ಉಡುಪಿ: ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಸಾರ್ವಜನಿಕರು ಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಬೀಡಿನಗುಡ್ಡೆ, ಅಜ್ಜರಕಾಡು, ಆದಿ ಉಡುಪಿಯ ಮಾಂಸ ಮಾರುಕಟ್ಟೆ, ಎಪಿಎಂಸಿ ಸುತ್ತಮುತ್ತಲಿರುವ ಪ್ರದೇಶ, ಬನ್ನಂಜೆಯ ತಹಶೀಲ್ದಾರ್ ಕಚೇರಿ ಹಿಂಭಾಗ, ಮಣಿಪಾಲದ ಕೈಗಾರಿಕಾ ವಲಯ, ಮಲ್ಪೆ ಭಾಗಗಳಲ್ಲಿ ಬೀದಿ ನಾಯಿಗಳು ಜನರ ಮೈಮೇಲೆ ಎರಗುತ್ತಿದ್ದು ಶ್ವಾನಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾಗಿದೆ.
ಕೆಲಸ ಮುಗಿಸಿ ಮನೆಗೆ ಬರುವವರ ಮೇಲೆ, ಶಾಲೆಯಿಂದ ಮನೆಗೆ ಮರಳುವ ಮಕ್ಕಳ ಮೇಲೆ ನಾಯಿಗಳು ಏಕಾಏಕಿ ಎರಗುವಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಶ್ವಾನಗಳ ದಾಳಿಗೆ ಹೆದರಿ ಬೈಕ್ ಸವಾರರು ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ.
ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಸಾಗುವ ವಾಹನಗಳಿಗೆ ಅಡ್ಡಲಾಗಿ ಬಂದು ನಾಯಿಗಳು ಬಲಿಯಾಗುತ್ತಿವೆ. ಜನರ ಜೀವಕ್ಕೂ ಕುತ್ತು ಉಂಟಾಗುತ್ತಿದೆ. ಉಡುಪಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಂದ ಬೀದಿ ನಾಯಿಗಳು ಹೆಚ್ಚಾಗಿ ನಗರ ಪ್ರವೇಶಿಸುತ್ತಿವೆ. ನಗರಸಭೆಯಿಂದ ನಾಯಿಗಳನ್ನು ಹಿಡಿಸಿ ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು, ಮೀನು ಮಾರುಕಟ್ಟೆ, ಮಾಂಸ ಮಾರುಕಟ್ಟೆ ಇರುವ ಭಾಗಗಳಲ್ಲಿ ಸಮಸ್ಯೆ ಗಂಭೀರವಾಗಿದ್ದು ನಾಯಿಕಡಿತ ಪ್ರಕರಣಗಳು ಹೆಚ್ಚಾಗಿವೆ. ಜತೆಗೆ, ಉಡುಪಿ ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಗೂ ಮಾಂಸದ ತ್ಯಾಜ್ಯ ಬಿಸಾಡುತ್ತಿರುವುದರಿಂದ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗಿದೆ.
ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು, ಪ್ರತಿದಿನ ಕಸ ಸಂಗ್ರಹ ವಾಹನಕ್ಕೆ ಕಸ ನೀಡಬೇಕು. ಮಾಲೀಕರು ನಾಯಿಗಳನ್ನು ಸಾಕಲಾಗದೆ ಬೀದಿಗೆ ಬಿಡಬಾರದು, ಸಂತಾನೋತ್ಪತ್ತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ನಗರಸಭೆ ಪೌರಾಯುಕ್ತರಾದ ರಾಯಪ್ಪ.
ನಗರಸಭೆಯಿಂದ ಬೀದಿನಾಯಿಗಳ ಹಾವಳಿ ತಡೆಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆ ಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎನ್ನುತ್ತಾರೆ ಅವರು.
‘ಕಾಪುವಿನಲ್ಲೂ ಶ್ವಾನಗಳ ಕಿರಿಕಿರಿ’: ಕಾಪು ತಾಲ್ಲೂಕಿನಲ್ಲಿ 2 ವರ್ಷಗಳಿಂದ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿಲ್ಲ. ಪರಿಣಾಮ ಸಾರ್ವಜನಿಕರು ನಿತ್ಯ ಭೀತಿಯಲ್ಲಿ ಓಡಾಡಬೇಕಾಗಿದೆ. ಹೆದ್ದಾರಿ, ಮುಖ್ಯರಸ್ತೆ, ಒಳ ರಸ್ತೆಗಳಲ್ಲಿ ಬೀದಿ ನಾಯಿಗಳು ಜನರ ಮೇಲೆ ಎರಗುತ್ತಿವೆ. ಕೆಲವು ಪ್ರದೇಶಗಳಿಗೆ ಏಕಾಂಗಿಯಾಗಿ ತೆರಳಲು ಹೆದರುವಂತಹ ಪರಿಸ್ಥಿತಿ ಇದೆ.
ಬೀದಿ ನಾಯಿಗಳಿಂದ ಹೆಚ್ಚು ತೊಂದರೆಗೆ ಸಿಲುಕುತ್ತಿರುವವರು ದ್ವಿಚಕ್ರ ವಾಹನ ಸವಾರರು. ರಸ್ತೆಯ ಮೂಲೆಯಿಂದ ಏಕಾಏಕಿ ದಾಳಿಗೆ ಮುಂದಾಗುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಹಲವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.
ಪ್ರತಿ ಗ್ರಾಮ ಸಭೆಗಳಲ್ಲಿಯೂ ಬೀದಿನಾಯಿ ಹಾವಳಿ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಸಲ್ಲಿಕೆಯಾಗುತ್ತಿದ್ದರೂ ಸ್ಥಳೀಯ ಆಡಳಿತದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಾಯಿಗಳನ್ನು ಹಿಡಿಯುವ ಹಾಗೂ ಸಂತಾನ ಹರಣ ಚಿಕಿತ್ಸೆ ಮಾಡುವ ಬೆರಳೆಣಿಕೆ ಏಜೆನ್ಸಿಗಳಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯ ಆಡಳಿತದ ಅಧಿಕಾರಿಗಳು.
ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮೇಲಿರುವಷ್ಟೆ ಹೊಣೆಗಾರಿಕೆ ಸಾರ್ವಜನಿಕರ ಮೇಲೂ ಇದೆ. ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸಲು ಜನರ ನಡವಳಿಕೆಯೂ ಕಾರಣ. ಶೋಕಿಗಾಗಿ ನಾಯಿಗಳನ್ನು ಸಾಕುವ ಕೆಲವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ.
ಮನೆಯಲ್ಲಿ ನಾಯಿ ಮರಿ ಹಾಕಿದರೆ ಗಂಡು ಮರಿಯನ್ನಿಟ್ಟುಕೊಂಡು ಉಳಿದ ಹೆಣ್ಣು ಮರಿಗಳನ್ನು ಬೀದಿಗೆ ಬಿಡಲಾಗುತ್ತಿದೆ. ಸಾಕು ನಾಯಿಗಳಿಗೂ ಮಾಲೀಕರು ಕಡ್ಡಾಯವಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಸಬೇಕು. ಹಾಗಾದಾಗ, ಮಾತ್ರ ಬೀದಿ ನಾಯಿಗಳ ಹಾವಳಿಗೆ ತಕ್ಕ ಮಟ್ಟಿನ ಪರಿಹಾರ ಸಿಗಬಹುದು ಎನ್ನುತ್ತಾರೆ ಅಧಿಕಾರಿಗಳು.
ಕೋಳಿ, ಕುರಿ ಮಾಂಸದಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಹಾಗೂ ನಿತ್ಯ ಮನೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ರಸ್ತೆ ಬದಿ ಎಸೆಯುತ್ತಿರುವುದು ಬೀದಿನಾಯಿಗಳ ಸಂಖ್ಯೆ ಹಾಗೂ ಹಾವಳಿ ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಕಾರ್ಕಳದಲ್ಲಿ ಅನಿಯಂತ್ರಿತ ನಾಯಿಗಳು: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಬಸ್ ನಿಲ್ದಾಣ, ಅನಂತಶಯನ, ಪೆರ್ವಾಜೆ ಶಾಲೆಯ ಸಮೀಪ, ತೆಳ್ಳಾರು ರಸ್ತೆ, ಕರಿಯ ಕಲ್ಲು ಡಂಪಿಂಗ್ ಯಾರ್ಡ್ ಪ್ರದೇಶ, ಮಂಗಳೂರು ರಸ್ತೆ, ಗಾಂಧಿ ಮೈದಾನದ ಬಳಿ ನಾಯಿಗಳು ಹಿಂಡು ಹಿಂಡಾಗಿ ಪಾದಚಾರಿಗಳಿಗೆ, ದ್ವಿಚಕ್ರ ಸವಾರರಿಗೆ ಸಂಕಟವನ್ನು ನೀಡುತ್ತಿವೆ.
ಹೆಚ್ಚಾಗಿ ಮಹಿಳೆಯರು, ಶಾಲಾ ಮಕ್ಕಳು ಹಾಗೂ ಒಬ್ಬಂಟಿ ಪಾದಾಚಾರಿಗಳ ಮೇಲೆ ಏಕಾಏಕಿ ದಾಳಿಗೆ ಮುಂದಾಗುತ್ತಿದ್ದು ಭೀತಿ ಹುಟ್ಟಿಸಿದೆ. ನಾಯಿಗಳ ದಾಳಿ ಭೀತಿಯಿಂದ ಶಾಲಾ ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೆ ನಾಯಿಗಳು ಯಮ ಸ್ವರೂಪಿಯಾಗಿ ಕಾಡುತ್ತಿದೆ. ಈಚೆಗೆ ತೆಳ್ಳಾರು ರಸ್ತೆಯ ಆಸ್ಪತ್ರೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ನರ್ಸ್ ಮೇಲೆ ದಾಳಿಗಳು ಎರಗಲು ಯತ್ನಿಸಿದ್ದು ತಪ್ಪಿಸಿಕೊಳ್ಳಲು ಹೋಗಿ ನರ್ಸ್ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಬಂದಿದೆ.
ನಾಯಿಗಳ ತೊಂದರೆ ಕುರಿತು ಪುರಸಭೆ ಆಡಳಿತಕ್ಕೆ ದೂರು ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ನಿಯಮಗಳು ಕಠಿಣವಾಗಿರುವುದರಿಂದ ಈಗಾಗಲೇ ಟೆಂಡರ್ ಕರೆಯಲಾಗಿದ್ದರೂ ಯಾರೂ ಅರ್ಜಿಯನ್ನು ಹಾಕುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಪುರಸಭೆ ಅಧಿಕಾರಿಗಳು.
ಬೀದಿ ನಾಯಿಗಳ ಕಿರಿಕಿರಿ ತಡೆಗೆ ಪುರಸಭೆಯಲ್ಲಿ ಹಲವು ಬಾರಿ ಸಭೆ ನಡೆಸಿದ್ದು ಶೀಘ್ರ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎನ್ನುತ್ತಾರೆ ಪುರಸಭೆಯ ಆರೋಗ್ಯಾಧಿಕಾರಿ ಲೈಲಾ ಥಾಮಸ್.
ಬ್ರಹ್ಮಾವರ ವರದಿ: ಬ್ರಹ್ಮಾವರ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಪಂಚಾಯಿತಿಗಳ ಗ್ರಾಮ ಸಭೆಯಲ್ಲಿ ಬೀದಿ ನಾಯಿಗಳ ಕಾಟದ ಬಗ್ಗೆ ಗ್ರಾಮಸ್ಥರು ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪಂಚಾಯಿತಿ ಮಟ್ಟದಲ್ಲಿ ಸಂತಾನ ನಿಯಂತ್ರಣ ಕ್ರಮ ನಡೆಯುತ್ತಿದ್ದರೂ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ.
ಬೀದಿ ನಾಯಿಗಳ ಕಾಟದಿಂದ ಪರಿಸರದಲ್ಲಿ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಬಿದ್ದು, ಕೈ ಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿರುವ ಘಟನೆಗಳು ನಡೆದಿದೆ. ಕೋಟ ವ್ಯಾಪ್ತಿಯಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆ ಕಳೆದ ವರ್ಷ ನಡೆದಿತ್ತು. ಈ ಬಾರಿ ಸಿಬ್ಬಂದಿ ಕೊರತೆಯಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಸಹಕಾರ: ಅಬ್ದುಲ್ ಹಮೀದ್ ಪಡುಬಿದ್ರಿ, ವಾಸುದೇವ್ ಭಟ್, ಶೇಷಗಿರಿ ಭಟ್, ಸುಕುಮಾರ್ ಮುನಿಯಾಲು
ಆಹಾರಕ್ಕಾಗಿ ಅಲೆಯುವ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ಏಕಾಏಕಿ ಎರಗಿ ದಾಳಿ ಚರ್ಮರೋಗ, ಬೊಜ್ಜಿನಿಂದ ಬಳಲುತ್ತಿರುವ ಶ್ವಾನಗಳು
ಅಪಘಾತಕ್ಕೆ ತುತ್ತಾದ ರೋಗಗಳಿಂದ ನರಳುತ್ತಿರುವ ನಾಯಿಗಳಿಗೆ ಚಿಕಿತ್ಸೆ ನೀಡಲು ಆರೈಕೆ ಮಾಡಲು ಸೂಕ್ತ ವ್ಯವಸ್ತೆ ಜಿಲ್ಲೆಯಲ್ಲಿಲ್ಲ. ಬಿಡಾಡಿ ದನ ಪ್ರಾಣಿಗಳ ಆರೈಕೆಗೆ ಚಿಕಿತ್ಸೆಗೆ ಪ್ರತ್ಯೇಕ ಕೇಂದ್ರದ ಅವಶ್ಯಕತೆ ಇದೆ –ರಕ್ಷಿತ್ ಪ್ರಾಣಿ ಪ್ರಿಯ
ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ವೆಚ್ಚ ವರ್ಷ;ಸಂತಾನ ಹರಣ;ವೆಚ್ಚ(ಲಕ್ಷಗಳಲ್ಲಿ) 2019–20;753;1003000 2020–21;961;1279850 2022–23;1002650
ಉಡುಪಿ ಜಿಲ್ಲೆಯಲ್ಲಿರುವ ಶ್ವಾನಗಳ ಸಂಖ್ಯೆ;118865 ಪ್ರತಿವರ್ಷ ನಾಯಿಗಳ ಕಡಿತ ಪ್ರಕರಣ;10000 ಪ್ರಸಕ್ತ ವರ್ಷ ಹಿಡಿದ ಬೀದಿ ನಾಯಿಗಳ ಸಂಖ್ಯೆ;478 ಹೆಣ್ಣು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ;277 ಗಂಡು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ;170 ರೇಬಿಸ್ ನಿರೋಧಕ ಚುಚ್ಚುಮದ್ದು ಹಾಕಿರುವುದು;592 ಇಲಾಖೆಯಲ್ಲಿ ಲಭ್ಯವಿರುವ ರೇಬಿಸ್ ನಿರೋಧಕ ಚುಚ್ಚುಮದ್ದು;20000
ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಕಾರ್ಯ ಯೋಜನೆಯನ್ನು ಸಿದ್ಧಸಲಾಗುತ್ತಿದ್ದು ಸಮಿತಿಯ ಸಭೆ ಕರೆದು ಚರ್ಚಿಸಲಾಗಿದೆ. ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಏಜೆನ್ಸಿಗೆ ಟೆಂಡರ್ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ರೇಬಿಸ್ ಲಸಿಕೆಯನ್ನು ಬೀದಿನಾಯಿಗಳಿಗೆ ಹಾಕಲಾಗುತ್ತಿದೆ. ಯಡ್ಮಡ್ಕ ಸದಾಶಿವ ಸೇರ್ವೆಗಾರ್ ಹೆಬ್ರಿ ಗ್ರಾಮ ಪಂಚಾಯತಿ ಪಿಡಿಒ
ಬೀದಿ ನಾಯಿಗಳ ಉಪಟಳ ತಡೆಗೆ ಸಂತಾಹ ಹರಣ ಚಿಕಿತ್ಸೆಗೆ ಹಾಗೂ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಲು ನಗರಸಭೆ ಪ್ರತಿವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಅದರಂತೆ 2022–23ನೇ ಸಾಲಿನಲ್ಲಿ ಆಸ್ರಾ ಸಂಸ್ಥೆಗೆ ₹10 ಲಕ್ಷ ವೆಚ್ಚದಲ್ಲಿ ಟೆಂಡರ್ ವಹಿಸಿದ್ದು 478 ನಾಯಿಗಳನ್ನು ಹಿಡಿಸಲಾಗಿದೆ. 447 ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸಲಾಗಿದೆ. 592 ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ಹಾಕಲಾಗಿದೆ. ರಾಯಪ್ಪ ನಗರಸಭೆ ಪೌರಾಯುಕ್ತರು
‘20000 ರೇಬಿಸ್ ನಿರೋಧಕ ಲಸಿಕೆ ಲಭ್ಯ’ ನಾಯಿಗಳನ್ನು ಹಿಡಿಸಿ ಸಂತಾನ ಹರಣ ಚಿಕಿತ್ಸೆ ನೀಡಬೇಕಾಗಿರುವುದು ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಪಶುಸಂಗೋಪನಾ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಕಾರಣ ಬೀದಿನಾಯಿಗಳ ಹಾವಳಿ ತಡೆಯಲು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ವಾನಗಳಿಂದ ರೇಬಿಸ್ ರೋಗ ಹರಡದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು 20000 ರೇಬಿಸ್ ನಿರೋಧಕ ಲಸಿಕೆಗಳನ್ನು ದಾಸ್ತಾನಿರಿಸಿಕೊಳ್ಳಲಾಗಿದ್ದು ಇಲಾಖೆಯ ಸಿಬ್ಬಂದಿಯ ಮೂಲಕ ಬೀದಿ ನಾಯಿಗಳಿಗೆ ಕೊಡಲಾಗುತ್ತಿದೆ. ಡಾ.ಶಂಕರ್ ಶೆಟ್ಟಿ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ
‘ಬೀದಿ ನಾಯಿಗಳಿಗೆ ಚಿಕಿತ್ಸೆ ಕೊಡಿ’ ಉಡುಪಿ ನಗರ ವ್ಯಾಪ್ತಿಯ ಅಲ್ಲಲ್ಲಿ ಬೀದಿ ನಾಯಿಗಳು ಚರ್ಮರೋಗದಿಂದ ಬಳಲುತ್ತಿರುವುದು ಕಂಡುಬಂದಿದೆ. ಮೈಮೇಲಿರುವ ಕೂದಲು ಸಂಪೂರ್ಣವಾಗಿ ಉದುರಿ ಚರ್ಮ ಕೆಂಪು ಬಣ್ಣಕ್ಕೆ ತಿರುಗಿರುವುದು ಕಜ್ಜಿ ಮಾದರಿ ಗಾಯಗಳು ಕಾಣಿಸಿಕೊಳ್ಳುತ್ತಿವೆ. ನಾಯಿಯಿಂದ ನಾಯಿಗೆ ರೋಗ ಹರಡುವ ಭೀತಿ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಚಿಕಿತ್ಸೆ ಕೊಡಿಸಬೇಕು. ಸಂತಾನ ಹರಣ ಚಿಕಿತ್ಸೆಗೆ ಒಳಗಾದ ನಾಯಿಗಳು ವಿಪರೀತ ಬೊಜ್ಜಿನಿಂದ ನರಳುತ್ತಿದ್ದು ಈ ಬಗ್ಗೆ ಗಮನ ಹರಿಸಬೇಕು ಎನ್ನುತ್ತಾರೆ ಶ್ವಾನಪ್ರಿಯರಾದ ಚೇತನ್ ರಾಜ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.