183 ರಾಗಗಳಲ್ಲಿ ಮೂಡಿದ ವಂದೇ ಮಾತರಂ

7
ಫೆ.9ರಂದು ಮಲ್ಪೆ ಬೀಚ್‌ನಲ್ಲಿ ಪ್ರಶಸ್ತಿ ಪ್ರದಾನ; ಉತ್ಕೃಷ್ಟ ವಿಡಿಯೋಗೆ ₹ 2 ಲಕ್ಷ

183 ರಾಗಗಳಲ್ಲಿ ಮೂಡಿದ ವಂದೇ ಮಾತರಂ

Published:
Updated:
Prajavani

ಉಡುಪಿ: ವಂದೇಮಾತರಂ ಗೀತೆಯನ್ನು ವಿಭಿನ್ನ ರಾಗಗಳಲ್ಲಿ ಸಂಯೋಜನೆ ಮಾಡಿ ಆಲ್ಬಂ ರೂಪದಲ್ಲಿ ಕಳುಹಿಸುವಂತೆ ಸಂವೇದನಾ ಸಂಸ್ಥೆ ಮಾಡಿದ ಮನವಿಗೆ ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದೆ. 16 ರಾಜ್ಯಗಳ 183 ಸ್ಪರ್ಧಿಗಳು ವಿಡಿಯೋ ತುಣುಕುಗಳನ್ನು ಕಳುಹಿಸಿದ್ದಾರೆ ಎಂದು ಸಂವೇದನಾ ಫೌಂಡೇಷನ್‌ ಅಧ್ಯಕ್ಷ ಪ್ರಕಾಶ್‌ ಮಲ್ಪೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 183 ವಿಡಿಯೋಗಳ ಪೈಕಿ ಅತ್ಯುತ್ತಮವಾದ 12 ವಿಡಿಯೋಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿದೆ. ರಾಜಾಸ್ತಾನ, ಮಣಿಪುರ, ನಾಗಾಲ್ಯಾಂಡ್‌, ಕೇರಳ ಹಾಗೂ ಕರ್ನಾಟಕದ ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಫೆ.9ರಂದು ಸಂಜೆ 4.30ಕ್ಕೆ ಮಲ್ಪೆ ಬೀಚ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ತಿಳಿಸಿದರು.

ಉತ್ಕೃಷ್ಟ ಮೊದಲ ಪ್ರಸ್ತುತಿಗೆ ₹ 2 ಲಕ್ಷ ಬಹುಮಾನ, ಪ್ರಶಸ್ತಿ ಫಲಕ, ದ್ವಿತೀಯ ಉತ್ಕೃಷ್ಟ ವಿಡಿಯೋಗೆ ₹ 1 ಲಕ್ಷ ನಗದು, ಪ್ರಶಸ್ತಿ ನೀಡಲಾಗುವುದು. ಉತ್ತಮ ಸಿನಿಮಾಟೊಗ್ರಫಿ, ಉತ್ತಮ ಟ್ಯೂನ್‌, ಅತಿ ಹೆಚ್ಚು ಯೂಟ್ಯೂಬ್‌ ವೀಕ್ಷಣೆ ಪಡೆದ ವಿಡಿಯೋಗೆ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಒಂದೇ ಮಾತರಂ ಹಾಡಿಗೆ 183 ಟ್ಯೂನ್‌ಗಳು ಅಳವಡಿಸಿರುವುದು ಹಾಗೂ ಬೇರೆ ಬೇರೆ ಗಾಯಕರಿಂದ ಹಾಡಿಸಿರುವುದು ವಿಶ್ವದಾಖಲೆಯಾಗಲಿದೆ. ಕಳೆದ ಬಾರಿ 5000ಕ್ಕೂ ಹೆಚ್ಚು ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಂದ ವಂದೇಮಾತರಂ ಹಾಡಿಸಿ ಗೋಲ್ಡನ್‌ ಬುಕ್‌ ಆಪ್‌ ರೆಕಾರ್ಡ್‌ ಗರಿ ಸಿಕ್ಕಿತ್ತು. ಈ ಬಾರಿ ಎರಡನೇ ವಿಶ್ವದಾಖಲೆಯಾಗಲಿದೆ ಎಂದರು.

ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ನಾಗೇಂದ್ರ ಪ್ರಸಾದ್‌, ಉದ್ಯಮಿ ಡಾ.ಜಿ.ಶಂಕರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !