ಗುರುವಾರ , ಸೆಪ್ಟೆಂಬರ್ 23, 2021
22 °C
ಬರಿದಾದ ಬಜೆ, ಮಳೆ ಬರುವವರೆಗೂ ರೇಷನಿಂಗ್ ವ್ಯವಸ್ಥೆ; ನಗರಸಭೆ

10 ದಿನಕ್ಕಾಗುವಷ್ಟು ನೀರಿದೆ; ಮುಂದೇನು?

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದಿನದಿಂದ ದಿನಕ್ಕೆ ಬಿಸಿಲ ದಗೆ ಹೆಚ್ಚಾಗುತ್ತಿದ್ದು, ಜಲಮೂಲಗಳೆಲ್ಲ ಬತ್ತಿ ಹೋಗುತ್ತಿವೆ. ನಗರಕ್ಕೆ ನೀರು ಸರಬರಾಜು ಮಾಡುವ ಹಿರಿಯಡಕದ ಬಜೆ ಜಲಾಶಯ ಬರಿದಾಗಿದ್ದು, ಸ್ವರ್ಣಾ ನದಿಯ ಪಾತ್ರದಲ್ಲಿ ಸಂಗ್ರಹವಾಗಿದ್ದ ನೀರು ಖಾಲಿಯಾಗುತ್ತಿದೆ. ಇಲ್ಲಿರುವ ನೀರು ಖಾಲಿಯಾದರೆ ಮುಂದೇನು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.

ಮಾಣೈ, ಭಂಡಾರಿಬೆಟ್ಟುವಿನಲ್ಲಿ ನೀರು ಖಾಲಿ: ಮೇ ತಿಂಗಳ ಮೊದಲ ವಾರದಲ್ಲೇ ಬಜೆ ಅಣೆಕಟ್ಟೆ ಬರಿದಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಯಿತು. ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಮಾಣೈನಲ್ಲಿ ಸಂಗ್ರವಾಗಿದ್ದ ನೀರನ್ನು ಡ್ರೆಜಿಂಗ್ ಮೂಲಕ ಭಂಡಾರಿಬೆಟ್ಟು, ಪುತ್ತಿಗೆಮಠದ ಗುಂಡಿಗೆ ಹರಿಸಿ ಅಲ್ಲಿಂದ ಬಜೆ ಅಣೆಕಟ್ಟೆಯ ಜಾಕ್‌ವೆಲ್‌ಗೆ ಹರಿಸಿ ನಗರಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಯಿತು.

ನಗರದ 35 ವಾರ್ಡ್‌ಗಳನ್ನು 6 ವಿಭಾಗಗಳಾಗಿ ವಿಂಗಡಿಸಿ 6 ದಿನಕ್ಕೊಮ್ಮೆ ನಲ್ಲಿ ನೀರು ಕೊಡಲಾಗುತ್ತಿತ್ತು. ಈಗ ಮಾಣೈ ಹಾಗೂ ಭಂಡಾರಿಬೆಟ್ಟು ಗುಂಡಿಯಲ್ಲಿ ಸಂಗ್ರಹವಾಗಿದ್ದ ನೀರು ಖಾಲಿಯಾಗಿದೆ. ಪಂಪಿಂಗ್ ಮಾಡುವಷ್ಟು ನೀರು ಗುಂಡಿಯಲ್ಲಿ ಇರದ ಕಾರಣ ಪಂಪಿಂಗ್ ನಿಲ್ಲಿಸಲಾಗಿದೆ.

ಈಗ ಪುತ್ತಿಗೆ ಮಠದ ಸೇತುವೆ ಬಳಿ, ಸೈಬರಗುಂಡಿ, ಬ್ರಹ್ಮರ ಗುಂಡಿಯಲ್ಲಿ ಸಂಗ್ರಹವಾಗಿರುವ ನೀರನ್ನು ಮಳೆಗಾಲದವರೆಗೂ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಮೂಲಗಳ ಪ್ರಕಾರ 10 ದಿನಗಳಿಗೆ ಸಾಲುವಷ್ಟು ನೀರು ಮಾತ್ರ ಲಭ್ಯವಿದ್ದು, ಮುಂದೇನು ಎಂಬ ಆತಂಕ ಕಾಡುತ್ತಿದೆ.

ನೀರಿನ ಸಮಸ್ಯೆ ಕುರಿತು ಪ್ರಜಾವಾಣಿ ಜತೆ ಮಾತನಾಡಿದ ನಗರಸಭೆ ಎಂಜಿನಿಯರ್ ಸಂತೋಷ್‌ ಕುಮಾರ್, ಲಭ್ಯವಿರುವ ನೀರನ್ನು ಮುಂಗಾರು ಪ್ರವೇಶವಾಗುವವರೆಗೂ ರೇಷನಿಂಗ್ ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೂ 6ರಿಂದ 8 ಎಂಎಲ್‌ಡಿ ನೀರು ನೀಡಲಾಗುತ್ತಿತ್ತು. ಈಗ ಪ್ರಮಾಣವನ್ನು 4ರಿಂದ6 ಎಂಎಲ್‌ಡಿಗೆ ಇಳಿಸುವ ಚಿಂತನೆ ಇದೆ ಎಂದು ತಿಳಿಸಿದರು.

ಈಗಾಗಲೇ ನಗರದಲ್ಲಿ ಗಂಭೀರ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ನಡೆಯುತ್ತಿದೆ. ನೀರಿನ ಸಮಸ್ಯೆ ಬಗೆಹರಿಯುವವರೆಗೂ ಟ್ಯಾಂಕರ್ ನೀರು ಪೂರೈಕೆ ಮುಂದುವರಿಯಲಿದೆ ಎಂದರು.  

ಮಳೆಯೇ ಪರಿಹಾರ: ಜೂನ್ ಆರಂಭದಲ್ಲೇ ಮುಂಗಾರು ಮಳೆ ಬಿದ್ದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಇಲ್ಲವಾದರೆ, ಪರಿಸ್ಥಿತಿ ಗಂಭೀರವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಮಳೆಗಾಗಿ ಪ್ರಾರ್ಥನೆ: ಮಳೆಗಾಗಿ ಶ್ರೀಕೃಷ್ಣಮಠ, ಚಂದ್ರಮೌಳೀಶ್ವರ, ಅನಂತೇಶ್ವರ, ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಿಯಾಳ ಅಭಿಷೇಕ ಮಾಡಲಾಗಿದೆ. ಆದರೂ ವರುಣ ಕೃಪೆ ತೋರಿಲ್ಲ. ಮಳೆ ಬೀಳದಿದ್ದರೆ ಜಲಕ್ಷಾಮ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ನಾಗರಿಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು