ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ವೈದ್ಯಕೀಯ ಸಿಬ್ಬಂದಿಗೆ ಪ್ರಥಮ ಹಂತದಲ್ಲಿ ಲಸಿಕೆ

ಅಂತಿಮ ಹಂತದಲ್ಲಿ ಕೋವಿಡ್ ಲಸಿಕೆ ತಯಾರಿಕೆ, ಸಿಬ್ಬಂದಿ ಮಾಹಿತಿ ಸಿದ್ಧಪಡಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ
Last Updated 29 ಅಕ್ಟೋಬರ್ 2020, 15:23 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್-19 ಲಸಿಕೆ ತಯಾರಿಕೆ ಅಂತಿಮ ಹಂತದಲ್ಲಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿಗೆ ನೀಡಬೇಕಿದೆ. ಅದಕ್ಕಾಗಿ ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಮಾಹಿತಿ ಸಿದ್ಧಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಗುರುವಾರ ಕಚೇರಿಯಲ್ಲಿ ನಡೆದ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್‌ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಎಲ್ಲರ ವಿವರವನ್ನು ಪಡೆದುಕೊಳ್ಳಬೇಕು. ನಂತರದಲ್ಲಿ ವೃದ್ಧರು ಹಾಗೂ ದುರ್ಬಲ ವ್ಯಕ್ತಿಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಮಕ್ಕಳಿಗೆ ಹಾಕಲಾಗುತ್ತಿರುವ ಲಸಿಕೆಗಳನ್ನು ನಿಲ್ಲಿಸಬಾರದು. ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ಲಸಿಕೆ ಹಾಕಬೇಕು. ಲಾಕ್‌ಡೌನ್ ಸಮಯದಲ್ಲಿ ಕುಂಠಿತವಾಗಿರುವ ಗುರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೆರಿಗೆಯ ವೇಳೆ ತಾಯಿ ಮರಣನು ತಪ್ಪಿಸಲು ಗರಿಷ್ಠ ಪ್ರಯತ್ನ ಮಾಡಬೇಕು. ಗರ್ಭಿಣಿಯರಿಗೆ ಹೆರಿಗೆ ವೇಳೆ ತೊಂದರೆಯಾಗುವ ಮುನ್ಸೂಚನೆಗಳಿದ್ದರೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತಾಯಿ ಮರಣ ತಪ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಸಾರ್ವಜನಿಕರು ಕೋವಿಡ್ ಸಂಪೂರ್ಣವಾಗಿ ಕಣ್ಮರೆಯಾಗುವವರೆಗೂ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದನ್ನು ನಿಲ್ಲಿಸಬಾರದು. ನಿತ್ಯದ ರೂಢಿಯನ್ನಾಗಿಸಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಎಂ.ಜಿ.ರಾಮ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT