ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಥಾನ ದ್ವಾದಶಿ: ಕೃಷ್ಣಮಠದಲ್ಲಿ ಲಕ್ಷ ದೀಪೋತ್ಸವ

ತುಳಸಿ ಪೂಜೆ, ತೆಪ್ಪೋತ್ಸವ ಸಹಿತ ರಥೋತ್ಸವ ಸಂಭ್ರಮ
Last Updated 9 ನವೆಂಬರ್ 2019, 15:02 IST
ಅಕ್ಷರ ಗಾತ್ರ

ಉಡುಪಿ: ಉತ್ಥಾನ ದ್ವಾದಶಿಯ ದಿನವಾದ ಶನಿವಾರ ಉಡುಪಿಯ ಶ್ರೀಕೃಷ್ಣಮಠದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಮನೆಮಾಡಿತ್ತು. ರಥಬೀದಿಯ ಸುತ್ತಲೂ ಸಾಲುಸಾಲು ದೀಪಗಳು ಕಂಗೊಳಿಸಿದವು. ಸಾವಿರಾರು ಭಕ್ತರು ದೀಪೋತ್ಸವವನ್ನು ಕಣ್ತುಂಬಿಕೊಂಡು ಕೃಷ್ಣನ ದರ್ಶನ ಪಡೆದರು.‌

ಕೃಷ್ಣಮಠದಲ್ಲಿ ಬೆಳಿಗ್ಗೆ ಪರ್ಯಾಯ ಪಲಿಮಾರು ಶ್ರೀಗಳು ತುಳಸಿ ಪೂಜೆ ನೆರವೇರಿಸಿದರು. ಕೃಷ್ಣ ದೇವರಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿಯ ಅಂಗವಾಗಿ ಪರ್ಯಾಯ ಪಲಿಮಾರು ಶ್ರೀಗಳು, ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥರು, ಪಲಿಮಾರು ಕಿರಿಯ ಯತಿಗಳು ತುಳಸಿ ಹರಿವಾಣವನ್ನು ತಲೆಯ ಮೇಲಿಟ್ಟು ‘ಡಂಗುರಾವ ಸಾರಿ ಹರಿಯ’ ದಾಸರ ಪದಕ್ಕೆ ನೃತ್ಯ ಮಾಡಿದರು.

ತುಳಸಿ ಪೂಜೆ, ಸಂಕೀರ್ತನೆಯ ಬಳಿಕ ಸೂರ್ಯವಾದ್ಯ, ನಾದಸ್ವರ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆಯಿತು. ಬಳಿಕ ದೇವರಿಗೆ ಮಂಗಳಾರತಿ ಮಾಡಿ ತುಳಸಿ ಹರಿವಾಣವನ್ನು ತಲೆಯಲಿಟ್ಟು ನೃತ್ಯ ನಡೆಸಿ ಪ್ರದಕ್ಷಿಣೆ ಮಾಡಿದರು.

ಕ್ಷೀರಾಬ್ದಿ ಅರ್ಘ್ಯ ಪ್ರಧಾನ:ಕೃಷ್ಣಮಠದ ಮಧ್ವ ಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಸಂಜೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ಪೇಜಾವರ ಮಠದ ವಿಶ್ವೇಶತೀರ್ಥರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಅದಮಾರು ಮಠದ ವಿಶ್ವಪ್ರಿಯ ತೀರ್ಥರು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಪೂಜೆ ಸಲ್ಲಿಸಿ ಕ್ಷೀರಾಬ್ದಿ ಅರ್ಘ್ಯ ನೀಡಿದರು.

ಈ ಸಂದರ್ಭ ಮಧ್ವ ಸರೋವರದ ದಂಡೆಯ ಮೇಲೆ ಪ್ರಭೋದೋತ್ಸವ ನಡೆಯಿತು. ವೇದ- ದಾಸಗಾನ ಸಮರ್ಪಣೆಯೊಂದಿಗೆ ಕರಾವಳಿಯ ಭಜನಾ ಮಂಡಳಿಗಳಿಂದ ಗೋಷ್ಠಿ ಗಾನ ನಡೆಯಿತು.

ರಾತ್ರಿ ಲಕ್ಷದೀಪೋತ್ಸವ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಇದೇವೇಳೆ ತೆಪ್ಪೋತ್ಸವ ಸಹಿತ ರಥೋತ್ಸವದಲ್ಲಿ ಭಕ್ತರು ಭಾಗವಹಿಸಿ ದೇವರ ಸ್ಮರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT