ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಈದ್ ಉಲ್ ಫಿತ್ರ್ ಸಂಭ್ರಮ

ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ
Last Updated 4 ಜೂನ್ 2019, 19:58 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ಈದ್ ಉಲ್‌ ಫಿತ್ರ್‌ ಸಂಭ್ರಮ ಕಳೆಗಟ್ಟಿದೆ. ಪವಿತ್ರ ರಂಜಾನ್ ಮಾಸದ ಉಪವಾಸಕ್ಕೆ ಬುಧವಾರ ತೆರೆ ಬೀಳಲಿದೆ.

ಉಡುಪಿಯ ಜಾಮಿಯಾ, ಅಂಜುಮಾನ್‌, ಹಾಶ್ಮಿ ಮಸೀದಿ ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಬೆಳಿಗ್ಗೆ ಧರ್ಮಗುರುಗಳ ನೇತೃತ್ವದಲ್ಲಿ ಅಲ್ಲಾಹುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ನಮಾಜ್‌ ಸಲ್ಲಿಸಲು ಮಸೀದಿಗಳ ಬಳಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಬಣ್ಣ ಬಣ್ಣದ ಕಣ್ಣು ಕೋರೈಸುವ ದೀಪಗಳು ಈದ್ ಮೆರುಗನ್ನು ಹೆಚ್ಚಿಸಿವೆ.

ಬೆಳಿಗ್ಗೆ ನಮಾಜ್ ಬಳಿಕ ಮುಸ್ಲಿಮರು ಪರಸ್ಪರ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಬಳಿಕ ಸಂಬಂಧಿಗಳ ಮನೆಗೆ ತೆರಳಿ ಶುಭಾಶಯ ತಿಳಿಸಿ ಹಿರಿಯರಿಂದ ಆಶೀರ್ವಾದ ಪಡೆಯಲಿದ್ದಾರೆ.

ಈದ್ ಹಬ್ಬಕ್ಕೆ ಹೊಸಬಟ್ಟೆ ಧರಿಸುವ ರೂಢಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಮಾರುಕಟ್ಟೆಯಲ್ಲಿ ಬಟ್ಟೆ ಖರೀದಿ ಭರಾಟೆ ಜೋರಾಗಿದೆ. ಕುಟುಂಬ ಸಮೇತ ಖರೀದಿಯಲ್ಲಿ ತೊಡಗಿದ್ದು, ನಗರದ ಪ್ರಮುಖ ಬಟ್ಟೆ ಮಾರಾಟ ಮಳಿಗೆಗಳಲ್ಲಿ ಜನಜಂಗುಳಿ ಕಂಡುಬಂತು.

ಮಾರುಕಟ್ಟೆಯಲ್ಲೂ ಜನಜಂಗಳಿ ಕಂಡುಬಂತು. ಬಗೆಬಗೆಯ ಖರ್ಜೂರ, ಹಣ್ಣುಗಳ ಮಾರಾಟ ಹೆಚ್ಚಾಗಿತ್ತು. ನಗರದ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಖರೀದಿ ಜೋರಾಗಿತ್ತು.

ಜಕಾತ್: ಈದ್ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂಬ ಉದ್ದೇಶದಿಂದಹಬ್ಬದ ದಿನ ನಿರ್ದಿಷ್ಟ ಪ್ರಮಾಣದ ಮಾಂಸವನ್ನು ದಾನ ಮಾಡುವ ಪದ್ಧತಿ ರೂಢಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗಿರುವುದು ಕಂಡುಬಂತು. ಜತೆಗೆ, ಪ್ರತಿಯೊಬ್ಬರು ಆದಾಯದ ಒಂದು ಭಾಗವನ್ನು ಬಡವರಿಗೆ ದಾನ ಮಾಡುವುದು ಕಡ್ಡಾಯವಾಗಿದ್ದು, ಅದನ್ನು
ಜಕಾತ್ ಎಂದು ಕರೆಯಲಾಗುತ್ತದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದರು.

ಈದ್ ಉಲ್‌ ಫಿತ್ರ್ ಸಂತೋಷ ತರಲಿ

ಈದ್ ಉಲ್ ಫಿತ್ರ್‌ ಹೆಚ್ಚು ಮಹತ್ವ ತುಂಬಿದ ಆರಾಧನೆ. ಈದ್ ಉಲ್‌ ಫಿತ್ರ್ ದಿನ ಕಡ್ಡಾಯವಾಗಿ ನೀಡಬೇಕಾದ ದಾನಕ್ಕೆ ಫಿತ್ರ್ ಜಕಾತ್ ಎನ್ನಲಾಗುತ್ತದೆ. ಫಿತ್ರ್ ಅಂದರೆ ಉಪವಾಸ ಮುಕ್ತಾಯಗೊಳಿಸುವುದು. ಉಪವಾಸದ ಕೊರತೆಗಳಿಗೆ ಫಿತ್ರ್ ಜಕಾತ್ ಪರಿಹಾರವಾಗುವುದು. ಹಾಗಾಗಿ, ಹಬ್ಬಕ್ಕೆ ಈದ್ ಉಲ್‌ ಫಿತ್ರ್ ಎಂಬ ಹೆಸರು ಬಂದಿದೆ. ಸ್ನೇಹ ಸೌಹಾರ್ದ, ಪರಸ್ಪರ ಭೇಟಿ, ಅನ್ಯೋನ್ಯ, ಔದಾರ್ಯತೆ, ವಿಶ್ವಾಸ ಪ್ರಾಮಾಣಿಕತೆ ಹಾಗೂ ಅನನ್ಯ ಪ್ರೇಮವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬುದು ಅಲ್ಲಾಹುವಿನ ಆದೇಶ. ಹಬ್ಬದ ದಿನ ಸ್ನೇಹ ಸೌಹಾರ್ದ ಬೆಳಸುವುದರ ಜೊತೆಗೆ ಬಡವರಿಗೆ ಔದಾರ್ಯವನ್ನು ತೋರಿದರೆ ಜೀವನದಲ್ಲಿ ಅತಿದೊಡ್ಡ ಭಾಗ್ಯ ಪ್ರಾಪ್ತಿಯಾಗಲಿದೆ. ತೃಪ್ತಿ ಸಿಗದೇ ಹೋದರೆ, ಕನಿಷ್ಠ ಕ್ಷಮೆಯಾದರೂ ಸಿಗಬೇಕು. ಧರ್ಮಕ್ಕೆ ವಿರುದ್ಧವಾಗಿ ಹಬ್ಬಗಳನ್ನು ಆಚರಿಸಿ ಅಲ್ಲಾಹುವಿನ ಕೋಪಕ್ಕೆ ಗುರಿಯಾಗಬಾರದು. ಮನೆಯಲ್ಲಿ ಹಬ್ಬವನ್ನು ಸಂತೋಷದಿಂದ ಆಚರಿಸುವಾಗ ನೆರೆಮನೆಯವರನ್ನೂ ನೋಡಬೇಕು. ಹಬ್ಬದ ಸಂಭ್ರಮ ಇತರ ಧರ್ಮದವರಿಗೆ ನೋವಾಗಬಾರದು.

ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್,ಸಂಯುಕ್ತ ಜಮಾತ್ ಖಾಝಿ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT