ಭಾನುವಾರ, ಜೂನ್ 26, 2022
26 °C
ಉದ್ಯೋಗ ಸೃಷ್ಟಿಗೆ ಒತ್ತು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ಡಿ.ಕೆ.ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಘೋಷಣೆ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕಿರಿಮಂಜೇಶ್ವರದಲ್ಲಿರುವ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿನೀಡಲು ಉಡುಪಿಗೆ ಬಂದಿದ್ದ ಸಂದರ್ಭ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾವಳಿಯಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಬೆಂಗಳೂರು, ಮುಂಬೈ, ದುಬೈ, ಸೌದಿ ಅರೆಬಿಯಾಗೆ ಕರಾವಳಿಗರು ವಲಸೆಹೋಗುವುದನ್ನು ತಡೆಯಲು ಸ್ಥಳೀಯ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದರು.

ಮಂಗಳೂರು ಹಾಗೂ ಉಡುಪಿ ಜಿಲ್ಲೆಯವರಲ್ಲಿ ಉದ್ಯಮಶೀಲತೆ ಗುಣಗಳಿದ್ದು, ಉದ್ಯೋಗಗಳನ್ನು ಸೃಷ್ಟಿಸುವ ಶಕ್ತಿ ಇದೆ. ಇದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದರು.

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತ್ಯಜಿಸಿದರೂ ಒಬ್ಬ ಕಾರ್ಯಕರ್ತ ಕೂಡ ಪಕ್ಷ ತೊರೆಯಲಿಲ್ಲ. ಪಕ್ಷದ ಜತೆ ದೃಢವಾಗಿ ನಿಂತ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರು ಹಾಗೂ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದು, ಪಕ್ಷದ ವರಿಷ್ಠರು, ಶಾಸಕಾಂಗ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡಿದ್ದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ್ದಕ್ಕೆ ಶೀಘ್ರವೇ ಪಶ್ಚಾತ್ತಾಪ ಪಡಲಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ನೀಡಿರುವ ಸ್ಥಾನಮಾನ ನೋಡಿದರೆ ಮನಸ್ಸಿಗೆ ಬೇಜಾರಾಗುತ್ತದೆ ಎಂದರು.

ಪ್ರಮೋದ್ ಪಕ್ಷ ತೊರೆದಿದ್ದಕ್ಕೆ ಕಾರ್ಯಕರ್ತರು ಜಗ್ಗಿಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರಲು ಉತ್ಸಾಹ ತೋರುತ್ತಿದ್ದಾರೆ. ಉಡುಪಿಯಲ್ಲಿ ಶೀಘ್ರ ಕಾರ್ಯಕರ್ತರ ಸದಸ್ಯತ್ವ ನೋಂದಣಿ ಕಾರ್ಯ ಆರಂಭಿಸಲಾಗುವುದು ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಪಕ್ಷದ ನಾಯಕತ್ವ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇದ್ದವರು ಪಕ್ಷದಲ್ಲಿ ಉಳಿಯಬಹುದು. ಬ್ಲಾಕ್‌ಮೇಲ್‌ ಮಾಡುವ ನಾಯಕರು ಮುಂದಿನ ದಾರಿ ನೋಡಿಕೊಳ್ಳಲಿ ಎಂದು ಕಾಂಗ್ರೆಸ್‌ ತೊರೆಯಲು ಸಿದ್ಧರಾಗಿರುವ ಮುಖಂಡರಿಗೆ ಡಿ.ಕೆ.ಶಿವಕುಮಾರ್ ಬಿಸಿ ಮುಟ್ಟಿಸಿದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಕ್ತಾರ ಭಾಸ್ಕರ್‌ ರಾವ್ ಕಿದಿಯೂರು, ಮುಖಂಡರಾದ ಯು.ಆರ್.ಸಭಾಸತಿ, ಕುಶಲ ಶೆಟ್ಟಿ, ಬಿ.ನರಸಿಂಹಮೂರ್ತಿ, ಅಣ್ಣಯ್ಯ ಸೇರಿಗಾರ್, ಕೃಷ್ಣಮೂರ್ತಿ ಕಿನ್ನಿಮೂಲ್ಕಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರೋಶನ್ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು