ಮಂಗಳವಾರ, ನವೆಂಬರ್ 19, 2019
23 °C
ಪ್ರಯಾಣಿಕರಿಗೆ ಅನುಕೂಲ

ಕೆಎಸ್‌ಆರ್‌ಟಿಸಿ: ಉಡುಪಿ ಟು ಶಿವಮೊಗ್ಗ ಮುಂಗಡ ಬುಕ್ಕಿಂಗ್‌

Published:
Updated:
Prajavani

ಉಡುಪಿ: ಶಿವಮೊಗ್ಗ ಹಾಗೂ ಉಡುಪಿ ಮಧ್ಯೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಮುಂಗಡ ಟಿಕೆಟ್‌ ಬುಕ್ಕಿಂಗ್ ಸೌಲಭ್ಯ ಕಲ್ಪಿಸಿದೆ. ಕರಾವಳಿಯಿಂದ ಮಲೆನಾಡಿಗೆ ಹೋಗುವ, ಮಲೆನಾಡಿನಿಂದ ಕರಾವಳಿಗೆ ಬರುವ ಪ್ರಯಾಣಿಕರು ಇನ್ಮುಂದೆ ಮೊಬೈಲ್‌ನಲ್ಲಿಯೇ ಟಿಕೆಟ್‌ ಕಾಯ್ದಿರಿಸಿ ಪ್ರಯಾಣ ಮಾಡಬಹುದು.

ಉಡುಪಿಯಿಂದ ಶಿವಮೊಗ್ಗಕ್ಕೆ (ಆಗುಂಬೆ–ತೀರ್ಥಹಳ್ಳಿ ಮಾರ್ಗ) ತೆರಳುವ ಸಾರಿಗೆ ಬಸ್‌ಗಳಿಗೆ (ಎಕ್ಸ್‌ಪ್ರೆಸ್‌) ಈಗಾಗಲೇ ಬುಕ್ಕಿಂಗ್ ಸೌಲಭ್ಯ ಶುರುವಾಗಿದೆ. ಒಂದೆರಡು ದಿನಗಳಲ್ಲಿ ಶಿವಮೊಗ್ಗದಿಂದ ಉಡುಪಿಗೆ ಬರುವ ಬಸ್‌ಗಳಲ್ಲೂ ಆರಂಭವಾಗಲಿದೆ ಎಂದು ಉಡುಪಿ ಡಿಪೊ ವ್ಯವಸ್ಥಾಪಕರಾದ ಅಲ್ತಾರು ಉದಯಶೆಟ್ಟಿ ಮಾಹಿತಿ ನೀಡಿದರು.

ಈ ಹಿಂದೆ ಎಕ್ಸ್‌ಪ್ರೆಸ್‌ ಸಾರಿಗೆ ಬಸ್‌ಗಳಿಗೆ ಟಿಕೆಟ್‌ ಬುಕ್ಕಿಂಗ್ ಸೌಲಭ್ಯ ಇರಲಿಲ್ಲ. ಕೇವಲ ರಾಜಹಂಸ, ಸ್ಲೀಪರ್ ಬಸ್‌ಗಳಿಗೆ ಮಾತ್ರ ಸೌಲಭ್ಯವಿತ್ತು. ಈಗ ಸಾಮಾನ್ಯ ಸಾರಿಗೆಗೂ ವಿಸ್ತರಿಸಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರೋಗಿಗಳಿಗೆ ಅನುಕೂಲ: ಮಣಿಪಾಲದಲ್ಲಿರುವ ಕಸ್ತೂರಬಾ ಆಸ್ಪತ್ರೆಗೆ (ಕೆಎಂಸಿ) ಶಿವಮೊಗ್ಗದಿಂದ ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಟಿಕೆಟ್‌ ಬುಕ್ಕಿಂಗ್ ವ್ಯವಸ್ಥೆ ಇರಲಿಲ್ಲವಾದ್ದರಿಂದ ರೋಗಿಗಳಿಗೆ ಹಾಗೂ ಸಂಬಂಧಿಗಳಿಗೆ ಸಮಸ್ಯೆಯಾಗಿತ್ತು. 

ಕೆಲವು ಸಲ ರೋಗಿಗಳಿಗೆ ಅಗತ್ಯವಾದ ಕಡೆ ಆಸನಗಳು ಸಿಗುತ್ತಿರಲಿಲ್ಲ. ಸಂಬಂಧಿಗಳು ಒಂದೆಡೆ, ರೋಗಿಗಳು ಮತ್ತೊಂದೆಡೆ ಕೂರಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಈಗ ಅಂತಹ ಸಮಸ್ಯೆಗಳು ಇರುವುದಿಲ್ಲ. ಅಗತ್ಯದ ಆಸನಗಳನ್ನು ಕಾಯ್ದಿರಿಸಿ, ರೋಗಿಗಳು ಸಂಬಂಧಿಗಳು ಪಕ್ಕದಲ್ಲಿಯೇ ಕುಳಿತು ಬರಬಹುದು.

ಆಸ್ಪತ್ರೆಗೆ ಬರುವ ದಿನ, ಇಲ್ಲಿಂದ ಹೊರಡುವ ದಿನ ಖಚಿತವಾಗಿ ತಿಳಿದರೆ ಟಿಕೆಟ್‌ ಕಾಯ್ದಿರಿಸಿ ನಿಶ್ಚಿಂತೆಯಿಂದ ಪ್ರಯಾಣಿಸಬಹುದು. ಇದರಿಂದ ಹಣ ಹಾಗೂ ಸಮಯ ಉಳಿತಾಯವಾಗಲಿದೆ ಎಂದು ಉದಯಶೆಟ್ಟಿ ವಿವರ ನೀಡಿದರು.

ಮಲೆನಾಡಿನಿಂದ ಕರಾವಳಿಗೆ ಬಂದು ನೆಲೆಸಿರುವವರ ಸಂಖ್ಯೆ ಹೆಚ್ಚಿದೆ. ಸರ್ಕಾರಿ ಇಲಾಖೆಗಳಲ್ಲಿ ಶಿವಮೊಗ್ಗ ಮೂಲದ ನೂರಾರು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉದ್ಯಮದಲ್ಲಿ ತೊಡಗಿಸಿಕೊಂಡವರು, ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆಲ್ಲ ಟಿಕೆಟ್‌ ಬುಕ್ಕಿಂಗ್ ಸೌಲಭ್ಯ ನೆರವಾಗಲಿದೆ ಎಂದರು.

ಉಡುಪಿ ಪ್ರಮುಖ ಪ್ರವಾಸಿತಾಣವಾಗಿದ್ದು, ಬೇಸಗೆ, ದಸರಾ ಸೇರಿದಂತೆ ಸಾಲು ರಜೆಗಳು ಬಂದಾಗ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ಬಸ್‌ಗಳ ಅಭಾವ ಎದುರಾಗುತ್ತಿತ್ತು. ಮೊದಲೇ ಪ್ರಯಾಣದ ಸಿದ್ಧತೆ ಮಾಡಿಕೊಂಡು ಟಿಕೆಟ್‌ ಕಾಯ್ದಿರಿಸಿದರೆ ಕುಟುಂಬ ಸಮೇತ ರಜೆಯ ಮೋಜು ಸವಿಯಬಹುದು ಎಂದರು.

ಪ್ರತಿದಿನ 21 ಬಸ್‌ಗಳ ಸಂಚಾರ: ಮಂಗಳೂರು ವಿಭಾಗ, ಉಡುಪಿ ಘಟಕದಿಂದ ಆಗುಂಬೆ ಮಾರ್ಗವಾಗಿ ಶಿವಮೊಗ್ಗಕ್ಕೆ ಮತ್ತು ಶಿವಮೊಗ್ಗದಿಂದ ಆಗುಂಬೆ ಮಾರ್ಗವಾಗಿ ಮಣಿಪಾಲ, ಉಡುಪಿಗೆ ಪ್ರತಿದಿನ 10 ಕರ್ನಾಟಕ ಸಾರಿಗೆ ಬಸ್‌ಗಳು ಸಂಚರಿಸುತ್ತವೆ (30 ಆಸನಗಳ ಬಸ್‌). ಈ ಬಸ್‌ಗಳಿಗೆ ಮುಂಗಡ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯವಿದೆ. ಕುಂದಾಪುರ, ಸಿದ್ದಾಪುರ, ಮಾಸ್ತಿಕಟ್ಟೆ ಮಾರ್ಗವಾಗಿ 11 ಬಸ್‌ಗಳು ಉಡುಪಿ–ಶಿವಮೊಗ್ಗ ಮಧ್ಯೆ ಸಂಚರಿಸುತ್ತವೆ ಎಂದು ಡಿಪೊ ಮ್ಯಾನೆಜರ್ ಉದಯಶೆಟ್ಟಿ ಮಾಹಿತಿ ನೀಡಿದರು.

ಉಡುಪಿ ಟು ಶಿವಮೊಗ್ಗ ಬಸ್‌ ವೇಳಾಪಟ್ಟಿ

ಬೆಳಿಗ್ಗೆ 7, 7.15, 8.10, 9.10, 10.10

ಮಧ್ಯಾಹ್ನ 1.25, 3.15, 3.55, 4.45, 5.05

ಶಿವಮೊಗ್ಗ ಟು ಉಡುಪಿ ಬಸ್‌ ವೇಳಾಪಟ್ಟಿ

ಬೆಳಿಗ್ಗೆ 3.15, 5, 6, 6.40, 7.30

ಮಧ್ಯಾಹ್ನ 12.20, 1.50, 3, 3.30, 4.10

ಪ್ರತಿಕ್ರಿಯಿಸಿ (+)