗಿದ್ದು, ತನಿಖೆ ಮುಗಿಯುವವರೆಗೂ ತರಗತಿಯಲ್ಲಿ ಬೋಧನೆ ಮಾಡದಂತೆ ಪ್ರಾಧ್ಯಾಪಕರಿಗೆ ಸೂಚನೆ ನೀಡಲಾಗಿದೆ.

ಮಾಹೆ ವಿವಿಯು ಸಂವಿಧಾನಿಕ ಮೌಲ್ಯಗಳನ್ನು ಗೌರವಿಸಿ ಎತ್ತಿಹಿಡಿಯುವುದರ ಜತೆಗೆ ಜಾತಿ, ಧರ್ಮ, ಲಿಂಗ ಹಾಗೂ ಪ್ರಾದೇಶಿಕ ಬೇಧ ತೋರದೆ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡುತ್ತದೆ’ ಎಂದು ತಿಳಿಸಿದ್ದಾರೆ.

ವಿವಾದ ಕೊನೆಗೊಳಿಸಿ

‘ಘಟನೆಯ ಬಳಿಕ ಪ್ರಾಧ್ಯಾಪಕರ ಜತೆ ಮಾತನಾಡಿದ್ದು ಉದ್ದೇಶಪೂರ್ವಕವಾಗಿ ಪದ ಬಳಕೆ ಮಾಡಿಲ್ಲ ಎಂಬುದು ಅರಿವಿಗೆ ಬಂದಿದೆ. ಕಸಬ್ ಹೇಳಿಕೆಗೆ ಕ್ಷಮೆಯಾಚಿಸಿರುವುದರಿಂದ ವಿವಾದವನ್ನು ಅಂತ್ಯಗೊಳಿಸುತ್ತಿದ್ದೇನೆ’ ಎಂದು ಹಮ್ಜ ವಾಟ್ಸ್‌ಆ್ಯಪ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು