ಭಾನುವಾರ, ಡಿಸೆಂಬರ್ 15, 2019
24 °C
ದಕ್ಷಿಣ ಭಾರತ ಮಟ್ಟದ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಚಾಲನೆ

ಹಿಂದೂಧರ್ಮದ ಮೂಲವೇ ವೇದಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ‘ಅಪೌರುಷೇಯವಾದ ವೇದಗಳೇ ಹಿಂದೂಧರ್ಮದ ಮೂಲ. ಅದುವೇ ಸನಾತನ ಧರ್ಮದ ಸಾರ’ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದರು.

ಮಹರ್ಷಿ ಸಾಂದೀಪಿನಿ ರಾಷ್ಟ್ರೀಯ ವೇದವಿದ್ಯಾಲಯ ಪ್ರತಿಷ್ಠಾನ, ಪರ್ಯಾಯ ಪಲಿಮಾರು ಶ್ರೀ ಕೃಷ್ಣಮಠ, ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯ, ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ಸಹಯೋಗದಲ್ಲಿ ಮಂಗಳವಾರ ರಾಜಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣಭಾರತ ಮಟ್ಟದ ಕ್ಷೇತ್ರೀಯ ವೇದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಆದಿ–ಅಂತ್ಯವಿಲ್ಲದ ಪರಮಾತ್ಮನೇ ವೇದಗಳ ಜನಕ. ಪರಮಾತ್ಮ ಎಂಬ ಮಹಾವೃಕ್ಷಕ್ಕೆ ವೇದಗಳು ಎಲೆಗಳಿದ್ದಂತೆ. ವೈದಿಕ ಜ್ಞಾನ ಅರಿಯದ ಜೀವನ ವ್ಯರ್ಥ. ಸಮಾಜದಲ್ಲಿ ಶಾಂತಿ, ಸೌಹಾರ್ದ ಸ್ಥಾಪನೆಗೆ ವೇದಗಳ ಬಗೆಗಿನ ತಿಳಿವಳಿಕೆ ಅಗತ್ಯ. ಹಿಂದೂಗಳು ಮಾತ್ರವಲ್ಲದೆ ಕ್ರೈಸ್ತರು, ಮುಸ್ಲಿಮರು, ಬೌದ್ಧರು, ಜೈನರು ದೇಹವಿಲ್ಲದ ದೇವನನ್ನು ನಂಬುತ್ತಿರುವಾಗ ವೇದ ಅಪೌರುಷೇಯ ಎಂದು ನಂಬಲು ಏನು ಅಡ್ಡಿ ಎಂದು ಪ್ರಶ್ನಿಸಿದರು.

ವೇದವನ್ನು ಹಿಂದಿನಿಂದಲೂ ಅನೂಚಾನವಾಗಿ ಮುಂದುವರಿಸಿಕೊಂಡು ಬರಲಾಗಿದೆ. ಸನಾತನವಾಗಿರುವ ವೇದ, ಪರಮಾತ್ಮನ ಅಸ್ತಿತ್ವ ಇರುವಲ್ಲಿಯವರೆಗೆ ಅಬಾಧಿತ. ಪರಂಪರೆಯಿಂದ ಯಾರೂ ನಾಸ್ತಿಕರಿಲ್ಲ. ಪರಸ್ಪರ ನಂಬಿಕೆಯಿಂದ ಧರ್ಮನಿಷ್ಠೆ ಬೆಳೆದುಕೊಂಡು ಬಂದಿದೆ. ಭಕ್ತಿ ಪ್ರಚಾರ, ಮಾನವೀಯ ಧರ್ಮಾಚರಣೆಗೆ ಸಾತ್ವಿಕತೆ ಅಗತ್ಯ ಎಂದರು.

ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥರು ಮಾತನಾಡಿ, ವೇದಗಳು ಅತ್ಯಂತ ಪ್ರಾಚೀನವಾಗಿದೆ. ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ವೇದಗಳಲ್ಲಿ ಯಾವ ವ್ಯತ್ಯಾಸಗಳಾಗಿಲ್ಲ. ಪಂಡಿತರ ಪರಿಶ್ರಮದಿಂದಲೇ ವೇದಗಳು ರಕ್ಷಿಸಲ್ಪಟ್ಟಿದೆ. ವೇದಪಾಠದ ಜತೆಗೆ ಅದರ ಅರ್ಥದ ಬಗ್ಗೆಯೂ ಗಮನ ಹರಿಸಬೇಕು. ಆಗಮಾತ್ರ ವೇದಗಳ ರಕ್ಷಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.

ಸಾಯಣಾಚಾರ್ಯರು ವೇದಗಳಿಗೆ ಭಾಷ್ಯ ಬರೆದಿದ್ದಾರೆ. ಅದರಲ್ಲಿ ಕರ್ಮಕಾಂಡ ಪ್ರಧಾನ ದೃಷ್ಟಿಯು ಕಾಣುತ್ತದೆ. ಋಗ್ವೇದದ 40 ಸೂಕ್ತಗಳಿಗೆ ಆಚಾರ್ಯ ಮಧ್ವರು ಭಾಷ್ಯ ಬರೆದಿದ್ದಾರೆ. ಅದರಲ್ಲಿ ಜ್ಞಾನಕಾಂಡ ಪ್ರಧಾನವಾದ ದೃಷ್ಟಿಯಿದೆ ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಸರ್ವಜ್ಞನಾದ ಭಗವಂತ ಅಧ್ಯಯನಕ್ಕಾಗಿ ಸಾಂದೀಪನಿ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿದ್ದ. ಇಂದು ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನವು ಕೃಷ್ಣನ ಬಳಿಗೆ ಬಂದಿದೆ. ಸಮಗ್ರ ವೇದದಿಂದ ಪ್ರತಿಪಾದ್ಯನಾದವನು ಭಗವಂತ ಎಂದು ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ವೇದಜ್ಞರ ಮೇಧಾಶಕ್ತಿ ಕಂಪ್ಯೂಟರ್‌ಗಿಂತಲೂ ಮಿಗಿಲಾದುದು. ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆಯಲಿ ಎಂದರು.

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಉಪ ಕುಲಪತಿ ಪ್ರೊ.ಮುರಳೀಧರ ಮಾತನಾಡಿ, ‘ಕ್ಷೀಣವಾಗುತ್ತಿರುವ ವೇದಗಳ ರಕ್ಷಣೆಗೆ ಉಜ್ಜಯಿನಿ ಮಹರ್ಷಿಯ ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನ ಕಟಿಬದ್ಧವಾಗಿದೆ. ಪತಂಜಲಿ ಮಹರ್ಷಿಗಳ ಕಾಲದಲ್ಲಿ ಸಾಮವೇದಕ್ಕೆ ಸಾವಿರ ಶಾಖೆಗಳಿದ್ದವು. ಈಗ ಕೇವಲ ಎರಡು ಶಾಖೆಗಳು ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ವೇದಗಳ ರಕ್ಷಣೆ ನಮ್ಮ ಹೊಣೆ ಎಂದರು.

ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ಎಸ್.ಎಂ.ಎಸ್.ಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎನ್.ಲಕ್ಷ್ಮೀನಾರಾಯಣ ಭಟ್ಟ, ಉಜ್ಜಯಿನಿಯ ಮಹರ್ಷಿ ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರೊ.ರವೀಂದ್ರ ಅಂಬಾದಾಸ ಮುಳೆ, ಕೇರಳದ ಪ್ರೊ.ರಾಮಕೃಷ್ಣ ಭಟ್ಟ ಉಪಸ್ಥಿತರಿದ್ದರು.

ವೇದಾಂತ ಪ್ರಾಧ್ಯಾಪಕ ಪ್ರೊ.ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು, ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣ ವೆಂಕಟ ರಾವ್ ವಂದಿಸಿದರು.

ಪ್ರತಿಕ್ರಿಯಿಸಿ (+)