ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಗೆಯಲ್ಲಿ ನೀರಿನ ಸಮಸ್ಯೆ ಬಾಧಿಸದಿರಲಿ: ಎಂ.ಕೂರ್ಮಾರಾವ್

ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಕೂರ್ಮಾರಾವ್
Last Updated 7 ಏಪ್ರಿಲ್ 2022, 14:21 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳು ಮತ್ತು ನಗರ ಪ್ರದೇಶದ ವಾರ್ಡ್‌ಗಳನ್ನು ಪಟ್ಟಿಮಾಡಬೇಕು.

ಸಮಸ್ಯಾತ್ಮಕ ಪ್ರದೇಶಗಳಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನೀರು ಸರಬರಾಜು ಮಾಡಲು ತಕ್ಷಣದಿಂದಲೇ ಯೋಜನೆ ರೂಪಿಸಿ, ಸಿದ್ಧತೆ ಮಾಡಿಕೊಳ್ಳಬೇಕು. ಜಾನುವಾರುಗೆ ಮೇವಿನ ಸಮಸ್ಯೆ ತಲೆದೋರದಂತೆ ಸಾಕಷ್ಟು ಮೇವಿನ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಬೆಳೆಹಾನಿ, ಪ್ರಾಕೃತಿಕ ವಿಕೋಪ ಹಾನಿಯ ವಿವರಗಳನ್ನು ದಾಖಲಿಸಲು ವೆಬ್ ಆಧಾರಿತ ತಂತ್ರಜ್ಞಾನ ವ್ಯವಸ್ಥೆ ಲಭ್ಯವಿದ್ದು, ಹಾನಿಯ ವಿವರಗಳನ್ನು ದಾಖಲಿಸಬೇಕು. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಡಿಜಿಟಲ್ ರೇಡಿಯೋ ಟವರ್ ಹಾಗೂ ಸೈರನ್ ಟವರ್‌ಗಳನ್ನು ಅಳವಡಿಸಬೇಕು. ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಶೀಘ್ರ ಟವರ್ ಅಳವಡಿಕೆ ಕಾರ್ಯ ಆರಂಭವಾಗಬೇಕು ಎಂದು ತಿಳಿಸಿದರು.

ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸಲು ಸಂಬಂಧಪಟ್ಟ ಇಲಾಖೆಗಳು ಅಗತ್ಯವಿರುವ ರಕ್ಷಣಾ ಉಪಕರಣಗಳ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು. ಪ್ರಸ್ತಾವ ಆಧರಿಸಿ ರಕ್ಷಣಾ ಉಪಕರಣಗಳನ್ನು ಸರಬರಾಜು ಮಾಡಲಾಗುವುದು. ಈಗಾಗಲೇ ಎಲ್ಲ ತಾಲೂಕುಗಳ ತಹಶೀಲ್ದಾರ್ ಖಾತೆಯಲ್ಲಿ ವಿಕೋಪ ನಿರ್ವಹಣೆಗೆ ಮೊತ್ತ ಹಂಚಿಕೆ ಮಾಡಲಾಗಿದ್ದು, ಜಿಲ್ಲಾ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಹೆಚ್ಚಿನ ಅನುದಾನದ ಅಗತ್ಯಬದ್ದರೆ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಎಸ್‌ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್‌ಪಿ ಅಂಶು ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಎಎಸ್‌ಪಿ ಸಿದ್ಧಲಿಂಗಪ್ಪ, ರಾಜ್ಯ ಯೋಜನಾ ಅನುಷ್ಠಾನ ಘಟಕದ ಯೋಜನಾ ವ್ಯವಸ್ಥಾಪಕ ಡಾ.ರಾಜ್‌ಕುಮಾರ್ ಪೂಜಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT