ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 75ರ ಹರೆಯದಲ್ಲಿ ಪಿಎಚ್‌ಡಿ ಸಾಧನೆ ಮಾಡಿದ ಉಷಾ ಚಡಗ

Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ವಯಸ್ಸು 75 ವರ್ಷ. ಆದರೆ, ಜೀವನೋತ್ಸಾಹಕ್ಕೆ ಮುಪ್ಪು ಆವರಿಸಿಲ್ಲ. ಇಳಿ ವಯಸ್ಸಿನಲ್ಲೂ ಜ್ಞಾನದ ಹಸಿವೂ ನೀಗಿಲ್ಲ. ಹರೆಯದವರನ್ನೂ ನಾಚಿಸುವ ಉತ್ಸಾಹ ಹೊಂದಿರುವ ಉಡುಪಿಯ ಉಷಾ ಚಡಗ ಡಾಕ್ಟರೇಟ್ ಪದವಿ ಪಡೆಯುವ ಸಂಭ್ರಮದಲ್ಲಿದ್ದಾರೆ.

ಕೇರಳದ ತಿರುವನಂತಪುರದ ಸನಾತನ ಪಬ್ಲಿಕ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಉಷಾ ಚಡಗ ಸದ್ಯ ಉಡುಪಿಯ ಕನ್ನಾರ್ಪಾಡಿಯಲ್ಲಿ ಮಾಜಿ ಇಸ್ರೋ ವಿಜ್ಞಾನಿ ಪತಿ ಸಿ.ಆರ್.ಚಡಗ ಅವರೊಂದಿಗೆ ನೆಲೆಸಿದ್ದಾರೆ.

ನಿವೃತ್ತಿ ನಂತರ ಸಮಯ ವ್ಯರ್ಥ ಮಾಡದೆ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜಿನಲ್ಲಿ ಸಂಗೀತ ಹಾಗೂ ದ್ವೈತ ಸಿದ್ಧಾಂತದಲ್ಲಿ ವಿದ್ವತ್ ಪದವಿಯನ್ನೂ ಪಡೆದಿದ್ದಾರೆ.

ಇಷ್ಟಕ್ಕೆ ನೀಗದ ಉಷಾ ಚಡಗ ಅವರ ಜ್ಞಾನದ ಹಸಿವು ಪಿಎಚ್‌ಡಿ ಪದವಿ ಪಡೆಯುವವರೆಗೂ ಬಂದು ನಿಂತಿದೆ. ಮಧ್ವ ಸಿದ್ಧಾಂತದ ಬಗ್ಗೆ ಅತಿಯಾದ ಆಕರ್ಷಣೆ ಹೊಂದಿದ್ದ ಉಷಾ ಚಡಗ ‘ಶ್ರೀಮಧ್ವಾಚಾರ್ಯ ಶೀರ್ಷಿಕೆ’ಯಡಿ ‘ಕ್ರಿಟಿಕಲ್‌ ಅನಾಲಿಸಿಸ್‌ ಆಫ್‌ ಶ್ರೀ ಮಧ್ವಾಚಾರ್ಯ ಯುನಿಕ್ ಡಾಕ್ಟರಿನ್ಸ್‌ ಆಫ್‌ ಜೀವಾಶ್ವಭಾವ ವಾದ ಹಾಗೂ ಸರ್ವಶಬ್ಧ ವಾಚ್ಯತ್ವ ಆಫ್‌ ವಿಷ್ಣು’ ಎಂಬ ವಿಷಯದ ಕುರಿತು ಮಹಾಪ್ರಬಂಧ ರಚಿಸಿದ್ದಾರೆ. ಕಳೆದ 5 ವರ್ಷಗಳಿಂದ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದಾರೆ.

ಕಟೀಲಿನ ಶ್ರೀದುರ್ಗಾ ಸೆಂಟರ್ ಆಫ್‌ ಪಿಜಿ ಸ್ಟಡೀಸ್ ಅಂಡ್ ರಿಸರ್ಜ್‌ ಇನ್ ಸಂಸ್ಕೃತ ವಿದ್ಯಾಲಯದ ಡಾ.ಎಂ.ಪದ್ಮನಾಭ ಮರಾಠೆ ಅವರು ಪಿಎಚ್‌ಡಿ ಮಾರ್ಗದರ್ಶಕರಾಗಿದ್ದು, ಏ.16ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉಷಾ ಚಡಗ ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.

ಕೋವಿಡ್‌ ಲಾಕ್‌ಡೌನ್ ಸಮಯ ಪಿಎಚ್‌ಡಿ ಅಧ್ಯಯನಕ್ಕೆ ನೆರವಾಯಿತು. ಹಿಂದಿನಿಂದಲೂ ಸಂಸ್ಕೃತ, ವೇದಗಳ ಅಧ್ಯಯನದ ಬಗ್ಗೆ ಅತೀವ ಆಸಕ್ತಿ ಇತ್ತು. ಪ್ರಖ್ಯಾತ ವಿದ್ವಾಂಸದರಾದ ಬನ್ನಂಜೆ ಗೋವಿಂದಾಚಾರ್ಯರ ಪ್ರಭಾವ ಸಾಕಷ್ಟಿದೆ. ಗುರು ವಿದ್ವಾನ್ ಸಗ್ರಿ ರಾಘವೇಂದ್ರ ಆಚಾರ್ಯ ಅವರ ಮಾರ್ಗದರ್ಶನ, ಬೋಧನೆಯೂ ವೇದಗಳ ಅಧ್ಯಯನಕ್ಕೆ ಪ್ರೇರಣೆ ನೀಡಿದೆ ಎನ್ನುತ್ತಾರೆ ಉಷಾ ಚಡಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT