ಉಡುಪಿ: ಆಡುಮುಟ್ಟದ ಸೊಪ್ಪಿಲ್ಲ; ಬಂಟರು ಮುಟ್ಟದ ಕ್ಷೇತ್ರವಿಲ್ಲ; ಕೈಗಾರಿಕೋದ್ಯಮ, ಕಲೆ, ಬ್ಯಾಂಕಿಂಗ್, ಸಿನಿಮಾ, ರಾಜಕೀಯ, ಕೃಷಿ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಬಂಟರು ಛಾಪು ಮೂಡಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೈದಾನದಲ್ಲಿ ಭಾನುವಾರ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಟರ ಸಹಶೀಲತೆ, ತಾಳ್ಮೆ, ಧೈರ್ಯದಿಂದ ಮುನ್ನುಗ್ಗುವ ಪ್ರವೃತ್ತಿಯಿಂದ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ದಕ್ಕುವಂತೆ ಮಾಡಿದೆ. ಉದ್ಯಮ ಶೀಲತಾ ಗುಣಗಳಿಂದ ತುಳುನಾಡಿಗೆ, ಕರುನಾಡಿಗೆ ಹಾಗೂ ದೇಶಕ್ಕೆ ಹೆಸರು ತಂದಿದ್ದಾರೆ ಎಂದು ಶ್ಲಾಘಿಸಿದರು.
ವಿಶ್ವದಲ್ಲಿ 200ಕ್ಕೂ ಹೆಚ್ಚು ಸಂಘಗಳನ್ನು ಸ್ಥಾಪಿಸಿರುವುದು ಬಂಟರು ಮಾತ್ರ; ದೇಶದಲ್ಲಿ ಪ್ರಥಮವಾಗಿ ಖಾಸಗಿ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಬಂಟರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬಹಳ ವೇಗವಾಗಿ ಬೆಳೆಯುತ್ತಿದ್ದು ಸರ್ಕಾರ ಕರಾವಳಿಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಗೃಹ ಸಚಿವರು ಹೇಳಿದರು.
ಕುವೆಂಪು ಅವರ ಕರ್ನಾಟಕ ಮಾತಿನಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು, ಎಲ್ಲರೂ ಸಮಾನರಾಗಿ ಬಾಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಬಡವರು ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಲಿದೆ ಎಂದು ಪರಮೇಶ್ವರ್ ಹೇಳಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಸೇರಿದಂತೆ ಹಲವರು ಇದ್ದರು.
ಭವಿಷ್ಯದಲ್ಲಿ ಮಂಗಳೂರು ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿ ಬೆಳೆಯಲಿದೆ. ದೇಶದ ಐದು ಪ್ರಮುಖ ಬಂದರುಗಳಲ್ಲಿ ಮಂಗಳೂರು ಕೂಡ ಒಂದು ಎಂಬುದು ಹೆಮ್ಮೆ.–ಜಿ.ಪರಮೇಶ್ವರ್ ಗೃಹ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.