ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ತುರ್ತು 3 ಸಾವಿರ ಎಲ್‌ಇಡಿ ಅಳವಡಿಕೆಗೆ ನಿರ್ಣಯ

ಸಾಮಾನ್ಯ ಸಭೆಯಲ್ಲಿ ಬೀದಿ ದೀಪ ಸಮಸ್ಯೆ ಚರ್ಚೆ
Last Updated 31 ಜನವರಿ 2023, 14:16 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಬೀದಿ ದೀಪ ಸಮಸ್ಯೆ ಬಗೆಹರಿಸಲು ತುರ್ತಾಗಿ 3 ಸಾವಿರ ಎಲ್‌ಇಡಿ ಬೀದಿದೀಪಗಳನ್ನು ಖರೀದಿಸಲು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬೀದಿ ದೀಪಗಳ ಸಮಸ್ಯೆಯ ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ರಘುಪತಿ ಭಟ್‌, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಂಪೂರ್ಣ ಎಲ್‌ಇಡಿ ಬೀದಿದೀಪಗಳ ಅಳವಡಿಕೆ ಯೋಜನೆಗೆ ಸರ್ಕರದ ಮಟ್ಟದಲ್ಲಿ ಹಿನ್ನಡೆಯಾಗಿದೆ.

ನಗರಸಭೆಯ ಅನುದಾನದಿಂದಲೇ ಎಲ್‌ಇಡಿ ಬೀದಿದೀಪಗಳ ಅಳವಡಿಕೆಗೆ ಯೋಜನೆ ಕಾರ್ಯರೂಪಕ್ಕೆ ಬರಬೇಕು. ಸದ್ಯ ತುರ್ತಾಗಿ ಅಳವಡಿಸುವ 3 ಸಾವಿರ ಎಲ್‌ಇಡಿ ಲೈಟ್ ಖರೀದಿಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

ಶಾಸಕರ ಪ್ರಸ್ತಾವಕ್ಕೆ ಸಭೆಯಲ್ಲಿ ಅನುಮೋದನೆ ದೊರೆಯಿತು. ಎಲ್‌ಇಡಿ ಬೀದಿದೀಪಗಳ ಅಳವಡಿಕೆ ಯೋಜನೆಯ ಕುರಿತು ವರದಿ ನೀಡುವಂತೆ ಅಧ್ಯಕ್ಷೆೆ ಸುಮಿತ್ರಾ ನಾಯಕ್ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಮಲ್ಪೆೆ ಬೀಚ್‌ ಹಾಗೂ ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಈಚೆಗೆ ಪ್ರವಾಸಿಗರ ಜತೆ ಅಲ್ಲಿನ ಸಿಬ್ಬಂದಿ ನಡೆದುಕೊಂಡ ರೀತಿ ಸಾರ್ವಜನಿಕ ಟೀಕೆಗಳಿಗೆ ಗುರಿಯಾಗಿದೆ. ಪ್ರವಾಸಿಗರಿಂದ ಕ್ಯಾಮೆರಾ ದರ, ಪಾರ್ಕಿಂಗ್ ದರ ವಸೂಲಿ ಮಾಡುತ್ತಿರುವ ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಆರೋಪಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸದಸ್ಯ ಯೋಗೀಶ್ ಸಾಲ್ಯಾನ್ ಮಲ್ಪೆೆ ಅಭಿವೃದ್ಧಿ ಮತ್ತು ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಲ್ಪೆೆ ಬೀಚ್, ಸೇಂಟ್ ಮೇರಿಸ್ ದ್ವೀಪದ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಒಬ್ಬ ವ್ಯಕ್ತಿಗೆ ನೀಡುವ ಬದಲು ಸ್ಥಳೀಯರನ್ನು ಒಳಗೊಂಡು ಭಜನಾ ಮಂದಿರಗಳಿಗೆ ವಹಿಸಲಾಗಿದೆ. ಹಳೆಯ ಟೆಂಡರ್ ಪ್ರಕಾರ ಪಾರ್ಕಿಂಗ್ ಹಾಗೂ ಕೆಮರಾ ಶುಲ್ಕ ಪಡೆಯಲು ಅವಕಾಶವಿದೆ. ಮರು ಟೆಂಡರ್‌ ಮಾಡಿ ಕ್ಯಾಮೆರಾ ಶುಲ್ಕ ಕೈಬಿಡಲಾಗುವುದು. ಒಂದೇ ಕಡೆ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳಲು ನಿಯಮ ರೂಪಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

ನಗರದ ಹಲವೆಡೆ ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ನಿರಂತರ ಅಪಘಾತಗಳು ನಡೆಯುತ್ತಿವೆ ಎಂದು ಸದಸ್ಯೆೆ ಅಮೃತಾ ಕೃಷ್ಣಮೂರ್ತಿ ದೂರಿದರು.

ನಗರ ವ್ಯಾಪ್ತಿಯಲ್ಲಿರುವ ಹಳೆಯ ಹಾಗೂ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಯವಂತೆ ದೂರು ನೀಡಿದರೂ ಮೆಸ್ಕಾಂ ಸಿಬ್ಬಂದಿ ಸ್ಪಂದನೆ ಸಿಗುತ್ತಿಲ್ಲ ಎಂದು ಸದಸ್ಯೆ ಜಯಂತಿ ಅಸಮಾಧಾನ ವ್ಯಕ್ತಪಡಿಸಿದರು.

ದೂರಗಳಿಗೆ ಸಂಬಂಧಿಸಿದಂತೆ 1912ಗೆ ಕರೆಮಾಡಿದರೆ ತಕ್ಷಣ ಸ್ಪಂದನ ಸಿಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ನಗರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ಕಲ್ಮಾಡಿ ಹೊಳೆ ಸಂಪೂರ್ಣ ಕಲುಷಿತಗೊಂಡಿದೆ. ಜಲಚರಗಳ ಹಾಗೂ ಜನರ ಜೀವಕ್ಕೆ ಕುತ್ತು ಎದುರಾಗಿದೆ. ನಗರದ ಹೊಲಸೆಲ್ಲ ಹೊಳೆ ಸೇರುತ್ತಿದ್ದು ತಕ್ಷಣ ಪರಿಹಾರ ಕಲ್ಪಿಸಬೇಕು. ನಿಟ್ಟೂರು ಶುದ್ಧೀಕರಣ ಘಟಕ ಸರಿಪಡಿಸಬೇಕು ಎಂದು ಸದಸ್ಯ ಮನೋಹರ್ ಕಲ್ಮಾಡಿ ಒತ್ತಾಯಿಸಿದರು.

ಸದಸ್ಯ ವಿಜಯ ಕೊಡವೂರು ಕೂಡ ಧನಿಗೂಡಿಸಿ, ಯುಜಿಡಿ ಅವ್ಯವಸ್ಥೆೆಯಿಂದ ಕೊಡವೂರು, ಕಲ್ಮಾಡಿ ಭಾಗದಲ್ಲಿ ಸಾಂಕ್ರಮಿಕ ರೋಗಭೀತಿ ಎದುರಾಗಿದೆ. ದುರ್ವಾಸನೆಯಿಂದ ಜನರು ವಾಸಮಾಡುವುದು ಕಷ್ಟವಾಗಿದೆ ಎಂದರು.

ಹೊಸ ಯುಜಿಡಿ ಕಾಮಗಾರಿಗೆ ₹ 330 ಕೋಟಿ ಅನುದಾನ ಸರ್ಕಾರದಿಂದ ದೊರೆಯಬೇಕಿದ್ದು, ಸಿಕ್ಕರೆ ಎಸ್‌ಟಿಪಿ ಘಟಕ ಮೇಲ್ದರ್ಜೆಗೇರಿಸಲಾಗುತ್ತದೆ. ಸಧ್ಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ತಿಳಿಸಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮೀ ಕೊಳ ಇದ್ದರು.

‘ಹೆಚ್ಚುವರಿ ಬಿಲ್ ಮನ್ನಾ ಮಾಡಿ’
ಕಳಪೆ ನೀರಿನ ಮೀಟರ್‌ ಅಳವಡಿಕೆಯಿಂದ ಬೇಕಾಬಿಟ್ಟಿ ನೀರಿನ ಬಿಲ್‌ ಬರುತ್ತಿದೆ ಎಂದು ಜನರು ದೂರುತ್ತಿದ್ದಾರೆ. ಹೆಚ್ಚು ಬಿಲ್ ಬಂದಾಗ ಹಿಂದಿನ ತಿಂಗಳ ಬಿಲ್‌ ಪರಿಶೀಲಿಸಿ ಸರಾಸರಿ ಮೊತ್ತ ಪಡೆಯಲು ಸೂಚಿಸಲಾಗಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಹೆಚ್ಚುವರಿ ಬಿಲ್ ಮೊತ್ತವನ್ನು ಮನ್ನಾ ಮಡಬೇಕು. ಪೈಪ್‌ಲೈನ್, ಟ್ಯಾಂಕ್, ಮೀಟರ್ ಪರಿಶೀಲನೆಗೆ ಎಂಐಟಿ, ನಿಟ್ಟೆೆ ಹಾಗೂ ನಗರಸಭೆ ಎಂಜಿನಿಯರ್‌ಗಳನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಬೇಕು ಎಂದು ಶಾಸಕ ರಘುಪತಿ ಭಟ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT