ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ, ಕೋಮವಾದ ಚಟುವಟಿಕೆಗಳಿಗೆ ಬ್ರೇಕ್‌

ಉಡುಪಿ ನೂತನ ಎಸ್‌ಪಿ ನಿಶಾ ಜೇಮ್ಸ್‌ ಅಧಿಕಾರ ಸ್ವೀಕಾರ
Last Updated 23 ಫೆಬ್ರುವರಿ 2019, 9:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕುವುದು, ಕೋಮವಾದವನ್ನು ಹತ್ತಿಕ್ಕುವುದು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯಗಳಿಗೆ ಬ್ರೇಕ್ ಹಾಕಲು ಆದ್ಯತೆ ನೀಡಲಾಗುವುದು ಎಂದು ನೂತನ ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದರು.

ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಕಾನೂನಿನ ಸಂಪೂರ್ಣ ಅಧಿಕಾರವನ್ನು ಬಳಸಿಕೊಂಡು ನಿಷ್ಪಕ್ಷಪಾತವಾಗಿ, ಯಾರ ಮುಲಾಜಿಗೆ ಕಟ್ಟುಬೀಳದೆ ಇಲಾಖೆ ಕಾರ್ಯ ನಿರ್ವಹಿಸಲಿದೆ. ಸಾಗರದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಮಹಿಳೆಯರ ರಕ್ಷಣೆಗೆ ‘ಕೆಳದಿ ಚೆನ್ನಮ್ಮ’ ಪಡೆ ರಚಿಸಲಾಗಿತ್ತು. ಇಲ್ಲಿಯೂ ಮಹಿಳೆಯರ ರಕ್ಷಣೆಗೆ ವಿಭಿನ್ನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದುನಿಶಾ ಜೇಮ್ಸ್‌ ಹೇಳಿದರು.

ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿರುವ ಭಯ ದೂರವಾಗಿಲ್ಲ. ಈ ವಾತಾವರಣ ಬದಲಾಗಿ ಜನಸ್ನೇಹಿ ವ್ಯವಸ್ಥೆ ಜಾರಿಯಾಗಬೇಕು. ಅಪರಾಧ ಪ್ರಕರಣಗಳನ್ನು ಬೇಧಿಸಲು ಇಲಾಖೆಗೆ ನಾಗರಿಕರ ಸಹಕಾರ ಅತ್ಯಗತ್ಯ ಎಂದರು.

ಜಿಲ್ಲೆಯ ಭೌಗೋಳಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಚಿತ್ರಣವನ್ನು ಅರಿಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಎಂತಹ ಸವಾಲುಗಳು ಎದುರಾದರೂ ದಕ್ಷತೆಯಿಂದ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಫೋನ್‌ ಕಾರ್ಯಕ್ರಮ ಸೇರಿದಂತೆ ಎಸ್‌ಪಿಲಕ್ಷ್ಮಣ ನಿಂಬರಗಿ ಅವರ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದಾಗಿ ನಿಶಾ ಜೇಮ್ಸ್‌ ತಿಳಿಸಿದರು.

1 ವರ್ಷ 2 ತಿಂಗಳು ಉಡುಪಿಯಲ್ಲಿ ಕಾರ್ಯ ನಿರ್ವಹಿಸಿದ್ದು ತೃಪ್ತಿ ತಂದಿದೆ. ಕಾನೂನು ಸುವ್ಯವಸ್ಥೆಯ ಜತೆಗೆ ಇಲ್ಲಿನ ವೈವಿಧ್ಯಮಯ ಸಂಸ್ಕೃಂತಿ ಅರಿಯಲು ಸಾಧ್ಯವಾಯಿತು. ಇಲ್ಲಿಯ ವೃತ್ತಿಜೀವನದಲ್ಲಿ ವಿಶಿಷ್ಟ ಅನುಭವ ಹಾಗೂ ಸವಾಲುಗಳನ್ನು ಎದುರಿಸಿದ್ದೇನೆ. ಸಿಬ್ಬಂದಿಯ ಸಹಕಾರದಿಂದ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದು ನಿರ್ಗಮಿತ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಸರ್ಕಾರದ ಸೇವೆಯಲ್ಲಿ ವರ್ಗಾವಣೆ ಸಹಜ. ಈ ವಿಚಾರದಲ್ಲಿ ಬೇಸರವಿಲ್ಲ. ಸರ್ಕಾರ ಸೂಚಿಸಿದ ಜಾಗದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT