ಉಡುಪಿ: ನಗರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದ ಸಂದರ್ಭದಲ್ಲಿ ಹೆಚ್ಚಳ ಮಾಡಿದ್ದ ಕುಡಿಯುವ ನೀರಿನ ದರವನ್ನು ಇಳಿಕೆ ಮಾಡಲು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಸುಂದರ ಕಲ್ಮಾಡಿ, ಸುಮಿತ್ರಾ ಆರ್. ನಾಯಕ್ ಅವರು, ನೀರಿನ ದರ ಏರಿಕೆಯಿಂದ ಜನರಿಗೆ ತೊಂದರೆಯಾಗಿರುವುದನ್ನು ಸಭೆಯ ಗಮನಕ್ಕೆ ತಂದರು.
ಶಿರಿಬೀಡು ವಾರ್ಡ್‌ನಲ್ಲಿ ಕಟ್ಟಡವೊಂದಕ್ಕೆ ತಡೆಗೋಡೆ ನಿರ್ಮಿಸಲು ರಸ್ತೆಯನ್ನು ಮುಚ್ಚಿ ಜನರಿಗೆ ತೊಂದರೆ ನೀಡಲಾಗಿದೆ ಎಂದು ಸದಸ್ಯ ಟಿ.ಜಿ.ಹೆಗ್ಡೆ ಹೇಳಿದರು.
ಶಿರಿಬೀಡು ವಾರ್ಡ್‌ನ ಮಸೀದಿ ಸಮೀಪದಲ್ಲಿ ನಿಯಮಗಳನ್ನು ಮೀರಿ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಅಕ್ರಮ ಕಟ್ಟಡಕ್ಕೆ ಸಂಬಂಧಿಸಿ ಮೂರು ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್‌ಪಾಲ್ ಸುವರ್ಣ ಸೂಚಿಸಿದರು.
ನಗರಸಭೆ ಪೌರಾಯುಕ್ತ ರಾಯಪ್ಪ ಮಾತನಾಡಿ, ಹಿಂದಿನ ಪೌರಾಯುಕ್ತರು ಕಟ್ಟಡಕ್ಕೆ ಡೋರ್ ನಂಬರ್ ನೀಡಲು ನಿರಪೇಕ್ಷಣಾ ಪತ್ರ ನೀಡಿದ್ದಾರೆ. ಅಕ್ರಮ ಕಟ್ಟಡವನ್ನು ತೆರವುಗೊಳಿಸುತ್ತೇವೆ ಎಂದರು.
76 ಬಡಗಬೆಟ್ಟು ಗ್ರಾಮದ ಚಿಟ್ಪಾಡಿ ವಾರ್ಡ್‌ನಲ್ಲಿ ನಿರ್ಮಾಣವಾಗುತ್ತಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು. ಅದಕ್ಕೆ ಸಹಕಾರ ನೀಡಿದ ನಗರಸಭೆ ಮತ್ತು ನಗರ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ಶ್ರೀಕೃಷ್ಣ ರಾವ್ ಕೊಡಂಚ ಒತ್ತಾಯಿಸಿದರು.
ಸದಸ್ಯ ಸುಂದರ್ ಜೆ.ಕಲ್ಮಾಡಿ ಮಾತನಾಡಿ, ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಕುರಿತು ಸಮೀಕ್ಷೆ ನಡೆಸುವ ಕೆಲಸಕ್ಕೆ ನಗರಸಭೆಯ ಸಿಬ್ಬಂದಿ ಬಳಸುವುದರಿಂದ ಇಲ್ಲಿಗೆ ಬರುವ ಜನರ ಕೆಲಸವಾಗುತ್ತಿಲ್ಲ ಎಂದರು.
ಮಲ್ಪೆ ಬೀಚ್ ಪರಿಸರದಲ್ಲಿ ಕಸದ ರಾಶಿ ತುಂಬಿದ್ದು, ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಯೋಗೀಶ್ ಸಾಲ್ಯಾನ್ ತಿಳಿಸಿದರು.
ಸಂತೆಕಟ್ಟೆ, ಇಂದ್ರಾಳಿ ರೈಲ್ವೆ ಕಾಮಗಾರಿಯ ಪ್ರಗತಿ ಏನಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಕೇಳಿದರು. ಅದಕ್ಕೆ ಉತ್ತರಿಸಿದ ಸಂಸದರು ಮಳೆ ಹೆಚ್ಚಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಶೀಘ್ರ ಚುರುಕುಗೊಳ್ಳಲಿದೆ ಎಂದರು.
ಶಿರಿಬೀಡು ಮತ್ತು ಚಿಟ್ಪಾಡಿ ವಾರ್ಡ್‌ಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ತೆರವಿಗೆ ಹಾಗೂ ರಸ್ತೆ ಬಂದ್ ಮಾಡಿರುವ ಕಟ್ಟಡದ ಪರವಾನಗಿ ರದ್ದುಗೊಳಿಸಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ 11 ಮಂದಿ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಉಳಿದಿರುವ 14 ತಿಂಗಳಲ್ಲಿ ಆದಷ್ಟು ಶ್ರಮಪಟ್ಟು ಉಡುಪಿ ನಗರಕ್ಕೆ ಒಳ್ಳೆಯ ಹೆಸರು ಬರುವ ಹಾಗೆ ಪ್ರಾಮಾಣಿಕವಾಗಿ ತಂಡವಾಗಿ ಕಾರ್ಯನಿರ್ವಹಿಸುತ್ತೇವೆ-ಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
ಅಂಬಲಪಾಡಿ ವಾರ್ಡ್‌ನಲ್ಲಿ ಅಧಿಕಾರಿಗಳು ಮೂರನೇ ವ್ಯಕ್ತಿಯ ಶಿಫಾರಸಿನ ಮೇರೆಗೆ ರಸ್ತೆ ಕಾಮಗಾರಿಗೆ ಅಕ್ರಮವಾಗಿ ಟೆಂಡರ್ ಕರೆದಿದ್ದಾರೆ. ಈ ವಿಚಾರವನ್ನು ನನ್ನ ಗಮನಕ್ಕೆ ತಂದಿಲ್ಲ ಎಂದು ನಗರಸಭೆ ಸದಸ್ಯ ಹರೀಶ್ ಶೆಟ್ಟಿ ಆರೋಪಿಸಿದರು. ಆಗ ಪೌರಾಯುಕ್ತ ರಾಯಪ್ಪ ಅವರು ನೂರಾರು ಕಡತಗಳು ಬರುತ್ತವೆ ಕಣ್ತಪ್ಪಿನಿಂದ ಸಹಿ ಮಾಡಲಾಗಿದೆ ಎಂದರು.
ಈ ವೇಳೆ ಶಾಸಕ ಯಶ್‌ಪಾಲ್ ಅವರು ನೀವು ಇಂತಹ ಉತ್ತರ ನೀಡಬಾರದು ತಪ್ಪಾಗಿದ್ದರೆ ಕ್ಷಮೆಯಾಚಿಸಿ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಯಪ್ಪ ಅವರು ಆ ಟೆಂಡರ್ ಅನ್ನು ರದ್ದುಪಡಿಸಿದ್ದೇವೆ. ಈ ವಿಚಾರದಲ್ಲಿ ತಪ್ಪಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.