ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ನೋಡಬನ್ನಿ ಸಾಲುಮರದ ತಿಮ್ಮಕ್ಕ ಉದ್ಯಾನ ಸೊಬಗ

ಕಣ್ಮನ ಸೆಳೆಯುವ ಮಣಿಪಾಲದ ತಿಮ್ಮಕ್ಕ ಟ್ರೀ ಪಾರ್ಕ್‌
Last Updated 4 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಉಡುಪಿ: ಜೀವನದ ಜಂಜಾಟಗಳಿಗೆ ಕಿರು ವಿರಾಮ ಹೇಳಿ ಪ್ರಕೃತಿಯೊಂದಿಗೆ ಬೆಸೆದುಕೊಳ್ಳಬೇಕು, ಅರಣ್ಯದೊಳಗೆ ಸುತ್ತಾಡಬೇಕು ಎಂಬ ತುಡಿತವಿದ್ದರೆ ಮಣಿಪಾಲ ಹೊರವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ಗೆ ಒಮ್ಮೆ ಭೇಟಿ ನೀಡಬಹುದು.

ಹಿರಿಯರು ಕಿರಿಯರೆನ್ನದೆ ಪ್ರತಿಯೊಬ್ಬರಿಗೂ ಮನರಂಜನೆಯ ಜತೆಗೆ ಅರಣ್ಯ, ವನ್ಯಜೀವಿ ಹಾಗೂ ಮತ್ಸ್ಯ ಸಂಪತ್ತಿನ ಮಾಹಿತಿ ಭಂಡಾರವೇ ಇಲ್ಲಿ ಸಿಗಲಿದೆ. ಸಾರ್ವಜನಿಕರ ಜೇಬಿಗೂ ಬಾರವಾಗದ, ಶುದ್ಧ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್‌, ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ಟ್ರೀಪಾರ್ಕ್‌ನಲ್ಲಿ ಕುಟುಂಬ ಸಮೇತರಾಗಿ ಒಂದರ್ಧದಿನ ನಿಶ್ಚಿಂತೆಯಾಗಿ ಕಾಲ ಕಳೆಯಬಹುದು.

ವಿಶೇಷತೆ ಏನು?

ಪ್ರಕೃತಿಯನ್ನು ಆಸ್ವಾದಿಸುವ ಹಾಗೂ ಅರಣ್ಯದೊಳಗೆ ಸಮಯ ಕಳೆಯಬೇಕು ಎಂದು ಹಂಬಲಿಸುವವರಿಗೆ ಟ್ರೀಪಾರ್ಕ್‌ ಸೂಕ್ತ ಆಯ್ಕೆ. ಉದ್ಯಾನ ಪ್ರವೇಶಿಸುತ್ತಿದ್ದಂತೆ ವೃಕ್ಷಮಾತೆ ಕೈಮುಗಿದು ಉದ್ಯಾನಕ್ಕೆ ಸ್ವಾಗತ ಕೋರುತ್ತಾಳೆ. ಸಮೀಪದಲ್ಲೇ ಉದ್ಯಾನದಲ್ಲಿ ಪಾಲಿಸಬೇಕಾದ ನಿಯಮಗಳ ಫಲಕ ಹಾಕಲಾಗಿದ್ದು, ಉದ್ಯಾನದ ಸ್ವಚ್ಛತೆ ಹಾಗೂ ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕಣ್ಣಾಡಿಸುವುದು ಅವಶ್ಯ.

ಸ್ವಲ್ಪ ಮುಂದಕ್ಕೆ ಸಾಗಿದರೆ ಸೆಲ್ಫಿ ಕಾರ್ನರ್ ಇದ್ದು, ಬೃಹತ್ ಪತಂಗದ ಮುಂದೆ ನಿಂತು, ಅರಣ್ಯ ರಕ್ಷಕನ ಪಕ್ಕದಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು. ಪಕ್ಕದಲ್ಲಿ ಮಕ್ಕಳಿಗೆ ಮುದ ನೀಡುವಂತಹ ಚಿಕ್ಕ ಕಾಂಕ್ರೀಟ್‌ ಉದ್ಯಾನವಿದೆ. ಬಸವನ ಹುಳು, ಆಮೆ, ಕಪ್ಪೆ, ಕ್ಯಾಟರ್‌ಪಿಲ್ಲರ್‌ ಸಿಮೆಂಟ್ ಶಿಲ್ಪಗಳು ಗಮನ ಸೆಳೆಯುತ್ತವೆ. ಉದ್ಯಾನದ ಅಲ್ಲಲ್ಲಿ ಮರದ ಉಯ್ಯಾಲೆಗಳನ್ನು ಹಾಕಲಾಗಿದ್ದು, ವಿಶ್ರಾಂತಿ ಪಡೆಯಬಹುದು.

ಪಕ್ಕದಲ್ಲೇ ಮಕ್ಕಳಿಗೆ ಅಡ್ವೆಂಚರ್ ಸ್ಪೋರ್ಟ್ಸ್‌ಗಳಿವೆ. ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿಕೊಂಡು ಆಟವಾಡಲು ಸಲಕರಣೆಗಳನ್ನು ನಿರ್ಮಾಣ ಮಾಡಲಾಗಿವೆ. ಜಾರುವ ರೋಪ್‌ ವೇಗಳು ಮಕ್ಕಳಿಗೆ ಮುದ ನೀಡುತ್ತವೆ. ಕರಾವಳಿಯ ಸಂಸ್ಕೃತಿ ಬಿಂಬಿಸುವ ಕಂಬಳದ ಶಿಲ್ಪಗಳು, ಬುಡಕಟ್ಟು ಜನರ ವೇಷಭೂಷಣ ಕಣ್ಮನ ಸೆಳೆಯುತ್ತವೆ.

ಅಪರೂದಪ ಮಾಹಿತಿ ಕಣಜ:

ಉದ್ಯಾನಕ್ಕೆ ಸಾಗುವ ಮಾರ್ಗದುದ್ದಕ್ಕೂ ವನ್ಯಜೀವಿಗಳ ಸಿಮೆಂಟ್‌ ಶಿಲ್ಪಗಳನ್ನು ನಿರ್ಮಿಸಲಾಗಿದ್ದು, ಪ್ರಾಣಿಗಳ ಪಕ್ಕದಲ್ಲೇ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ವನ್ಯಜೀವಿಗಳ ಪ್ರಬೇಧ, ಜೀವಿತಾವಧಿ, ಆಹಾರ ಕ್ರಮ ಹೀಗೆ ಸಮಗ್ರ ಮಾಹಿತಿ ಪಡೆಯಬಹುದು. ಅಂತರ ರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಪ್ರಾಣಿ, ಪಕ್ಷಿ, ಮರಗಳ ವಿವರ ಇದೆ. ಅಪರೂಪದ ಸಸ್ಯ ಪ್ರಬೇಧಗಳ ವಿವರ ಹಾಗೂ ಔಷಧ ಸಸ್ಯಗಳನ್ನು ಹೊಂದಿರುವ ಸಣ್ಣ ಉದ್ಯಾನವೂ ಇದೆ.

ಟ್ರೀಪಾರ್ಕ್‌ಗೆ ಹೇಗೆ ಹೋಗಬೇಕು...

ಉಡುಪಿಯಿಂದ ಮಣಿಪಾಲಕ್ಕೆ ತೆರಳುವವರು ಮಾಧವ ಕೃಪ ಶಾಲೆಯ ಬಳಿ ಬಲಕ್ಕೆ ತಿರುಗಿ ಸಾಗಿದರೆ ಸಾಲುಮರದ ತಿಮ್ಮಕ್ಕ ಟ್ರೀಪಾರ್ಕ್‌ಗೆ ಹೋಗಬಹುದು. ಮಣಿಪಾಲ ನಗರದಿಂದ ಸುಮಾರು ಐದು ಕಿ.ಮೀ ದೂರ ಸಾಗಿದರೆ ಅರಣ್ಯ ಪರಿಸರದ ನಡುವೆ ಟ್ರೀ ಪಾರ್ಕ್‌ ನಿರ್ಮಾಣವಾಗಿದೆ. ಟ್ರೀಪಾರ್ಕ್‌ಗೆ ಸಾಗುವ ದಾರಿಯುದ್ದಕ್ಕೂ ಮಾಹಿತಿ ಫಲಕಗಳಿರುವುದರಿಂದ ಅನಾಯಾಸವಾಗಿ ಉದ್ಯಾನವನ್ನು ಮುಟ್ಟಬಹುದು. ಉಡುಪಿಯಿಂದ 10 ಕಿ.ಮೀ ದೂರದಲ್ಲಿದೆ.

‘ಜೇಬಿಗೆ ಹೊರೆ ಇಲ್ಲ’

ನಗರದ ಕಿರಿಕಿರಿಯ ಜೀವನದಿಂದ ಮುಕ್ತಿ ಪಡೆದು ಪರಿಸರದೊಟ್ಟಿಗೆ ಕಾಲ ಕಳೆಯಲು ಮಣಿಪಾಲದ ಟ್ರೀಪಾರ್ಕ್ ಅತ್ಯುತ್ತಮ ಸ್ಥಳ. ಹುಟ್ಟುಹಬ್ಬ, ಸಭೆ ಸೇರಿದಂತೆ ಖಾಸಗಿ ಸಮಾರಂಭಗಳ ಆಯೋಜನೆಗೂ ಉದ್ಯಾನದಲ್ಲಿ ಸ್ಥಳಾವಕಾಶ ಲಭ್ಯವಿದೆ. ಆಲ್ಕೊಹಾಲ್ ಹೊರತುಪಡಿಸಿ, ಮನೆಯ ತಿನಿಸುಗಳನ್ನು ತಂದು ಸವಿಯಬಹುದು. ಅತಿ ಕಡಿಮೆ ವೆಚ್ಚದಲ್ಲಿ ಕುಟುಂಬವೊಂದು ಅರ್ಧದಿನ ಖುಷಿಯಾಗಿ ಕಳೆಯುವಂತಹ ಎಲ್ಲ ವ್ಯವಸ್ಥೆಗಳು ಟ್ರೀಪಾರ್ಕ್‌ನಲ್ಲಿವೆ. ವಯಸ್ಕರಿಗೆ ₹ 20 ಟಿಕೆಟ್ ದರವಿದ್ದು, ಮಕ್ಕಳಿಗೆ ಉಚಿತ ಪ್ರವೇಶವಿದೆ. ಉದ್ಯಾನದಲ್ಲಿ ಚಿಕ್ಕ ಫಾಲ್ಸ್ ಕೂಡ ಇದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.
– ಕ್ಲಿಫರ್ಡ್‌ ಲೋಬೊ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT