ಅಹಿಂಸಾ ಮಾರ್ಗದ ಅಗತ್ಯ ಸಾರಿದ ವೀಗನ್ ಫೆಸ್ಟಿವಲ್

7
ಹೊಸೇರಿಯ ವನಾಂತರದಲ್ಲಿ ಭೂಗ್ರಹ ರಕ್ಷಣೆಯ ಗಂಭೀರ ಚಿಂತನೆ

ಅಹಿಂಸಾ ಮಾರ್ಗದ ಅಗತ್ಯ ಸಾರಿದ ವೀಗನ್ ಫೆಸ್ಟಿವಲ್

Published:
Updated:
Deccan Herald

ಬೈಂದೂರು: ನಗರದ ಸದ್ದುಗದ್ದಲದಿಂದ ದೂರ, ಬೈಂದೂರು-ಕೊಲ್ಲೂರು ಮಾರ್ಗದ ನಡುವಿನ ಹೊಸೇರಿ ಎಂಬ ವನಾಂತರದ ‘ಸ್ಥಿತಪ್ರಜ್ಞ ವೀಗನ್ ಕೇಂದ್ರ’ದಲ್ಲಿ ಭಾನುವಾರ ಅಹಿಂಸಾ ಮಾರ್ಗಾವಲಂಬನೆಯ ಅಗತ್ಯದ ಪ್ರತಿಪಾದನೆ ನಡೆಯಿತು.

ವಿದೇಶ ಮತ್ತು ದೇಶದ ವಿವಿಧೆಡೆಯಿಂದ ಬಂದಿದ್ದ, ತಮ್ಮ ಆಯ್ದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹಲವರು ಅಲ್ಲಿ ನಡೆದ 16ನೇ ಸಾತ್ವಿಕ್ ವೀಗನ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ’ವೀಗನಿಸಂ’ಗೆ ಅಂದರೆ ಜೀವಹಿಂಸೆಯನ್ನು ವಿರೋಧಿಸುವ, ಹಾಲು ಸೇರಿದಂತೆ ಯಾವುದೇ ಪ್ರಾಣಿಜನ್ಯ ಉತ್ಪನ್ನಗಳ ಸೇವನೆ ಮತ್ತು ಬಳಕೆ ಮಾಡದಿರುವ ಸಿದ್ಧಾಂತಕ್ಕೆ ಬದ್ಧರಾಗಿ ತಮ್ಮನ್ನು ‘ವೀಗನ್ಸ್’ ಎಂದು ಗುರುತಿಸಿಕೊಂಡವರು. ದಿನವಿಡೀ ನಡೆದ ವಿಚಾರ ವಿಮರ್ಶೆ, ಅನುಭವ ಕಥನಗಳು ಅಹಿಂಸಾಹಾರದ ಅಗತ್ಯ ಮತ್ತು ಒಳಿತನ್ನು ಮತ್ತೆಮತ್ತೆ ದೃಢೀಕರಿಸಿದವು.

ಅಮೆರಿಕದ ವರ್ಜೀನಿಯಾದ ರಿಚ್ಮಂಡ್ ವಿಶ್ವವಿದ್ಯಾಲಯದ ಸಂಗೀತ ಪ್ರಾಧ್ಯಾಪಕಿ ಡಾ. ಜೋನ್ ಕೋಂಗ್ ಮಾಡಿದ ಉತ್ಸವದ ಶಿಖರೋಪನ್ಯಾಸದಲ್ಲಿ, ಭೂಮಿಯ ಮೇಲೆ ಜೀವಿಸುವ ಮಾನವ ಮತ್ತು ಎಲ್ಲ ಜೀವಿಗಳು ಸರಿಸಮಾನ ಹಕ್ಕುಗಳನ್ನು ಹೊಂದಿವೆ. ಎಲ್ಲ ಜೀವಿಗಳೂ ಮನುಷ್ಯರಂತೆ ನೋವು, ಭಯ ಮತ್ತು ಒತ್ತಡ ಅನುಭವಿಸುತ್ತವೆ. ಅವುಗಳಲ್ಲಿ ಒಂದು ಸಮೂಹಕ್ಕೆ ಇನ್ನೊಂದನ್ನು ದಮನಿಸುವ ಹಕ್ಕು ಇಲ್ಲ. ಜನಸಂಖ್ಯೆ ಮತ್ತು ಉಪಭೋಗದ ವೃದ್ಧಿಯ ಕಾರಣ ಜೀವವೈವಿಧ್ಯ ಕ್ಷಿಪ್ರಗತಿಯಲ್ಲಿ ಕ್ಷೀಣಿಸುತ್ತಿದೆ. ಸಮಯಾವಕಾಶ ಕಡಿಮೆಯಿದೆ. ಅದನ್ನು ತಡೆಗಟ್ಟಬೇಕಾದರೆ ಮನುಷ್ಯರಲ್ಲಿ ಪಾರಮಾರ್ಥಿಕತೆ ಮತ್ತು ಅನುಕಂಪ ಹೆಚ್ಚಬೇಕಾಗಿದೆ. ಮನುಷ್ಯರು ಸಸ್ಯಾಧರಿತ ಜೀವನ ವಿಧಾನ ಅನುಸರಿಸಿದರೆ ಮಾತ್ರ ಭೂಮಿ ಮತ್ತು ಪರಿಸರವನ್ನು ಉಳಿಸುವುದು ಸಾಧ್ಯ ಎಂದು ಪ್ರತಿಪಾದಿಸಿದರು.

ಸಾತ್ವಿಕ್ ವೀಗನ್ ಸೊಸೈಟಿಯ ಸಂಸ್ಥಾಪಕ ಹಾಗೂ ವೀಗನ್ ಫೆಸ್ಟಿವಲ್‌ನ ಸಂಚಾಲಕ ಶಂಕರನಾರಾಯಣ ಸ್ವಾಗತಿಸಿ, ವೀಗನಿಸಂ ಅಥವಾ ಅಹಿಂಸಾಹಾರ ಚಳವಳಿಯನ್ನು ಬಲಗೊಳಿಸುವ ಅಗತ್ಯವನ್ನು ವಿವರಿಸಿದರು.

ವೀಗನಿಸಂ ಕಾರ್ಯಕರ್ತರಾದ ಪಂಜಾಬ್‌ನ ಕಪುರ್ತಲಾದ ದೀಪಕ್ ಅಶ್ವನಿ, ಮಧ್ಯಪ್ರದೇಶದ ರತ್ಲಾಮ್‌ನ ಗಿರೀಶ್ ಶಾ, ಮಂಗಳೂರಿನ ಮೇಘನಾ ಅಧಿಕಾರಿ, ಮುಂಬೈನ ದಂತವೈದ್ಯ ಶಿವಾನಂದ ಶೆಟ್ಟಿ, ಸೂರತ್‌ನ ಉದ್ಯಮಿ ಸಂದೀಪ್ ಡಾಂಗಿ, ಕೊಲ್ಕತ್ತದ ಅಲ್ತಾಬ್ ಹುಸೇನ್ ಚಳವಳಿಯನ್ನು ವಿಸ್ತರಿಸುವುದರ ಬಗೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್.ಪ್ರಕಾಶ್ ಮೊದಲ ಭೇಟಿಯಲ್ಲಿ ಗಾಂಧೀಜಿಯವರಿಂದ ಪ್ರಭಾವಿತರಾದವರ ಕುರಿತು ಮಾತನಾಡಿದರು. ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ ಅಧಿಕಾರಿ ಇದ್ದರು.

ಪ್ರಾಣಿ ಹಕ್ಕುಗಳ ಪ್ರತಿಪಾದಕ ಅಮ್ಜೋಲ್ ಚಂದ್ರನ್ ಮತ್ತು ಗಿರೀಶ್ ಶಾ ಅವರಿಗೆ ‘ವರ್ಷದ ವೀಗನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಡುವೆ ಸಂಗೀತ, ನೃತ್ಯ ನಡೆಯಿತು.

ಉತ್ಸವದಲ್ಲಿ ಮೂಡಿಬಂದ ಪ್ರಮುಖ ವಿಚಾರಗಳು: ‘ಸಸ್ಯಾಹಾರ ಮತ್ತು ಸಸ್ಯಜನ್ಯ ಪೌಷ್ಠಿಕಾಂಶವನ್ನು ಮಾತ್ರ ಬಳಸಿ ದೀರ್ಘ ಓಟಕ್ಕೆ ಅಗತ್ಯವಿರುವ ದೇಹದ ಕ್ಷಮತೆ ಕಾದುಕೊಂಡಿದ್ದೇನೆ’ ಎಂದು ದಕ್ಷಿಣ ಆಫ್ರಿಕಾದ ಕಾಮ್ರೇಡ್ಸ್‌ನಲ್ಲಿ ನಡೆದ 100 ಕಿ. ಮೀ. ಅಲ್ಟ್ರಾ ಮ್ಯಾರಥಾನ್‌ನಲ್ಲಿ ಏಷ್ಯಾಕ್ಕೆ ಪ್ರಥಮ ಸ್ಥಾನಿಯಾದ ಸಂದೀಪ್‌ಕುಮಾರ್ ಸೂರತ್ ಅಭಿಪ್ರಾಯಪಟ್ಟರು.

‘ಪ್ರಾಣಿಗಳಲ್ಲಿ ಶೇ 80ರಷ್ಟನ್ನು ಚರ್ಮಕ್ಕಾಗಿ ವಧಿಸಲಾಗುತ್ತಿದೆ. ಚರ್ಮವು ಪಾದರಕ್ಷೆ ಮತ್ತು ಫ್ಯಾಶನ್ ಸಾಮಗ್ರಿಗಳಿಗೆ ಬಳಕೆಯಾಗುತ್ತದೆ. ಪರ್ಯಾಯ ವಸ್ತುಗಳ ಬಳಕೆ ಮೂಲಕ ಮಾತ್ರ ಪ್ರಾಣಿವಧೆಯನ್ನು ತಡೆಗಟ್ಟಬಹುದು’ ಎಂಬುದು ದೆಹಲಿಯ ವೀಗನ್ ಫ್ಯಾಶನ್ ಡಿಸೈನರ್ ಸಚಿನ್ ಚಾವ್ಡಾ ಅಭಿಪ್ರಾಯವಾಗಿತ್ತು.

‘ಎಲ್ಲ ವಿಧದ ಅನಗತ್ಯ ಅಪೇಕ್ಷೆಗಳನ್ನು ವರ್ಜಿಸಿ ನಡೆಸುವ ಸ್ಥಿತಪ್ರಜ್ಞ ಬದುಕಿನಿಂದ ಸಂತೃಪ್ತಿ ದೊರೆಯುತ್ತದೆ’ ಎಂದು ರಿಸರ್ವ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಆರ್.ಜಿ.ಪ್ರಭು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !