ಮಂಗಳವಾರ, ಅಕ್ಟೋಬರ್ 15, 2019
22 °C
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌

ಶಿಕ್ಷಣದಿಂದ ಮಹಿಳಾ ಸಬಲೀಕರಣ

Published:
Updated:
Prajavani

ಉಡುಪಿ: ಹೆಣ್ಣು ಮಕ್ಕಳ ಸಬಲೀಕರಣದಿಂದ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಶುಕ್ರವಾರ ಮಕ್ಕಳ ಸಹಾಯವಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಿಟ್ಟೂರಿನ ಸ್ತ್ರೀ ಸೇವಾ ನಿಕೇತನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನ ಮಾನ ಕೊಡಬೇಕು ಎಂದು ಹೇಳುತ್ತೇವೆ. ಆದರೆ, ಹೆಣ್ಣು ಮತ್ತು ಗಂಡನ್ನು ಬೆಳೆಸುವ ರೀತಿ ನೋಡಿದರೆ ಸಮಾನತೆ ನೀಡದಿರುವುದು ಕಾಣುತ್ತದೆ. ತಾರತಮ್ಯ ಮಾಡದೆ, ಪುರುಷನಷ್ಟೆ  ಮಹಿಳೆಗೂ ಶಿಕ್ಷಣ ನೀಡಿ ಆಕೆಯನ್ನು ಆರ್ಥಿಕವಾಗಿ ಸಬಲಳಾಗಿಸಬೇಕು ಎಂದು ಕಿವಿಮಾತು ಹೇಳಿದರು.

ಮಹಿಳೆಯರ ಉದ್ಯೋಗದ ಪ್ರಮಾಣ ಶೇ 50ಕ್ಕೆ ಏರಿದಾಗ ನಿಜವಾದ ಸಮಾನತೆ ಸಿಕ್ಕಂತಾಗುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ವಿತರಣೆಯಾಗಬೇಕು. ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಕೆಲಸವಾಗಬೇಕು. ಹಾಸ್ಟೆಲ್, ಶಾಲೆ, ಅಂಗನವಾಡಿಗಳ ಸುಧಾರಣೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ ಮಾತನಾಡಿ, ಅನಾದಿ ಕಾಲದಿಂದಲೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ. ಇದರ ನಡುವೆಯೂ ಸಮಾಜಕ್ಕೆ ಮಾದರಿಯಾಗಿ ಬದುಕಿದ ಹೆಣ್ಣುಗಳ ನಿದರ್ಶನವೂ ನಮ್ಮ ಮುಂದಿದೆ ಎಂದರು.

ಹೆಣ್ಣು ಮಗುವನ್ನು, ವೃದ್ಧ ಪೋಷಕರನ್ನು ತ್ಯಾಜ್ಯದಂತೆ ಹೊರಗೆಸೆಯುವ ಘಟನೆಗಳು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ. ಬಾಲ್ಯ ವಿವಾಹ, ಕೌಟುಂಬಿಕ ಹಿಂಸೆ, ಲೈಂಗಿಕ ಶೋಷಣೆ ಮುಂತಾದ ಅನಿಷ್ಟಗಳು ಒಂದೆಡೆಯಾದರೆ, ಬಾಹ್ಯಾಕಾಶದಲ್ಲಿ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುತ್ತಿರುವ ನಾರಿಯರು ಮತ್ತೊಂದೆಡೆ ಎಲ್ಲರಿಗೂ ಸ್ಫೂರ್ತಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಶಕ್ತಿ, ಶಿಕ್ಷಣದಿಂದ ಆರ್ಥಿಕ ಸಬಲತೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಬಾಲ ಮಂದಿರದ ಮಕ್ಕಳಿಗೆ ಉಡುಗೊರೆ ನೀಡಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ.ಫುಟಾರ್ಡೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌, ಮಾಹೆಯ ವಿದ್ಯಾರ್ಥಿ ಆಪ್ತ ಸಮಾಲೋಚಕಿ ಶಿಲ್ಪಾ ಜೋಶಿ, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಜನಾರ್ದನ ಭಟ್ ಸ್ವಾಗತಿಸಿದರು, ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಕಸ್ತೂರಿ ವಂದಿಸಿದರು.

Post Comments (+)