ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗತ್ತಲೆಯಲ್ಲಿ ಮುಳುಗಿದ ಕೃಷ್ಣನೂರು ‘ಉಡುಪಿ’

ರಾತ್ರಿ ಹೊತ್ತು ಉರಿಯದ ಬೀದಿ ದೀಪಗಳು; ಸಾರ್ವಜನಿಕರ ಗೋಳು
Last Updated 21 ಜುಲೈ 2019, 20:00 IST
ಅಕ್ಷರ ಗಾತ್ರ

ಸೂರ್ಯ ಸಂಜೆ ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಂತೆ ಉಡುಪಿ ನಗರದ ಬಹುತೇಕ ಬಡಾವಣೆಗಳು ಕೂಡ ಕತ್ತಲಲ್ಲಿ ಮುಳುಗುತ್ತವೆ. ಮತ್ತೆ ಮರುದಿನ ಸೂರ್ಯ ಉದಯಿಸಿದಾಗಲೇ ಈ ಬಡಾವಣೆಗಳಿಗೆ ಬೆಳಕು ಹರಿಯುವುದು. ಅಲ್ಲಿಯವರೆಗೂ ಕತ್ತಲಕೂಪದಲ್ಲಿ ನರಳಬೇಕು.

ಹಲವು ತಿಂಗಳುಗಳಿಂದ ಉಡುಪಿ ನಗರದಲ್ಲಿ ಬೀದಿ ದೀಪಗಳು ಕೆಟ್ಟುನಿಂತಿರುವ ಪರಿಣಾಮ ನಗರ ಕಗ್ಗತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿಯಾದರೆ, ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗೆ ಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, ಯಾವುದೇ ಭಾಗಕ್ಕೆ ಹೋದರೂ ಕೆಟ್ಟುನಿಂತಿರುವ ಬೆಳಕು ನೀಡದ ಬೀದಿ ದೀಪಗಳನ್ನು ಕಾಣಬಹುದು. ಅಷ್ಟರಮಟ್ಟಿಗೆ ಬೀದಿದೀಪಗಳ ಸಮಸ್ಯೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ಹೃದಯ ಭಾಗದಲ್ಲೇ ಕತ್ತಲು: ನಗರದ ಹೃದಯ ಭಾಗ ಎನಿಸಿಕೊಂಡಿರುವ ಸಿಟಿ ಬಸ್‌ ನಿಲ್ದಾಣ, ಸರ್ವೀಸ್ ಬಸ್‌ ನಿಲ್ದಾಣ, ಹೂವಿನ ಮಾರುಕಟ್ಟೆ ಪ್ರದೇಶ ರಾತ್ರಿಯಾಗುತ್ತದೆ ಕತ್ತಲ್ಲಲಿ ಮುಳುಗುತ್ತದೆ. ಈ ಭಾಗಗಳಲ್ಲಿರುವ ಬಹುತೇಕ ಬೀದಿದೀಪಗಳು ರಾತ್ರಿಯ ಹೊತ್ತು ಉರಿಯುವುದಿಲ್ಲ. ಹೆಸರಿಗಷ್ಟೇ ಬೀದಿದೀಪಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡು ನಿಂತಿವೆ.

ಪ್ರತಿನಿತ್ಯ ಈ ಭಾಗದಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಹೊರ ಜಿಲ್ಲೆ ಸೇರಿದಂತೆ ನಗರದ ಎಲ್ಲ ವಾರ್ಡ್‌
ಗಳಿಗೂ ಸಂಪರ್ಕ ಕಲ್ಪಿಸುವ ಬಸ್‌ಗಳು ಇದೇ ಭಾಗದಿಂದ ಸಾಗಬೇಕು. ಬೆಳಿಗ್ಗೆ ಅನಾಯಾಸವಾಗಿ ಓಡಾಡುವ ಬಸ್‌ಗಳು ರಾತ್ರಿಹೊತ್ತು ಹರಸಾಹಸ ಪಡಬೇಕು. ಹೆಡ್‌ಲೈಟ್‌ ಕೈಕೊಟ್ಟರೆ ಅಪಘಾತ ಖಚಿತ ಎನ್ನುತ್ತಾರೆ ಬಸ್‌ ಮಾಲೀಕರು.

ಕುಡುಕರ ತಾಣ: ನಗರದ ಅತಿ ಜನಸಂದಣಿ ಭಾಗದಲ್ಲೇ ಬೀದಿ ದೀಪಗಳು ಕೆಟ್ಟಿರುವುದರಿಂದ ರಾತ್ರಿಯ ಹೊತ್ತು ಕುಡುಕರ ಹಾವಳಿ ಹೆಚ್ಚಾಗಿದೆ. ಕುಡಿದು ರಸ್ತೆಬದಿಯಲ್ಲಿಯೇ ಮಲಗಿರುತ್ತಾರೆ. ಇದರಿಂದ ಪಾದಚಾರಿಗಳಿಗೆ ಓಡಾಡಲು ಕಿರಿಕಿರಿಯಾಗುತ್ತಿದೆ ಎನ್ನುತ್ತಾರೆ ನಾಗರಿಕರಾದ ನಾಗೇಶ್‌.

ತೀರಾ ಕಿರಿದಾದ ರಸ್ತೆಗಳು, ಅಪಾಯಕಾರಿ ತಿರುವುಗಳಲ್ಲಿ ಬೀದಿ ದೀಪದ ಬೆಳಕು ಇಲ್ಲದಿರುವುದರಿಂದ ರಾತ್ರಿಯ ಹೊತ್ತು ಅಪಘಾತಗಳು ಸಾಮಾನ್ಯವಾಗಿವೆ ಎನ್ನುತ್ತಾರೆ ಹೂವಿನ ವ್ಯಾಪಾರಿ.

‍‍ಕತ್ತಲಲ್ಲಿ ಹೆದ್ದಾರಿ: ಮಲ್ಪೆ–ಮೊಳಕಾಲ್ಮೂರು ಹೆದ್ದಾರಿಯಲ್ಲಿರುವ ಬೀದಿ ದೀಪಗಳೂ ಕೆಟ್ಟಿದ್ದು, ರಾತ್ರಿಹೊತ್ತು ವಾಹನಗಳ ಸಂಚಾರ ದುಸ್ಥರವಾಗಿದೆ. ಕಲ್ಸಂಕದಿಂದ ಓಷನ್ ಪರ್ಲ್‌ ಹೋಟೆಲ್‌ವರೆಗೂ ಎರಡೂ ಬದಿಯ ರಸ್ತೆಯಲ್ಲಿರುವ ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಕೆಲವು ಉರಿದರೂ ಬೆಳಕು ರಸ್ತೆಯವರೆಗೂ ತಲುಪುತ್ತಿಲ್ಲ.

ಇನ್ನೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಡಿಯಾಳಿಯಿಂದ ಮಣಿಪಾಲದವರೆಗೂ ಪರಿಸ್ಥಿತಿ ಗಂಭೀರ
ವಾಗಿದೆ. ರಸ್ತೆಯ ಮಧ್ಯೆ ಇದ್ದ ವಿದ್ಯುತ್ ದೀಪಗಳನ್ನು ಕಿತ್ತುಹಾಕಲಾಗಿದ್ದು, ರಾತ್ರಿಯ ಹೊತ್ತಿ ದಾರಿ ಕಾಣದಷ್ಟು ಕತ್ತಲೆ ಆವರಿಸಿರುತ್ತದೆ.

ಫುಟ್‌ಪಾತ್ ಕೂಡ ಇಲ್ಲ. ಜತೆಗೆ, ಬೀದಿ ದೀಪಗಳು ಇಲ್ಲದಿರುವುದರಿಂದ ರಾತ್ರಿಯ ಹೊತ್ತು ಪಾದಚಾರಿಗಳು ಅಪಘಾತದ ಭಯದಲ್ಲೇ ಸಂಚಾರ ಮಾಡಬೇಕಾದ ದುಃಸ್ಥಿತಿ ಎದುರಾಗಿದೆ.

ನಾಲ್ಕು ರಸ್ತೆಗಳು ಕೂಡುವ ಇಂದ್ರಾಳಿ ರೈಲ್ವೆ ನಿಲ್ದಾಣ ವೃತ್ತದಲ್ಲಿರುವ ಬೀದಿದೀಪಗಳು ಕೆಟ್ಟಿದ್ದು, ಇಲ್ಲಿ ರಾತ್ರಿಯ ಹೊತ್ತು ವಾಹನಗಳನ್ನು ಓಡಿಸುವುದೇ ದೊಡ್ಡ ಸವಾಲು. ರೈಲು ನಿಲ್ದಾಣದಿಂದ ಬರುವ, ಮಣಿಪಾಲದಿಂದ ಉಡುಪಿಗೆ ತೆರಳುವ, ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ಹಾಗೂ ಇಂದ್ರಾಳಿ ಕಡೆಯಿಂದ ಬರುವ ಎಲ್ಲ ವಾಹನಗಳು ಇದೇ ವೃತ್ತವನ್ನು ಹಾದುಹೋಗಬೇಕಾಗಿದ್ದು, ರಾತ್ರಿಯ ಹೊತ್ತು ಬೀದಿದೀಪಗಳಿಲ್ಲದೆ ಬಹಳ ಸಮಸ್ಯೆಯಾಗಿದೆ ಎನ್ನುತ್ತಾರೆ ವಾಹನ ಸವಾರರು.

ವರ್ಷ ಕಳೆದರೂ ಕಾಮಗಾರಿ ಮುಗಿಯುವುದಿಲ್ಲ. ಅಲ್ಲಿಯವರೆಗೂ ಬೀದಿದೀಪಗಳನ್ನು ಅಳವಡಿಸದಿದ್ದರೆ ಹೇಗೆ ? ತಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಇಂದ್ರಾಳಿಯ ನಿವಾಸಿ ಧನಂಜಯ್‌.

ರೈಲ್ವೆ ನಿಲ್ದಾಣ ರಸ್ತೆಯೂ ಕತ್ತಲು: ರೈಲು ನಿಲ್ದಾಣಕ್ಕೆ ಸಾಗುವ ರಸ್ತೆಯಲ್ಲೂ ಸರಿಯಾಗಿ ಬೀದಿದೀಪಗಳು ಉರಿಯುತ್ತಿಲ್ಲ. ಮುಖ್ಯರಸ್ತೆಯಿಂದ ರೈಲು ನಿಲ್ದಾಣಕ್ಕೆ ಸಾಗುವ 500 ಮೀಟರ್‌ ರಸ್ತೆಯಲ್ಲಿ ಕಗ್ಗತ್ತಲು ತುಂಬಿಕೊಂಡಿದೆ. ರಸ್ತೆ ತೀರಾ ಕಿರಿದಾಗಿದ್ದು, ಅಪಾಯಕಾರಿ ತಿರುವುಗಳಿಂದ ಕೂಡಿದೆ. ಇದರಿಂದ ರಾತ್ರಿಯ ಹೊತ್ತು ಪ್ರಯಾಣಿಕರಿಗೆ ರೈಲು ನಿಲ್ದಾಣಕ್ಕೆ ತೆರಳಲು, ಹಾಗೂ ನಿಲ್ದಾಣದಿಂದ ನಗರಕ್ಕೆ ಬರಲು ಅಡ್ಡಿಯಾಗಿದೆ.

ಹೊತ್ತಿಕೊಳ್ಳದ ಹೈಮಾಸ್ಟ್‌ ದೀಪಗಳು: ನಗರದ ಪ್ರಮುಖ ವೃತ್ತಗಳಲ್ಲಿರುವ ಹೈಮಾಸ್ಟ್‌ ದೀಪಗಳೂ ಬೆಳಗುತ್ತಿಲ್ಲ.ಜನವಸತಿ ಪ್ರದೇಶಗಳಾದ ಬನ್ನಂಜೆ, ಅಜ್ಜರಕಾಡು, ಮೂಡ ನಿಡಂಬೂರು, ಇಂದ್ರಾಳಿ, ಸಗ್ರಿ, ಬೈಲೂರು, ಬೈಲಕೆರೆ, ಅಂಬಲಪಾಡಿ, ಕಿನ್ನಿಮೂಲ್ಕಿ ಭಾಗಗಳಲ್ಲೂ ಬೀದಿದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಕಳವು ಹೆಚ್ಚಾಗುವ ಆತಂಕ: ಜನವಸತಿ ಪ್ರದೇಶಗಳಲ್ಲಿ ಬೀದಿದೀಪಗಳು ಕೆಟ್ಟಿರುವುದರಿಂದ ರಾತ್ರಿಯಾಗುತ್ತಿದ್ದಂತೆ ಮಹಿಳೆಯರು ಮಕ್ಕಳು ಹೊರಗೆ ಬರಲು ಭಯಪಡುತ್ತಿದ್ದಾರೆ. ವಸತಿ ವಿರಳ ಪ್ರದೇಶದಲ್ಲಿ ಬೀದಿದೀಪಗಳು ದುರಸ್ಥಿಯಲ್ಲಿರುವುದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ತಕ್ಷಣ ನಗರಾಡಳಿತ ಬೀದಿದೀಪಗಳನ್ನು ದುರಸ್ಥಿಗೆ ಕ್ರಮ ತೆಗೆದುಕೊಳ್ಳದಿದ್ದರೆ ನಗರದಲ್ಲಿ ಮನೆಗಳವು, ಸರಗಳವು ಪ್ರಕರಣಗಳು ಹೆಚ್ಚಾಗುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯರು.

ಕುಡುಕರ ಹಾವಳಿ: ಅನೈತಿಕ ಚಟುವಟಿಕೆ ತಾಣ
ಅಜ್ಜರಕಾಡಿನ ಭುಜಂಗ ಪಾರ್ಕ್‌ ಬಳಿ ಹಾಗೂ ಅಲ್ಲಿನ ಜನವಸತಿ ಪ್ರದೇಶದಲ್ಲೂ ಬೀದಿ ದೀಪಗಳು ದುರಸ್ಥಿಯಲ್ಲಿದ್ದು, ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿ ಕಾರಿನಲ್ಲಿ ಬರುವ ವ್ಯಕ್ತಿಗಳು ಕತ್ತಲಿನಲ್ಲಿ ಕಾರು ನಿಲ್ಲಿಸಿ, ಮದ್ಯಪಾನ ಮಾಡಿ ಬಾಟಲಿಗಳನ್ನು ಉದ್ಯಾನಕ್ಕೆ ಹಾಗೂ ಬಡಾವಣೆಯ ರಸ್ತೆ ಬದಿಗೆ ಎಸೆದು ಹೋಗುತ್ತಿದ್ದಾರೆ. ಜತೆಗೆ, ತೀರಾ ಕತ್ತಲು ಇರುವ ಪ್ರದೇಶಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT