ನಗರಸಭೆ ಗದ್ದುಗೆಗೆ ಕೈ, ಕಮಲ, ತೆನೆ ಕಸರತ್ತು

7
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಚುನಾವಣೆಗೆ ಮುಹೂರ್ತ ನಿಗದಿ

ನಗರಸಭೆ ಗದ್ದುಗೆಗೆ ಕೈ, ಕಮಲ, ತೆನೆ ಕಸರತ್ತು

Published:
Updated:
Deccan Herald

ಉಡುಪಿ: ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆ.29ರಂದು ಮುಹೂರ್ತ ನಿಗದಿಮಾಡಿದೆ. ಅದರಂತೆ, ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ಚುನಾವಣೆ ನಡೆಯಲಿದ್ದು, ಅಧಿಕಾರ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ತಂತ್ರಗಾರಿಕೆ ಆರಂಭಿಸಿವೆ.

ಯಾರಿಗೆ ನಗರಸಭೆ ಗದ್ದುಗೆ?

ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬಾರಿಯ ನಗರಸಭೆ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಸಾಲುಸಾಲು ಕಾರ್ಯಕರ್ತರ ಸಭೆಗಳನ್ನು ನಡೆಸಿವೆ. ಶತಾಯಗತಾಯ ನಗರಸಭೆಯ ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿವೆ.

ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ:

ನಗರಸಭೆ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಸ್ತಿತ್ವ ಸಾಬೀತು ಮಾಡಬೇಕಾಗಿರುವ ಪರೀಕ್ಷೆ ಎಂದೇ ಹೇಳಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದೂ ಕ್ಷೇತ್ರಗಳಲ್ಲಿ ಸೋಲುಂಡಿರುವ ಕಾಂಗ್ರೆಸ್‌, ಮತ್ತೆ ನೆಲೆ ಕಂಡುಕೊಳ್ಳಬೇಕಾದರೆ ನಗರಸಭೆ ಆಡಳಿತವನ್ನು ಮರುವಶ ಮಾಡಿಕೊಳ್ಳಬೇಕು. ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಗೆಲುವು ಕಾಂಗ್ರೆಸ್‌ ಪಾಲಿಗೆ ಮಹತ್ವದ್ದು.

ವಿಧಾನಸಭಾ ಚುನಾವಣೆಯಲ್ಲಿ ನಗರದ 35 ವಾರ್ಡ್‌ಗಳ ಪೈಕಿ 30ರಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿತ್ತು. ಇದು ಕಾಂಗ್ರೆಸ್‌ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ವಿಧಾನಸಭೆ, ಲೋಕಸಭೆ ಚುನಾವಣಾ ಪಲಿತಾಂಶದ ಪ್ರಭಾವ ನಗರಸಭೆಯ ಮೇಲೆ ಬೀರುವುದಿಲ್ಲ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದು.

ಸದ್ಯ ನಗರಸಭೆಯಲ್ಲಿ 22 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ ಆಡಳಿತದಲ್ಲಿದೆ. ಕೊಡವೂರು ಕ್ಷೇತ್ರದ ಸದಸ್ಯರಾದ ಮೀನಾಕ್ಷಿ ಮಾಧವ ಬನ್ನಂಜೆ ನಗರಸಭೆ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ ರಣತಂತ್ರ ರೂಪಿಸಿದೆ. 

ಉತ್ಸಾಹದಲ್ಲಿ ಬಿಜೆಪಿ:

ಜಿಲ್ಲೆಯನ್ನು ಸಂಪೂರ್ಣವಾಗಿ ವಶಮಾಡಿಕೊಂಡಿರುವ ಬಿಜೆಪಿ ನಗರಸಭೆಯನ್ನೂ ತೆಕ್ಕೆಗೆ ತೆಗೆದುಕೊಳ್ಳುವ ಉತ್ಸಾಹದಲ್ಲಿದೆ. ಶಾಸಕ ಕೆ.ರಘುಪತಿ ಭಟ್ ಅವರು ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರು ಹಾಗೂ ಮತದಾರರ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಕಳೆದ ಬಾರಿಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಸದ್ಯ ನಗರಸಭೆಯಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿದ್ದು, ಈ ಬಾರಿ ಎಲ್ಲ ಸ್ಥಾನಗಳನ್ನು ಗೆಲ್ಲುವ ಗುರಿಹೊಂಡಿದೆ. ಆದರೆ, ವಿಧಾನಸಭಾ ಚುನಾವಣಾ ಫಲಿತಾಂಶ ನಗರಸಭೆಯಲ್ಲೂ ಮರುಕಳಿಸುತ್ತದೆ ಎನ್ನಲಾಗುವುದಿಲ್ಲ. ಮತದಾರರ ಮನಸ್ಸು ಕ್ಷಣಕಣಕ್ಕೂ ಬದಲಾಗುತ್ತಿರುತ್ತದೆ. ಶಾಸಕರ ಆಡಳಿತ ವೈಖರಿಯನ್ನು ಗಮನಿಸಿರುವ ಮತದಾರರು ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಜೆಡಿಎಸ್‌ಗೆ ಖಾತೆ ತೆರೆಯುವ ಉತ್ಸಾಹ:

ಕರಾವಳಿ ಭಾಗದಲ್ಲಿ ಜೆಡಿಎಸ್‌ ಪಕ್ಷಕ್ಕೆ ಭದ್ರವಾದ ನೆಲೆಯಿಲ್ಲ. ಆದರೆ, ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಅಸ್ತಿತ್ವದಲ್ಲಿರುವುದು ಪಕ್ಷಕ್ಕೆ ಬಲ ಬಂದಂತಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿರುವ ಜೆಡೆಎಸ್‌ ಚುನಾವಣೆಗೆ ತಯಾರಿ ಮಾಡಿಕೊಂಡಿದೆ. ಈ ಬಾರಿ ನಗರಸಭೆಯಲ್ಲಿ ಖಾತೆ ತೆರೆಯುವ ಮೂಲಕ ಹೆಚ್ಚಿನ ಸ್ಥಾನ ಗೆಲ್ಲುವ ಆಶಾಭಾವ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !