ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಸಂಕಟ ತೆರೆದಿಡುವುದು ಕಲಾವಿದರ ಬದ್ಧತೆ

ವಿಶ್ವ ರಂಗ ಭೂಮಿ ದಿನಾಚರಣೆಯಲ್ಲಿ ರಂಗ ನಿರ್ದೇಶಕ ಬಿ.ಆರ್‌.ವೆಂಕಟರಮಣ ಐತಾಳ್
Last Updated 28 ಮಾರ್ಚ್ 2023, 16:00 IST
ಅಕ್ಷರ ಗಾತ್ರ

ಉಡುಪಿ: ಸಮುದಾಯ ಹಾಗೂ ಜಗತ್ತಿನ ಸಂಕಟ, ಬಿಕಟ್ಟುಗಳನ್ನು ಕಲೆಯ ಮೂಲಕ ತೆರೆದಿಡುವುದು ಕಲಾವಿದನ ಸಾಮಾಜಿಕ ಬದ್ಧತೆ ಎಂದು ರಂಗ ನಿರ್ದೇಶಕ ಬಿ.ಆರ್‌.ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟರು.

ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ಮಂಗಳವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ರಥಬೀದಿ ಮಾತುಕತೆ ರಂಗಬದ್ಧತೆ ಮತ್ತು ಹವ್ಯಾಸಿ ರಂಗಭೂಮಿ ವರ್ತಮಾನದ ತಲ್ಲಣಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಆಗುಹೋಗುಗಳ ಬಗ್ಗೆ ಜನರನ್ನು ಸದಾ ಎಚ್ಚರಿಸುವ ಹೊಣೆಗಾರಿಕೆ ರಂಗಭೂಮಿಯದ್ದು. ಸಾಹಿತಿಗಳು, ಕಲಾವಿದರು, ರಂಗಭೂಮಿ ಕಲಾವಿದರು ನಾಡಿನ ಸಾಕ್ಷಿಪ್ರಜ್ಞೆಗಳಾಗಿ ಸಮಾಜಕ್ಕೆ ತಿಳಿವಳಿಕೆ ಹಾಗೂ ಅರಿವು ನೀಡಬೇಕು ಎಂದರು.

ರೂಪ ಬದ್ಧತೆ ಹಾಗೂ ವಿಷಯ ಬದ್ಧತೆಯ ಬೆಸುಗೆಯಿಂದ ಜವಾಬ್ದಾರಿಯುತವಾದ ಕಲೆ ಜನ್ಮತಾಳುತ್ತದೆ. ಕಲಾವಿದರಿಗೆ ಕಲೆಯ ಬದ್ಧತೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು ಎಂದು ಸಲಹೆ ನೀಡಿದರು.

ರಥಬೀದಿ ಗೆಳೆಯರು ತಂಡದ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ತಲ್ಲಣಗೊಂಡಾಗಲೆಲ್ಲ ರಂಗಭೂಮಿ ನೇರವಾಗಿ, ವ್ಯಂಗ್ಯ, ವಿಡಂಬನೆ, ಟೀಕೆ, ಪ್ರತಿರೋಧ ತೋರುತ್ತಲೇ ಬಂದಿದೆ. ರಂಗಭೂಮಿಯಿಂದಲೇ ಸಾಮರಸ್ಯದ ಸಮಾಜ ಕಟ್ಟಲು ಸಾಧ್ಯವಿದೆ ಎಂದರು.

ರಂಗಭೂಮಿಯ ನಂಬಿಕೆಗಳನ್ನು ಬುಡಬೇಲು ಮಾಡುವಂತಹ ಘಟನೆಗಳು ನಡೆದಾಗ ಚರ್ಚೆ, ಸಂವಾದ, ಮಾತುಕತೆಗಳು ಹೆಚ್ಚು ಅಗತ್ಯವಾಗಿದೆ. ರಂಗಭೂಮಿ ಸತ್ಯದರ್ಶನ ಮಾಡುವ ಮಾಧ್ಯಮ. ಎಂದೂ ನಿಜವನ್ನು ಮರೆಸಿ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ರಂಗಭೂಮಿಯಲ್ಲಿ ನಡೆದಿಲ್ಲ. ಬದಲಾಗಿ ಸತ್ಯವನ್ನು ಮಾತನಾಡಿದ್ದಕ್ಕೆ ನಿರ್ಬಂಧದ ಶಿಕ್ಷೆಗೆ ಒಳಗಾದ ನಿದರ್ಶನಗಳಿವೆ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಐ.ಕೆ ಬೋಳುವಾರ್ ಮಾತನಾಡಿದರು. ರಥಬೀದಿ ಗೆಳೆಯರು ತಂಡದ ಉದ್ಯಾವರ ನಾಗೇಶ್‌ ಕುಮಾರ್, ಡಾ.ಶ್ರೀಪಾದ್ ಭಟ್‌, ಬಾಸುಮಾ ಕೊಡಗು, ಪ್ರಕಾಶ್‌, ಜೈರಾಮ್ ನೀಲಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT