ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಳೆಗಾಲದವರೆಗೂ ನೀರು ಪೂರೈಕೆಗೆ ಬದ್ಧ’

ಮಾಣೈ, ಭಂಡಾರಿ ಬೆಟ್ಟು ಬಳಿ ಮುಂದುವರಿದ ಡ್ರಜಿಂಗ್, ಹಲವೆಡೆ ಟ್ಯಾಂಕರ್ ನೀರು ಪೂರೈಕೆ
Last Updated 15 ಮೇ 2019, 15:25 IST
ಅಕ್ಷರ ಗಾತ್ರ

ಉಡುಪಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು, ನಗರಸಭೆಯಿಂದ ತೀವ್ರ ಸಮಸ್ಯೆ ಇರುವ ಕಡೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಜತೆಗೆ, 6 ವಾರ್ಡ್‌ಗಳನ್ನು ಒಳಗೊಂಡ 6 ವಿಭಾಗಗಳನ್ನು ರಚಿಸಿ, ಒಂದೊಂದು ವಿಭಾಗಕ್ಕೆ 6 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಮಳೆಗಾಲದವರೆಗೂ ನೀರು:

ಸ್ವರ್ಣ ನದಿ ಪಾತ್ರದ ಮಾಣೈ ಹಳ್ಳದಲ್ಲಿ ಸಂಗ್ರಹವಾಗಿರುವ ನೀರನ್ನು ಭಂಡಾರಿಬೆಟ್ಟು ಹಳ್ಳಕ್ಕೆ ಡ್ರಜಿಂಗ್ ಮಾಡಿ ಅಲ್ಲಿಂದ ಬಜೆ ಅಣೆಕಟ್ಟೆಯ ಜಾಕ್‌ವೆಲ್‌ಗೆ ಪೂರೈಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಜೂನ್ ಮೊದಲ ವಾರ ಅಥವಾ ಮಳೆಗಾಲ ಆರಂಭವಾಗುವವರೆಗೂ ಸ್ವರ್ಣಾ ಹಾಗೂ ಬಜೆಯಲ್ಲಿ ಲಭ್ಯವಿರುವ ನೀರನ್ನು ರೇಷನಿಂಗ್ ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ತೀರಾ ಸಮಸ್ಯೆ ಉದ್ಭವಿಸಿದರೆ ಈಗಾಗಲೇ ಗುರುತಿಸಲಾಗಿರುವ ಖಾಸಗಿ ಬಾವಿಗಳಲ್ಲಿರುವ ನೀರನ್ನು ಎತ್ತಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.

ಸಧ್ಯ ಬಜೆ ಅಣೆಕಟ್ಟೆಯಲ್ಲಿ 1.8 ಮೀಟರ್ ನೀರಿದ್ದು, ಡ್ರಜಿಂಗ್ ಮೂಲಕ ಹರಿಸಲಾಗುತ್ತಿದೆ. ಈ ತಿಂಗಳ ಅಂತ್ಯದವರೆಗೂ ನೀರು ಪಂಪಿಗ್ ಕಾರ್ಯ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

ನಗರಸಭೆಯಿಂದ 2ನೇ ಸುತ್ತಿನ ವಾರ್ಡ್‌ ವಾರು ನಲ್ಲಿ ನೀರು ಪೂರೈಕೆ ಆರಂಭವಾಗಿದ್ದು, ಬುಧವಾರ 6 ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳಾದದೊಡ್ಡಣಗುಡ್ಡೆ, ಜನತಾ ಕಾಲೋನಿ, ನೇಕಾರರ ಕಾಲೋನಿ, ವಿಎಂ ನಗರ, ಪೊಲೀಸ್ ಕ್ವಾಟ್ರಸ್‌, ಚಕ್ರತೀರ್ಥ, ಪಾಡಿಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ ಗುಂಡಿಬೈಲು ರಸ್ತೆ, ಅಡ್ಕದ ಕಟ್ಟೆ, ನಿಟ್ಟೂರು ಸೇರಿದಂತೆ ಹಲವು ಪ್ರದೇಶಗಳಿಗೆ ನಲ್ಲಿ ನೀರು ಪೂರೈಸಲಾಯಿತು.

35 ವಾರ್ಡ್‌ಗಳಿಗೆ ತಲಾ ಒಬ್ಬರಂತೆ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಆಯಾ ವಾರ್ಡ್‌ನ ನೀರಿನ ಸಮಸ್ಯೆಯನ್ನು ತುರ್ತು ಬಗೆಹರಿಸುವಂತೆ ಪೌರಾಯುಕ್ತರಾದ ಆನಂದ್ ಸಿ.ಕಲ್ಲೋಳಿಕರ್ ಸೂಚನೆ ನೀಡಿದ್ದಾರೆ. ಅದರಂತೆ ಬುಧವಾರವೂ ನಲ್ಲಿನೀರು ತಲುಪದ ಕಡೆಗಳಲ್ಲಿ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರು.

ನೀರಿಗೆ ಹಾಹಾಕಾರ:

ನೀರಿನ ಟ್ಯಾಂಕರ್ ಬರುತ್ತಿದ್ದಂತೆ ನಾಗರಿಕರು ಮನೆಯಲ್ಲಿದ್ದ ಸಂಗ್ರಹಾಗಾರಗಳಲ್ಲಿ ಕೆಲವು ದಿನಗಳಿಗಾಗುವಷ್ಟು ನೀರನ್ನು ಸಂಗ್ರಹಿಸಿಕೊಂಡರು. ಸಣ್ಣ ಸಣ್ಣ ಪಾತ್ರೆಗಳಲ್ಲೂ ನೀರು ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ವಲಸೆ ಕಾರ್ಮಿಕರಿಗೆ ತೊಂದರೆ:

ಹೊರ ಜಿಲ್ಲೆಗಳಿಂದ ಸಾವಿರಾರು ವಲಸೆ ಕಾರ್ಮಿಕರು ನಗರಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದು, ಬಹುತೇಕ ಮಂದಿ ಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಉಳಿದುಕೊಂಡಿದ್ದಾರೆ. ನಿತ್ಯದ ಬಳಕೆಗೆ ನೀರು ಸಿಗದೆ ದೂರದ ಬಾವಿಗಳಿಂದ ನೀರು ಹೊತ್ತು ತರುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT