ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸಿಟಿವಿಟಿ ದರ ಇಳಿಕೆ: ಉಡುಪಿ ಅನ್‌ಲಾಕ್‌

ಸಂಜೆ 5ರವರೆಗೆ ಖರೀದಿಗೆ ಅವಕಾಶ: ಸಾರಿಗೆ ಸಂಚಾರ ಆರಂಭ
Last Updated 21 ಜೂನ್ 2021, 14:07 IST
ಅಕ್ಷರ ಗಾತ್ರ

ಉಡುಪಿ: ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯನ್ನು ಅನ್‌ಲಾಕ್‌ ಜಿಲ್ಲೆಗಳ ಪಟ್ಟಿಗೆ (ಮೊದಲ ಹಂತ) ಸೇರಿಸಿ ಆದೇಶ ಹೊರಡಿಸಿದೆ.

ಜಿಲ್ಲಾಡಳಿತ ಸರ್ಕಾರದ ಕೋವಿಡ್‌ ಹಾಗೂ ಲಾಕ್‌ಡೌನ್ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ನಿರ್ಬಂಧಗಳ ಪರಿಣಾಮಕಾರಿ ಅನುಷ್ಠಾನದಿಂದ ಕೋವಿಡ್ ಪ್ರಕರಣ ಇಳಿಕೆಯಾಗಿದ್ದು, ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ 5ರಷ್ಟಿದೆ. ಹಾಗಾಗಿ, ಸರ್ಕಾರ ಜಿಲ್ಲೆಯನ್ನು ಮೊದಲ ಹಂತಕ್ಕೆ ಸೇರಿಸಿದ್ದು, ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಸಡಿಲಿಕೆ ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸಂಜೆ 5ರವರೆಗೆ ಖರೀದಿಗೆ ಅವಕಾಶ:

ಅಗತ್ಯ ವಸ್ತುಗಳ ಖರೀದಿ ಸಮಯವನ್ನು ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಬಸ್‌ಗಳ ಸಂಚಾರಕ್ಕೆ ಅನುಮತಿ ಇದ್ದು, ಆಸನಗಳ ಸಾಮರ್ಥ್ಯದ ಶೇ 50 ಮಾತ್ರ ಭರ್ತಿ ಮಾಡಬೇಕು. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಸ್‌ಗಳಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ. ಎಲ್ಲ ಉತ್ಪಾದನಾ ಘಟಕಗಳು, ಕೈಗಾರಿಕಾ ಸಂಸ್ಥೆಗಳು, ಕೈಗಾರಿಕೆಗಳು ಸಾಮರ್ಥ್ಯದ ಶೇ 50 ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯ ನಿರ್ವಹಿಸಬಹುದು.

ಗಾರ್ಮೆಂಟ್ಸ್‌ಗಳು ಶೇ 30 ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲು ಅನುಮತಿ ಇದೆ. ಹವಾನಿಯಂತ್ರಣ ವ್ಯವಸ್ಥೆ ಚಾಲೂ ಮಾಡದೆ ಎಲ್ಲ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ತೆರೆಯಲು ಅನುಮತಿ ಇದೆ. ಎಸಿ ಹಾಕುವಂತಿಲ್ಲ. ಗ್ರಾಹಕರು ಕಡ್ಡಾಯ ಮಾಸ್ಕ್‌ ಧರಿಸಿರಬೇಕು, ಅಂತರ ಕಾಯ್ದುಕೊಳ್ಳಬೇಕು, ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡಬೇಕು, ಜನಜಂಗುಳಿ ಇರುವಂತಿಲ್ಲ. ಈ ನಿಯಮಗಳ ಉಲ್ಲಂಘನೆಯಾದರೆ ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಹೋಟೆಲ್‌, ರೆಸ್ಟೋರೆಂಟ್‌, ಬಾರ್ ಮತ್ತು ಕ್ಲಬ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಕುಳಿತು ಆಹಾರ ಸೇವಿಸಲು ಅವಕಾಶವಿದೆ. ಶೇ 50 ಸಾಮರ್ಥ್ಯದೊಂದಿಗೆ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ಇದೆ. ಹೊರಾಂಗಣ ಚಿತ್ರೀಕರಣ ಮಾಡಬಹುದು. ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಮಾಡಬಹುದು. ‌

ವಾಕಿಂಗ್, ಜಾಗಿಂಗ್‌ ಮಾಡುವವರು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ಉದ್ಯಾನವನ ಬಳಸಬಹುದು. ಗುಂಪು ಚಟುವಟಿಕೆಗಳಿಗೆ ನಿರ್ಬಂಧವಿದೆ. ಶೇ 50 ಸಾಮರ್ಥ್ಯದೊಂದಿಗೆ ಜಿಮ್‌ಗಳನ್ನು ತೆರೆಯಬಹುದು. ಗರಿಷ್ಠ ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿ ಮತ್ತು ಆಟೋ ಸಂಚರಿಸಬಹುದು.

ವೀಕ್ಷಕರಿಲ್ಲದೆ ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಬಹುದು. ಎಲ್ಲ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ 50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು. ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ 40 ಜನರಿಗೆ ಸೀಮಿತವಾಗಿ ಮಾಡಬಹುದು. ಪಾಸ್‌ ಪಡೆಯುವುದು ಕಡ್ಡಾಯ. ಶವಸಂಸ್ಕಾರಕ್ಕೆ ಗರಿಷ್ಠ 5 ಜನ ಮಾತ್ರ ಸೇರಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಆದೇಶ ಪಾಲಿಸದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT