ಮಂಗಳೂರು ವಿಭಾಗಕ್ಕೆ 20 ವೋಲ್ವೊ, ಸ್ಲೀಪರ್‌

7
ಕುಂದಾಪುರ, ಬೈಂದೂರಿನಲ್ಲಿ ನೂತನ ಬಸ್‌ ನಿಲ್ದಾಣ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಮಂಗಳೂರು ವಿಭಾಗಕ್ಕೆ 20 ವೋಲ್ವೊ, ಸ್ಲೀಪರ್‌

Published:
Updated:
Deccan Herald

ಉಡುಪಿ: ಮಂಗಳೂರು ಸಾರಿಗೆ ವಿಭಾಗಕ್ಕೆ ಶೀಘ್ರ 20 ವೋಲ್ವೊ ಹಾಗೂ ಸ್ಲೀಪರ್‌ ಬಸ್‌ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಶುಕ್ರವಾರ ರಾತ್ರಿ ನಗರ ಸಾರಿಗೆ ಬಸ್‌ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ದೂರದ ಊರುಗಳು ಪ್ರಯಾಣ ಸುಖಕರವಾಗಿರಲಿ ಎಂಬ ಉದ್ದೇಶದಿಂದ ಇಲಾಖೆಗೆ ಆರ್ಥಿಕ ಹೊರೆಯಾದರೂ ಪ್ರಯಾಣಿಕರಿಗೆ ವೊಲ್ವೊ ಹಾಗೂ ಸ್ಲೀಪರ್‌ ಬಸ್‌ ಸೇವೆಗಳನ್ನು ಒದಗಿಸಲಾಗುವುದು. ಈಗಿರುವ ಹಳೆಯ ಬಸ್‌ಗಳನ್ನು ನಿಲ್ಲಿಸಲಾಗುವುದು ಎಂದರು.

₹ 30 ಕೋಟಿ ವೆಚ್ಚದಲ್ಲಿ ಉಡುಪಿಯಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನೆಲಮಹಡಿಯಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಹಾಗೂ 1ನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಬೇಡಿಕೆಗನುಗುಣವಾಗಿ ಅಂತಸ್ತುಗಳನ್ನು ಏರಿಸಲಾಗುವುದು ಎಂದರು.

ಕುಂದಾಪುರ ಹಾಗೂ ಬೈಂದೂರಿನಲ್ಲಿ ತಲಾ ₹ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಿಲ್ದಾಣವನ್ನು ಶೀಘ್ರವೇ ನಿರ್ಮಿಸಲಾಗುವುದು. ಅಗತ್ಯವಿರುವ ಕಡೆಗಳಲ್ಲೂ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳು ರಚನೆಯಿಂದ, ಸರ್ಕಾರದ ವಿವಿಧ ಇಲಾಖೆಗಳಿಗೆ ಕೊಠಡಿಗಳ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ನೂತನ ತಾಲ್ಲೂಕುಗಳಲ್ಲಿ ನಿರ್ಮಿಸಲಾಗುವ ಬಸ್‌ ನಿಲ್ದಾಣಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಕೊಠಡಿಗಳನ್ನು ಬಾಡಿಗೆ ನೀಡಲಾಗುವುದು. ಇದರಿಂದ, ಹಳ್ಳಿಗಳಿಂದ ಬರುವ ನಾಗರಿಕರಿಗೆ ಒಂದೇ ಸೂರಿನಡಿ ಸರ್ಕಾರದ ಸೇವೆಗಳು ದೊರೆಯಲಿವೆ. ಜತೆಗೆ, ಸಾರಿಗೆ ಇಲಾಖೆಗೂ ಆದಾಯ ಬರಲಿದೆ ಎಂದು ಸಚಿವರು ತಿಳಿಸಿದರು.

ಸದ್ಯ, ಇಲಾಖೆಯಲ್ಲಿ 460 ಆರ್‌ಟಿಒ ಹಾಗೂ ಟ್ರಾಫಿಕ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಹಾಗಾಗಿ, ಮೇಲಧಿಕಾರಿಗಳ ಕಾರ್ಯಭಾರವನ್ನು ಎಫ್‌ಡಿಎ, ಕ್ಲರ್ಕ್‌ಗಳು ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಶೀಘ್ರ ರಾಜ್ಯಸರ್ಕಾರವೇ ಆರ್‌ಟಿಒ ಹಾಗೂ ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳನ್ನು ನೇಮಕಾತಿ ಮಾಡಲು ಚಿಂತನೆ ನಡೆಸಿದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಈ ಸಂದರ್ಭ ಮಂಗಳೂರು ವಿಭಾಗೀಯ ನಿಯಂತ್ರಕ ದೀಪಕ್‌ ಕುಮಾರ್‌ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್‌ ಶೆಟ್ಟಿ, ಮುಖ‌ಂಡರಾದ ಜಯರಾಮ್ ಆಚಾರ್ಯ, ಸುಧಾಕರ್ ಶೆಟ್ಟಿ, ಜಯಕುಮಾರ್ ಪರ್ಕಳ, ದಿನೇಶ್ ಶೆಟ್ಟಿ, ಅಬ್ದುಲ್‌ ರಜಾಕ್‌, ರಕ್ಷಿತ್ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !