ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮರಿಂದ ಕಲೆ, ವಾಸ್ತುಶಿಲ್ಪ ಆರಂಭ: ರಘುಪತಿ ಭಟ್

ವಿಶ್ವಕರ್ಮ ಜಯಂತಿಯಲ್ಲಿ ಶಾಸಕ ಕೆ. ರಘುಪತಿ ಭಟ್
Last Updated 17 ಸೆಪ್ಟೆಂಬರ್ 2022, 14:47 IST
ಅಕ್ಷರ ಗಾತ್ರ

ಉಡುಪಿ: ವಿಶ್ವಕ್ಕೆ ಕಲೆ ಮತ್ತು ವಾಸ್ತುಶಿಲ್ಪವನ್ನು ಪರಿಚಯಿಸಿದ ವಿಶ್ವಕರ್ಮರು ಪ್ರಾತಃಸ್ಮರಣೀಯರು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯಪಟ್ಟರು.

ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಪ್ರಸಿದ್ಧ ಕ್ಷೇತ್ರಗಳು, ವಾಸ್ತುಶಿಲ್ಪ ಕಲೆಗಳು, ವಿಶ್ವಕರ್ಮರಿಂದ ರಚಿತವಾಗಿದ್ದು, ಐತಿಹಾಸಿಕ ದ್ವಾರಕ ನಗರವೂ ವಿಶ್ವಕರ್ಮರ ಸೃಷ್ಟಿಗಳಲ್ಲಿ ಒಂದಾಗಿದೆ. ಕಲೆ ಮತ್ತು ವಾಸ್ತು ಶಿಲ್ಪಕ್ಕೆ ವಿಶ್ವಕರ್ಮರೇ ಮೂಲ ಪುರುಷರು ಎಂದರು.

ವಿಶ್ವಕರ್ಮ ಸಮಾಜ ಬಾಂಧವರು ಕಲೆಗೆ ಹೆಸರುವಾಸಿಯಾಗಿದ್ದು, ಕೆಲಸದ ನೈಪುಣ್ಯತೆಯಿಂದ ಅತ್ಯುತ್ತಮ ಶಿಲ್ಪಕಲೆಗಳ‌ನ್ನು ತಯಾರಿಸಿದ್ದಾರೆ. ಶಿಲ್ಪಕಲೆಗಳು ದೇಶದ ಆಸ್ತಿಯಾಗಿ ಗಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿಯೂ ನವನವೀನ ವಿನ್ಯಾಸದ ಕೆತ್ತನೆ ಹಾಗೂ ಮರದ ಕೆತ್ತನೆಯ ವಾಸ್ತು ಶಿಲ್ಪಗಳನ್ನು ಕೊಡುಗೆಯನ್ನಾಗಿ ನೀಡಿದ್ದಾರೆ ಎಂದರು.

ಕುತ್ಯಾರು ಆನೆಗುಂದಿ ಮಠದ ಮೌನೇಶ್ ಶರ್ಮ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್‌ ಅಧ್ಯಕ್ಷ ಕೆ.ಉದಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಉದ್ಯಾವರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ರಾಜ್ಯ ಅಖಿಲ ಭಾರತ ವಿಶ್ವಕರ್ಮ ಮಹಾ ಸಭಾಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ಯ, ವಿಶ್ವ ಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಹರೀಶ್ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT