ಗುರುವಾರ , ನವೆಂಬರ್ 21, 2019
20 °C

ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು: ಇಬ್ಬರ ಬಂಧನ

Published:
Updated:
Prajavani

ಉಡುಪಿ: ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶುಕ್ರವಾರ ಮಹಿಳೆಯೊಬ್ಬರ ಬ್ಯಾಗ್ ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳದ ಆರ್‌ಪಿಎಫ್‌ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನ ಅಬ್ದುಲ್‌ ರಶೀದ್‌ ಹಾಗೂ ಬಂಟ್ವಾಳದ ಇಶಾಕ್‌ ಬಂಧಿತರು. ಆರೋಪಿಗಳಿಂದ ₹ 23,700, ಮೊಬೈಲ್‌, ವಾಚ್‌, ಮೆಡಿಸನ್‌ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತ್ರಿವೆಂಡ್ರಮ್‌ನಿಂದ ಕುರ್ಲಾ ಮಧ್ಯೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಭೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ ಸತ್ಯಭಾಮ ಎಂಬುವರ ಬ್ಯಾಗ್‌ ಕಿತ್ತು ಆರೋಪಿಗಳು ಭಟ್ಕಳದಲ್ತಇ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದರು. ವಿಷಯ ತಿಳಿದ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಆರೋಪಿಗಳು ಸಮೀಪದ ಸೇತುವೆ ಕೆಳಗೆ ಸಿಕ್ಕಿಬಿದ್ದಿದ್ದಾರೆ.

ಸತ್ಯಭಾಮ ಅವರ ಮೊಬೈಲ್‌ಗೆ ಬಂದಿದ್ದ ಕರೆಗಳ ಆಧಾರದ ಮೇಲೆ ಸಂಬಂಧಿಕರನ್ನು ಸಂಪರ್ಕಿಸಿದಾಗ ಅಳಿಯ ಶ್ಯಾಮ್ ಎಂಬುವರು ಸಂಪರ್ಕಕ್ಕೆ ಸಿಕ್ಕು ವಿವರ ನೀಡಿದರು. ಸತ್ಯಭಾಮ ಕೇರಳದಿಂದ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ. ಶ್ಯಾಮ್ ಅವರು ನೀಡಿದ ದೂರಿನ ಮೇಲೆ ಆರೋಪಿಗಳ ವಿರುದ್ಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಶಾಕ್ ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅ.30ರಂದು ಮಂಗಳೂರು ರೈಲು ನಿಲ್ದಾಣದಲ್ಲಿ ಚಿನ್ನದ ಸರ ಕಳವು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)