ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ಪರ್ಯಾಯ ಮಾಡಿದ ಈಶಪ್ರಿಯ ಶ್ರೀಗಳು

ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಗಳ ಮನದಾಳ
Last Updated 5 ಡಿಸೆಂಬರ್ 2021, 15:32 IST
ಅಕ್ಷರ ಗಾತ್ರ

ಉಡುಪಿ: ಮಠಗಳು ಸಮಾಜಕ್ಕೆ ಸ್ಪಂದಿಸುತ್ತಿದ್ದರೂ ಕೆಲವರು ಮಠಗಳು ಸಮಾಜಕ್ಕೆ ಸ್ಪಂದಿಸುತ್ತಿಲ್ಲ ಎಂಬ ಅಪಸ್ವರ ಎತ್ತುತ್ತಾರೆ. ಮಠಗಳಿಂದ ಪ್ರಯೋಜನ ಸಿಗದವರು ಇಂತಹ ಆರೋಪಗಳನ್ನು ಮಾಡಬಹುದು ಎಂದು ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಅದಮಾರು ಮಠದ ಈಶಪ್ರಿಯ ತೀರ್ಥರ ಪ್ರಥಮ ಪರ್ಯಾಯ ಅವಧಿಯ ದೀಕ್ಷಾ ಸಮಾಪನ ಕಾರ್ಯಕ್ರಮವಾದ ‘ವಿಶ್ವಾರ್ಪಣಂ’ನಲ್ಲಿ ಮಾತನಾಡಿದರು.

ಮನುಷ್ಯನಿಂದ ಮನುಷ್ಯ ಕಲಿಯುಂವಥದ್ದು ಏನೂ ಇಲ್ಲ. ಬದಲಾಗಿ, ಪ್ರಾಣಿಗಳಿಂದ ಮನುಷ್ಯ ಕಲಿಯಬೇಕಾಗಿರುವುದು ಸಾಕಷ್ಟಿದೆ. ಮನುಷ್ಯ ಮನುಷ್ಯನ ಕಷ್ಟಗಳಿಗೆ ಸ್ಪಂದಿಸುವ ಕಾಲ ಬರುವವರೆಗೂ ಭಗವಂತನ ಕೃಪೆ ಸಿಗುವುದಿಲ್ಲ ಎಂದರು.

ಅದಮಾರು ಪರ್ಯಾಯದ ಅವಧಿಯಲ್ಲಿ ರಾಯಚೂರು ಅಭಿಮಾನಿಗಳ ಕೊಡುಗೆ ದೊಡ್ಡದು. ಮಠಕ್ಕೆ 2 ವರ್ಷಕ್ಕೆ ಬೇಕಾದ ಅಕ್ಕಿಯನ್ನು ಒದಗಿಸಿ ಹೃದಯ ವೈಶಾಲ್ಯ ಮರೆದಿದ್ದಾರೆ. 30 ವರ್ಷಗಳ ಒಡನಾಟ ರಾಯಚೂರಿನೊಂದಿಗಿದೆ ಎಂದರು.

2 ವರ್ಷಗಳ ಅದಮಾರು ಮಠದ ಪರ್ಯಾಯದ ಅವಧಿಯಲ್ಲಿ ಈಶಪ್ರಿಯ ತೀರ್ಥ ಶ್ರೀಗಳು ಬುದ್ಧಿವಂತಿಕೆ ಹಾಗೂ ಹೃದಯವಂತಿಕೆಯನ್ನು ಬಳಸಿಕೊಂಡು ಒಳ್ಳೆಯ ರೀತಿಯಲ್ಲಿ ಪರ್ಯಾಯವನ್ನು ನಿಭಾಯಿಸಿದ್ದಾರೆ ಎಂದು ಹೊಗಳಿದರು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ‘ದುಂಬಿ ಹೂವಿನಲ್ಲಿರುವ ಮಕರಂದವನ್ನು ಮಾತ್ರ ಹೀರುವಂತೆ ಒಳ್ಳೆಯ ಚಿಂತನೆಗಳು ಎಲ್ಲಿ ಸಿಕ್ಕರೂ ಅವುಗಳನ್ನು ಹೆಕ್ಕಬೇಕು ಎಂದು ಹೇಳಿದರು.

ಸಮಾಜದಲ್ಲಿ ಒಳಿತು ಹಾಗೂ ಕೆಡಕುಗಳು ಇರುತ್ತವೆ. ಮೋಸ ಮಾಡುವವರು, ವಂಚನೆ ಎಸಗುವವರು ಇದ್ದರೂ ಕೆಡಕುಗಳನ್ನು ಬದಿಗಿರಿಸಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಬೇಕು ಎಂದು ಆಶೀರ್ವಚನ ನೀಡಿದರು.

ಸ್ವಾವಲಂಬನೆ ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದ್ದು, ಈ ನಿಟ್ಟಿನಲ್ಲಿ ಅದಮಾರು ಮಠ ಕೂಡ ಸೋಲಾರ್ ಅಳವಡಿಕೆಯ ಮೂಲಕ ಸೌರಶಕ್ತಿಯ ಉತ್ಪಾದನೆ ಮಾಡಿ ರಾಷ್ಟ್ರಕಟ್ಟುವ ಕೆಲಸ ಮಾಡುತ್ತಿದೆ ಎಂದರು.

ಹಳಿತಪ್ಪಿದ ವಿಚಾರವಾದ:

ರಂಗಭೂಮಿ ಹಾಗೂ ಸಾಹಿತ್ಯ ಸೃಷ್ಟಿಯಾಗಿದ್ದು ವಿಚಾರವಾದದ ತಳಹದಿಯ ಮೇಲೆ. ಕೊನೆಗೆ ವಿಚಾರವಾದ ಎಂದರೆ ಹಿಂದೂ ದೇವರನ್ನು, ಹಿಂದೂಗಳನ್ನು ಬ್ರಾಹ್ಮಣರನ್ನು ನಿಂದಿಸುವುದು ಎಂಬಂತಾಗಿದೆ. ದೇಶದ ಎಲ್ಲ ಕೆಡಕುಗಳಿಗೆ ನಾವು ಕಾರಣರಲ್ಲ. ಹಳೆಯ ತಲೆಮಾರುಗಳು ಧರ್ಮದ ಉಳಿವಿಗೆ ಜೀವಮಾನವನ್ನು ತೇದಿದ್ದು, ಈಗ ಧರ್ಮವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಿರುತೆರೆ ನಟ ಎಸ್‌.ಎನ್‌.ಸೇತುರಾಂ ಹೇಳಿದರು.

ಕರ್ನಾಟಕ ಬ್ಯಾಂಕಿನ ನೆರವಿನೊಂದಿಗೆ ಕೃಷ್ಣಮಠದಲ್ಲಿ ಸ್ಥಾಪಿಸಲಾಗಿರುವ ಸೌರ ಘಟಕವನ್ನು ಈಶಪ್ರಿಯತೀರ್ಥ ಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಎಂ.ಎಸ್‌.ಮಹಾಬಲೇಶ್ವರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಸ್ವಾಮೀಜಿ, ಶಾಸಕ ರಘುಪತಿ ಭಟ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಕರ್ನಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಎಂ.ಎಸ್‌.ಮಹಾಬಲೇಶ್ವರ ಇದ್ದರು. ಕರ್ನೂಲಿನ ಶ್ರೀನಿವಾಸ ಆಚಾರ್ಯ, ಬೆಂಗಳೂರಿನ ಪೂರ್ಣಪ್ರಮತಿ ವಿದ್ಯಾಲಯವನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT