ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ನೀರಿದೆ, ಬೇಸಗೆ ಅಂತ್ಯಕ್ಕೆ ಸಮಸ್ಯೆ ಕಾಡಲಿದೆ

ಬಜೆ ಅಣೆಕಟ್ಟೆಯಲ್ಲಿ 2 ತಿಂಗಳಿಗಾಗುವಷ್ಟು ನೀರಿದೆ, ಆತಂಕ ಬೇಡ: ನಗರಸಭೆ
Last Updated 28 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಉಡುಪಿ: ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆರೆ, ಕಟ್ಟೆ, ತೋಡು, ಬಾವಿಗಳು ಬರಿದಾಗುತ್ತಿವೆ. ಮಳೆಗಾಲದಲ್ಲಿ ಹಿಡಿದಿಟ್ಟ ನೀರು ಬೇಸಗೆ ಮುಗಿಯುವವರೆಗೂ ಉಳಿಯುವುದೇ ಎಂಬ ಆತಂಕ ಕಾಡುತ್ತಿದೆ. ಮೇ, ಜೂನ್‌ ಹೊತ್ತಿಗೆ ವರುಣನ ಪ್ರವೇಶವಾದರೆ ಆತಂಕ ಮರೆಯಾಗಲಿದೆ. ಇಲ್ಲವಾದರೆ, ಈ ವರ್ಷವೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಬಿಸಿ ತಟ್ಟುವುದು ನಿಶ್ಚಿತ.

2019ರ ಕಹಿ ನೆನಪು

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಬಾಧಿಸಿದ ವರ್ಷ 2019. ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಕರಾವಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿತ್ತು. ಜಲ ಮೂಲಗಳು ಬತ್ತಿ ಜನ–ಜಾನುವಾರು ನೀರಿಗೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿತ್ತು. ಕುಡಿಯುವ ನೀರಿನ ಸಮಸ್ಯೆಯಿಂದ ಅತಿ ಹೆಚ್ಚು ಬಾಧಿತವಾಗಿದ್ದು ಉಡುಪಿ ನಗರ.

ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟೆ ಸಂಪೂರ್ಣ ಬರಿದಾಗಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ 6 ದಿನಗಳಿಗೊಮ್ಮೆ ನಳ್ಳಿಯಲ್ಲಿ ನೀರು ಪೂರೈಕೆ ಮಾಡಲಾಗಿತ್ತು. ಹೆಚ್ಚಿನ ಸಮಸ್ಯೆಗಳಿದ್ದ ವಾರ್ಡ್‌ಗಳಿಗೆ ಟ್ಯಾಂಕರ್ ನೀರು ಕೊಡಲಾಗಿತ್ತು. ಸಮಸ್ಯೆ ಪರಿಹರಿಸಲು ಬಜೆಗೆ ನೀರುಣಿಸುವ ಸ್ವರ್ಣಾ ನದಿಯ ಪಾತ್ರಗಳಾದ ಶಿರೂರು, ಮಾಣೈ, ಭಂಡಾರಿಬೆಟ್ಟು ಸೇರಿದಂತೆ ಹಲವು ಕಡೆಗಳಲ್ಲಿ ಡ್ರೆಜ್ಜಿಂಗ್ ಮಾಡಲಾಗಿತ್ತು.

ಬೃಹತ್‌ ಗುಂಡಿಗಳಿಗೆ ಪಂಪ್‌ಗಳನ್ನು ಅಳವಡಿಸಿ ನೀರೆತ್ತಿ ಬಜೆ ಜಲಾಶಯದಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ನೀರು ಕೊಡಲಾಯಿತು. ಕೇವಲ ಡ್ರೆಜಿಂಗ್ ಕಾರ್ಯಕ್ಕೆ ₹ 45 ಲಕ್ಷಕ್ಕೂ ಹೆಚ್ಚು, ಟ್ಯಾಂಕರ್‌ಗೆ ₹ 20ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗಿತ್ತು. ಬರೋಬ್ಬರಿ ಒಂದೂವರೆ ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಡುಪಿ ನಗರವನ್ನು ಬಹುವಾಗಿ ಕಾಡಿತ್ತು.

ಆದರೆ, ಈ ಬಾರಿಯ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ ಎನ್ನುತ್ತಿದೆ ನಗರಸಭೆ. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿದೆ. ಮುಂದಿನ 60 ದಿನಗಳಿಗೆ ಸಾಲುವಷ್ಟು ನೀರು ಬಜೆ ಜಲಾಶಯದಲ್ಲಿ ಸಂಗ್ರಹವಾಗಿದೆ ಎನ್ನುತ್ತಾರೆ ನಗರಸಭೆಯ ಕಾರ್ಯಪಾಲಕ ಎಂಜಿನಿಯರ್‌ ಮೋಹನ್‌ರಾಜ್‌.

ಕಳೆದವರ್ಷ ಮಳೆಗಾಲ ಮುಗಿಯುತ್ತಿದ್ದಂತೆ ನೀರು ಪೋಲಾಗದಂತೆ ಶಿರೂರು, ಬಜೆ ಸೇರಿದಂತೆ ಮೂರು ಕಡೆಗಳಲ್ಲಿ ಬಂಡ್‌ ಹಾಕಲಾಯಿತು. ಬಜೆ ಸುತ್ತಮುತ್ತಲಿನ 5 ಗ್ರಾಮ ಪಂಚಾಯಿತಿಗಳಿಗೆ ಹಿಂದೆ ಕೊಡಲಾಗುತ್ತಿದ್ದ 24 ಗಂಟೆ ನೀರು ಪೂರೈಕೆ ಅವಧಿಯನ್ನು 6 ಗಂಟೆಗೆ ಕಡಿತಗೊಳಿಸಿ ಬೇಸಗೆಗೆ ನೀರು ಉಳಿಸಿಕೊಳ್ಳಲಾಯಿತು.

ಪರಿಣಾಮ ಬಜೆ ಜಲಾಶಯದಲ್ಲಿ 5.35 ಮೀಟರ್ ನೀರು ಸಂಗ್ರಹವಿದೆ. 1.2 ಮೀಟರ್ ಡೆಡ್‌ ಸ್ಟೋರೇಜ್‌ ಹೊರತುಪಡಿಸಿಯೂ 4 ಮೀಟರ್‌ ನೀರನ್ನು ಉಡುಪಿ ನಗರಕ್ಕೆ ಪೂರೈಕೆ ಮಾಡಬಹುದು. ದಿನಕ್ಕೆ 5 ರಿಂದ 6 ಸೆ.ಮೀ ನೀರು ಖರ್ಚಾದರೂ, ಲಭ್ಯವಿರುವ 400 ಸೆ.ಮೀ ನೀರನ್ನು ಕನಿಷ್ಠ 60 ದಿನಗಳಿಗೆ ಬಳಸಬಹುದು. ಮೇ ಅಂತ್ಯದವರೆಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.

ಸಾಮಾನ್ಯವಾಗಿ ಮೇ ಅಂತ್ಯ ಅಥವಾ ಜೂನ್‌ನಲ್ಲಿ ಮಳೆ ಬರುವುದು ವಾಡಿಕೆ. ಮಳೆ ಬಾರದಿದ್ದರೂ ಬಜೆ ಜಲಾಶಯದ ಪಾತ್ರದಲ್ಲಿ ಸಂಗ್ರಹವಾಗಿರುವ ನೀರನ್ನು ಡ್ರೆಜ್ಜಿಂಗ್ ಮೂಲಕ ಎತ್ತಿ 15 ದಿನ ನೀರು ಕೊಡುತ್ತೇವೆ. ಈ ವರ್ಷ ನಗರ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುವ ಸನ್ನಿವೇಶ ಎದುರಾಗುವ ಸಾಧ್ಯತೆಗಳು ಬಹಳ ಕಡಿಮೆ. ಮಣಿಪಾಲ, ಉಡುಪಿ, ಹಾಗೂ ಮಲ್ಪೆ ವಿಭಾಗಗಳನ್ನಾಗಿ ವಿಂಗಡಿಸಿ ನೀರು ಪೂರೈಸಲಾಗುತ್ತಿದೆ. ಬೇಡಿಕೆ ಆಧರಿಸಿ ಮಣಿಪಾಲಕ್ಕೆ ನಿತ್ಯ 10 ತಾಸು, ಉಳಿದ ಎರಡು ವಿಭಾಗಗಳಿಗೆ 6 ತಾಸು ನೀರು ಕೊಡಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಎಇಇ ಮೋಹನ್‌ ರಾಜ್‌.

ಮತ್ತೊಂದೆಡೆ, ಜಿಲ್ಲಾಡಳಿತ ಕೂಡ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಲು ತಾಲ್ಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚನೆಗೆ ಸೂಚಿಸಿದೆ. ತಹಶೀಲ್ದಾರ್‌ಗಳು, ಇಒಗಳು ಸಭೆನಡೆಸಿ, ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.

ಅತಿ ಹೆಚ್ಚು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಪಿಡಿಒ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ಗಳ ಅಭಿಪ್ರಾಯ ಪಡೆದು ಟೆಂಡರ್ ಸಿದ್ಧಪಡಿಸುವಂತೆ ಸೂಚಿಸಿರುವ ಜಿಲ್ಲಾಧಿಕಾರಿ, ಅಗತ್ಯಬಿದ್ದರೆ ಖಾಸಗಿ ಬೋರ್ ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಕೊಡುವಂತೆ ತಹಶೀಲ್ದಾರ್‌ಗಳಿಗೆ ಆದೇಶ ನೀಡಿದ್ದಾರೆ.

‘ಈ ವರ್ಷ ಸಮಸ್ಯೆ ಕಾಡದು‘

2019ರಲ್ಲಿ ಬಜೆಯಲ್ಲಿ ನಡೆದ ಡ್ರೆಜ್ಜಿಂಗ್ ಹಾಗೂ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ₹ 70 ಲಕ್ಷಕ್ಕೂ ಹೆಚ್ಚು ಖರ್ಚಾಗಿತ್ತು. ನೀರಿನ ಪೋಲು ತಡೆಗೆ ನಗರಸಭೆ ಕ್ರಮ ಕೈಗೊಂಡಿದ್ದರಿಂದ 2020ರಲ್ಲಿ ಡ್ರೆಜ್ಜಿಂಗ್‌ಗೆ ₹ 13 ಲಕ್ಷ ಖರ್ಚಾದರೆ, ಈ ವರ್ಷ ₹ 5 ರಿಂದ 6 ಲಕ್ಷ ಮಾತ್ರ ಬಳಸಲಾಗುವುದು. ಪ್ರತಿನಿತ್ಯ 6 ತಾಸು ನೀರು ಬಿಡಲಾಗುವುದು ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನ್ ರಾಜ್ ತಿಳಿಸಿದರು.

‘ನರೇಗಾ ಅಡಿ ನೀರು ಹಿಡಿದಿಡಲು ಶ್ರಮ’

ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಜಲಜೀವನ್‌ ಯೋಜನೆಯಡಿ ನೀರು ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಟಾಸ್ಕ್‌ ಫೋರ್ಸ್‌ಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾದ ಕೂಡಲೇ ಅಗತ್ಯವಿರುವ ಕಡೆ ಬೋರ್‌ವೆಲ್‌ಗಳನ್ನು ಕೊರೆಯಿಸಲಾಗುವುದು. ತೆರೆದ ಬಾವಿಗಳಿಂದ ಬೇಸಗೆಯಲ್ಲಿ ನೀರು ನೀಡಲಾಗುವುದು. ಮುಂದಿನ ವರ್ಷ ಬೇಸಗೆಯಲ್ಲಿ ಸಮಸ್ಯೆ ಬಾಧಿಸದಂತೆ ತಡೆಯಲು ನರೇಗಾ ಅಡಿಯಲ್ಲಿ ಬಾವಿಗಳ ನಿರ್ಮಾಣಕ್ಕೆ ಹಾಗೂ ಬತ್ತಿದ ಬೋರ್‌ವೆಲ್‌ಗಳಿಗೆ ಜಲ ಮರುಪೂರಣಕ್ಕೆ ಆದ್ಯತೆ ನೀಡಲಾಗಿದೆ. ಜಲಶಕ್ತಿ ಯೋಜನೆಯಡಿ ‘ಕ್ಯಾಚ್‌ ದ ರೇನ್‌ ವೇರ್ ಇಟ್‌ ಫಾಲ್ಸ್‌, ವೆನ್‌ ಇಟ್ ಫಾಲ್ಸ್‌’ ಎಂಬ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್‌ ಭಟ್ ತಿಳಿಸಿದರು.

‘ಕಾರು ತೊಳೆದರೆ 5,000 ದಂಡ’

ಸಾರ್ವಜನಿಕರಿಗೆ ನೀರಿನ ಮಹತ್ವದ ಅರಿವಿರಬೇಕು. ಉದ್ಯಾನ ನಿರ್ವಹಣೆಗೆ, ಕಾರು ತೊಳೆಯಲು ಕುಡಿಯುವ ನೀರಿನ ಬಳಕೆ ಮಾಡುವುದು ಬೇಡ. ಯಾರಾದರೂ ನಿಯಮ ಉಲ್ಲಂಘಿಸಿದರೆ ₹ 5,000 ದಂಡ ವಿಧಿಸಲಾಗುವುದು ಎಂದು ನಗರಸಭೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT