ಕುಂದಾಪುರ: ಈ ಸೃಷ್ಟಿಯ ಆದಿಯಲ್ಲಿ ಅದೆಷ್ಟೋ ಜೀವ ಕಣಗಳಿವೆ. ನಮ್ಮನ್ನು ನಾವು ಹಿಂದಿರುಗಿ ಹುಡುಕಿಕೊಂಡು ಹೋದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಲ್ಲಿ ನಾವು ದೇವರನ್ನು ಕಾಣಬೇಕು ಎಂದು ಮಂಗಳೂರಿನ ಅಜಲಸ್ ಡಯಾಗ್ನಾಸ್ಟಿಕ್ಸ್‌ನ ಡಾ.ಚಂದ್ರಯ್ಯ ಆಚಾರ್ಯ ಹೇಳಿದರು.
ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಯುವಕ ದಳ, ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಆಶ್ರಯದಲ್ಲಿ ಸೋಮವಾರ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಿವಿನ ಮೂಲವಾದ ಗುರುವಿನಲ್ಲಿ ದೇವರನ್ನು ಕಾಣಬೇಕು. ಶಾಲಾ–ಕಾಲೇಜಿನಲ್ಲಿ ಪಡೆಯುವ ಶಿಕ್ಷಣದ ಜೊತೆಯಲ್ಲಿ, ಧಾರ್ಮಿಕವಾಗಿ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಕೆಲಸ ಸಮುದಾಯದ ಮೂಲಕವೇ ಆಗಬೇಕು. ವಿಶ್ವಕರ್ಮ ಸಮುದಾಯ ಧಾರ್ಮಿಕ ಆಚರಣೆ, ವೈಯಕ್ತಿಕ ಧಾರ್ಮಿಕ ಆಚರಣೆಗಳ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ಹೇಳಿದರು.
ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘದ ಅಧ್ಯಕ್ಷ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿ, ಬದಲಾದ ಕಾಲಮಾನಕ್ಕೆ ನಾವು ಹೊಂದಿಕೊಂಡು ನಮ್ಮ ಅತ್ಯಮೂಲ್ಯ ಧರ್ಮ, ಸಂಸ್ಕೃತಿ, ಕಲೆಯನ್ನು ಬೆಳೆಸಿಕೊಂಡು ಹೋಗುವ ಮೂಲಕ ಸಂಘಟಿತರಾಗಬೇಕು ಎಂದರು.
ಪುರೋಹಿತ್ ರೋಹಿತಾಕ್ಷ ಆಚಾರ್ಯ ಕುಂಭಾಸಿ ಅವರು ಶುಭಾಶಂಸನೆಗೈದರು. ವಿಶ್ವಕರ್ಮ ಸಮಾಜ ಯುವಕ ದಳದ ಅಧ್ಯಕ್ಷ ಸುರೇಶ ಆಚಾರ್ಯ ಸಾಂತಾವರ ಅಧ್ಯಕ್ಷತೆ ವಹಿಸಿದ್ದರು.
ಕಾರವಾರ–ಕೊಂಕಣ ರೈಲ್ವೆಯ ನಾಗೇಂದ್ರ ಆಚಾರ್ಯ ತಲ್ಲೂರು, ಶ್ರೀದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ತೆಕ್ಕಟ್ಟೆ, ವಿಶ್ವಕರ್ಮ ಸಮಾಜ ಯುವಕ ದಳದ ನಿಯೋಜಿತ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ಇದ್ದರು.
ವಿಶ್ವಕರ್ಮ ಸಮಾಜ ಯುವಕ ದಳದ ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ ಆಚಾರ್ಯ ಅರಸರಬೆಟ್ಟು ವರದಿ ವಾಚಿಸಿದರು. ಶಿಲ್ಪಿ ದಿನೇಶ್ ಆಚಾರ್ಯ ಸಾಂತಾವರ ಆಯವ್ಯಯ ಪಟ್ಟಿ ಮಂಡಿಸಿದರು. ಸತೀಶ್ ಆಚಾರ್ಯ ಕುಂಬ್ರಿ, ಸತ್ಯನಾರಾಯಣ ಆಚಾರ್ಯ ದೊಡ್ಡೋಣಿ ಸನ್ಮಾನಿತರ ಪಟ್ಟಿ ವಾಚಿಸಿದರು. ಕೆ.ಆರ್. ರಾಘವೇಂದ್ರ ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ಗಣೇಶ್ ಆಚಾರ್ಯ ಕುಂಬ್ರಿ ನಿರೂಪಿಸಿದರು. ಜೀವಿ ವೆಂಕಟೇಶ್ ಆಚಾರ್ಯ ವಂದಿಸಿದರು.
ಸನ್ಮಾನ ಪ್ರತಿಭಾ ಪುರಸ್ಕಾರ
ಶಿಲ್ಪಿ ವಿಠಲ ಆಚಾರ್ಯ ಬಸ್ರೂರು ಅವರನ್ನು ಸನ್ಮಾನಿಸಲಾಯಿತು. ಚಿತ್ರ ಕಲಾವಿದ ಧನುಷ್ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 2024-26ನೇ ಸಾಲಿನ ವಿಶ್ವಕರ್ಮ ಸಮಾಜ ಯುವಕ ದಳದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.