ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಅರಿವಿಗೆ ಮತದಾರರ ಜಾಗೃತಿ ವೇದಿಕೆ

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ
Last Updated 28 ಮಾರ್ಚ್ 2023, 13:01 IST
ಅಕ್ಷರ ಗಾತ್ರ

ಉಡುಪಿ: ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಜಾಗೃತ ವೇದಿಕೆ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲೆಯ ಸ್ವೀಪ್ ಸಮಿತಿ ಅಧ್ಯಕ್ಷ ಎಚ್‌.ಪ್ರಸನ್ನ ಹೇಳಿದರು.

ಮತದಾರರ ಜಾಗೃತಿ ವೇದಿಕೆಗಳ ಸದಸ್ಯರಿಗೆ ಮಂಗಳವಾರ ಆನ್‌ಲೈನ್ ವೆಬಿನಾರ್ ಮೂಲಕ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಶೇ 10ರಷ್ಟು ಹೆಚ್ಚು ಮತದಾನ ನಡೆಯಬೇಕು ಎಂಬ ಗುರಿಯೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮತದಾರರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಲಾಗುತ್ತಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು, ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರನ್ನು ಗುರುತಿಸಿ ಮತದಾನ ಮಾಡುವಂತೆ ಮಾಡುವುದು, ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ತಿಳಿಸುವುದು, ಮತಗಟ್ಟೆಯ ವಿಳಾಸ, ಮತದಾನ ಪ್ರಕ್ರಿಯೆ ಕುರಿತು ಅರಿವು ಮೂಡಿಸುವುದು ಮತದಾರರ ಜಾಗೃತ ವೇದಿಕೆಯ ಜವಾಬ್ದಾರಿ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಕಾರ್ಯ ನಿರಂತರ ಪ್ರಕ್ರಿಯೆಯಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯವರೆಗೂ ಹೆಸರು ಸೇರ್ಪಡೆಗೆ ಅವಕಾಶವಿದೆ. ಮೊಬೈಲ್ ಆ್ಯಪ್ ಮೂಲಕವೂ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಬೂತ್ ಮಟ್ಟದಲ್ಲಿ ಮತಗಟ್ಟೆ ಜಾಗೃತಿ ಸದಸ್ಯರು ಮತದಾನ ಕುರಿತು ಜಾಗೃತಿ ಮೂಡಿಸುವುದರಿಂದ ಮತದಾನ ಪ್ರಮಾಣ ಹೆಚ್ಚಳವಾಗಲು ಸಾಧ್ಯವಿದೆ ಎಂದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಶಾಂತಾ ಮಾತನಾಡಿ, ಭಾರತೀಯ ನಾಗರಿಕರಾದ ನಾವೆಲ್ಲರೂ ಮತದಾನ ಮಾಡುವುದು ಸಂವಿಧಾನ ಬದ್ದ ಹಕ್ಕಾಗಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಅರ್ಹರೆಲ್ಲರೂ ಮತದಾನ ಮಾಡಬೇಕು. ಚುನಾವಣಾ ಆಯೋಗವು ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮ ರೂಪಿಸಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಚುನಾವಣೆಯ ಹಾಗೂ ಮತದಾನದ ಮಹತ್ವವನ್ನು ಅರಿತು ಹೆಸರು ನೋಂದಾಯಿಸಿಕೊಂಡು ಮತಗಟ್ಟೆಗೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಪರೀಕ್ಷಿಸಿಕೊಳ್ಳಲು ವೋಟರ್ ಹೆಲ್ಪ್‌ಲೈನ್‌ ಮೊಬೈಲ್ ಆ್ಯ‍ಪನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗೂಗಲ್ ಪ್ಲೇಸ್ಟೋರ್‌ನಲ್ಲಿ ವೋಟರ್ ಹೆಲ್ಪ್‌ಲೈನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 18 ವರ್ಷ ಮೇಲ್ಪಟ್ಟವರು ನೋಂದಣಿ ಮಡಿಕೊಳ್ಳಬಹುದು. ನೋಂದಣಿ ಮಾಡಿಸಿಕೊಂಡ ಮತದಾರರು ನೋಂದಣಿ ಸಂಖ್ಯೆ ನಮೂದಿಸಿದ್ದಲ್ಲಿ ಮತಗಟ್ಟೆಗಳ ವಿವರ ಪಡೆಯಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿ, ಸೇರ್ಪಡೆ, ಮತಗಟ್ಟೆಗಳ ವಿವರ, ಚುನಾವಣೆಗೆ ಸಂಬಂಧಿಸಿದ ದೂರುಗಳನ್ನೂ ದಾಖಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಾಯಿಸಿ ಕೊಂಡವರು ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೂ ಸರ್ಕಾರ ನಿಗದಿಪಡಿಸಿರುವ 15 ದಾಖಲಾತಿಗಳಲ್ಲಿ ಒಂದನ್ನು ತೋರಿಸಿ, ಮತದಾನ ಮಾಡಬಹುದು ಎಂದರು.

ಆನ್‌ಲೈನ್ ವೆಬಿನಾರ್ ತರಬೇತಿಯಲ್ಲಿ ಮಾಸ್ಟರ್ ಟ್ರೈನಿ ಅಶೋಕ್ ಕಾಮತ್, ವಿವಿಧ ಕಚೇರಿಗಳ ಅಧಿಕಾರಿ ಹಾಗೂ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT