ಶುಕ್ರವಾರ, ಮೇ 27, 2022
22 °C
'ವಿಶ್ವಾರ್ಪಣಂ' ಕಾರ್ಯಕ್ರಮದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

ಅನಂತ ಅನಾದಿ ಸನಾತನ ಧರ್ಮದ ಕೊಡುಗೆ: ಈಶಪ್ರಿಯ ತೀರ್ಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಗತ್ತಿಗೆ ಅನಂತ ಹಾಗೂ ಅನಾದಿ ಪರಿಕಲ್ಪನೆ ಕೊಟ್ಟಿದ್ದು ಸನಾತನ ಧರ್ಮ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ 'ವಿಶ್ವಾರ್ಪಣಂ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ‘ಎಷ್ಟು ಅರಿತರೂ ಪ್ರಪಂಚದ ಎಲ್ಲ ವಿಷಯಗಳನ್ನು ತಿಳಿಯಲು ಸಾಧ್ಯವಿಲ್ಲ. ಚಿಕ್ಕವರು ಎಂಬ ಭಾವ ದೊಡ್ಡ ಸಾಧನೆಗೆ ಮೆಟ್ಟಿಲುಗಳಾಗುತ್ತವೆ’ ಎಂದು ಕಿವಿಮಾತು ಹೇಳಿದರು.

‘ಎಲ್ಲವೂ ನನಗೇ ಬೇಕು ಎಂಬ ಚಿಂತನೆಗಳು ಮನುಷ್ಯನಲ್ಲಿ ಮೂಡುತ್ತಿರುವುದು ದುಃಖದ ವಿಚಾರ. ಹೊಸತನ್ನು ತಿಳಿಯುವ ಹಪಾಹಪಿಯಲ್ಲಿ ತೃಪ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖೆಯ ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಧಾರ್ಮಿಕ ನಂಬಿಕೆಗಳು ಸಮಾಜದಲ್ಲಿ ಗಟ್ಟಿಯಾಗಿರಲು ಮಠ ಹಾಗೂ ಮಂದಿರಗಳ ಪಾತ್ರ ಪ್ರಧಾನವಾದುದು. ಮನಸ್ಸಿನ ಪರಿವರ್ತನೆ ದೇಶದ ಪರಿವರ್ತನೆಗೆ ನಾಂದಿಯಾಗುತ್ತದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿದರೆ ಬಲವಾದ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕೋವಿಡ್‌ನಿಂದಾಗಿ ಅದಮಾರು ಮಠಾಧೀಶರ ಪರ್ಯಾಯ ಮಹೋತ್ಸವದ ಎಲ್ಲ ಕನಸುಗಳು ಈಡೇರಿಲ್ಲ ಎಂಬ ನೋವು ಇದ್ದರೂ, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೃಷ್ಣ ಮಠ, ದೇವಸ್ಥಾನ, ಮಠದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ಮೂಲಕ ಅದಮಾರು ಶ್ರೀಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದರು.

ಆಚಾರ್ಯ ಮಧ್ವರು ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿ ಕಾರಣಿಕ ಕ್ಷೇತ್ರವಾಗಿಸಿ, ವಿಶ್ವಕ್ಕೆ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳನ್ನು ಪಸರಿಸಿದ್ದಾರೆ. ಉಡುಪಿಯ ರಾಜಾಂಗಣ ರಾಜ್ಯದ ಸಾಂಸ್ಕೃತಿಕ ಕೇಂದ್ರವಾಗಿದ್ದು, ನಿತ್ಯೋತ್ಸವ ಎಂಬಂತೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಈಶಪ್ರಿಯ ತೀರ್ಥ ಸ್ವಾಮೀಜಿ, ಮಂಗಳೂರಿನ ಶಾರದಾ ವಿದ್ಯಾಯಲಯ ಮತ್ತು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ.ಪುರಾಣಿಕ್, ಬಳ್ಳಮಂಜ ಶ್ರೀಅನಂತೇಶ್ವರ ದೇವಳದ ಸೇವಕರಾದ ಪುರುಷೋತ್ತಮ ದೇವಾಡಿಗ, ಕೃಷ್ಣಮಠದ ಸೇವಕರಾದ ನಾರಾಯಣ ದಾಸರಿಗೆ ಮತ್ತು ಗಮಕ ಮತ್ತು ಸುಗಮ ಸಂಗೀತ ಕಲಾವಿದರಾದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರನ್ನು ಸನ್ಮಾನಿಸಿದರು.

ಅಖಿಲ ಭಾರತ ಕುಟುಂಬ ಪ್ರಬೋಧನ್ ಸದಸ್ಯರಾದ ಸುಬ್ರಹ್ಮಣ್ಯ ಕಜಂಪಾಡಿಯವರು ‘ಸಂಸ್ಕಾರ ಸಂವರ್ಧನೆಯಲ್ಲಿ ಕುಟುಂಬದ ಪಾತ್ರ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

‘ಕೃಷ್ಣಮಠ ಸ್ವಾಧೀನಕ್ಕೆ ವಿರೋಧಿಸಿದ್ದೆ’

‘ಶಾಸಕನಾಗಿದ್ದ ಸಂದರ್ಭದಲ್ಲಿ ಸರ್ಕಾರವು ಕೃಷ್ಣ ಮಠವನ್ನು ಅಧೀನಕ್ಕೆ ತೆಗೆದುಕೊಳ್ಳುವ ಯೋಚನೆ ಮಾಡಿತ್ತು. ಈ ವಿಚಾರ ತಿಳಿದ ಕೂಡಲೇ ಮುಖ್ಯಮಂತ್ರಿ ಬಳಿಗೆ ತೆರಳಿ ಕೃಷ್ಣಮಠಕ್ಕೆ ತೊಂದರೆಯಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ತಿಳಿಸಿ ಕೃಷ್ಣಮಠಕ್ಕೆ ಸಣ್ಣ ಸೇವೆ ಮಾಡಿದ್ದೇನೆ ಎಂಬ ತೃಪ್ತಿ ಇದೆ’ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು