ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವ ರಂಗಗಳಲ್ಲೂ ಮಹಿಳಾ ಹೆಜ್ಜೆಗುರುತು ಮೂಡಲಿ

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಕಿವಿಮಾತು
Last Updated 18 ಮಾರ್ಚ್ 2023, 14:38 IST
ಅಕ್ಷರ ಗಾತ್ರ

ಉಡುಪಿ: ಮಹಿಳೆಯರು ಮುಕ್ಕಾಲು ಪಾಲು ಕ್ಷೇತ್ರಗಳಲ್ಲಿ ಸಮಾನತೆ ಪಡೆದುಕೊಂಡಿದ್ದು ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರವೇಶ ಪಡೆದು ಪ್ರಾಬಲ್ಯ ಸಾಧಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಹೇಳಿದರು.

ನಗರದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಶಿಕ್ಷಣವಂತರಾಗುವುದರೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಿ ಎಲ್ಲ ರಂಗಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥೈಸಿಕೊಂಡು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಮಹಾಭಾರತ ರಾಮಾಯಣ ಕಾಲಗಳಿಂದಲೂ ಮಹಿಳೆಯರು ಸಮಾನತೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಕ್ಕಮಹಾದೇವಿ ಅವರಂತಹ ಮಹಾನ್ ಸಮಾಜ ಸುಧಾರಕರು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಹೋಗಲಾಡಿಸಲು ಹೋರಾಟ ಮಾಡಿದ ಮಹಿಳೆಯರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗುತ್ತಾ ಬಂದಿದ್ದು, ಇಂದಿಗೂ ಕೆಲವು ಭಾಗಗಳಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಕಾಣಬಹುದು. ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕರ್ನಾಟಕದ ಮೊದಲ ಜಿಲ್ಲೆ ಉಡುಪಿಯಾಗಿದೆ ಎಂದು ಹೆಮ್ಮೆಪಟ್ಟರು.

ಒಂದು ಕುಟುಂಬ, ಸಮಾಜ ಅಥವಾ ದೇಶವನ್ನು ಕಟ್ಟುವಂತಹ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ಒಟ್ಟಾಗಿ ಕೆಲಸ ಮಾಡಬೇಕು. ಮಹಿಳೆಯ ಏಳ್ಗೆಗೆ ಪುರುಷರು ಕೂಡ ಪ್ರೋತ್ಸಾಹ ನೀಡಬೇಕು. ಸಮಾಜದ ಕಟ್ಟುಪಾಡು, ಆಚಾರ, ವಿಚಾರ, ನೀತಿ-ನಿಯಮಗಳನ್ನು ಅರ್ಥೈಸಿಕೊಂಡರೆ ಮಾತ್ರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮುನ್ನಡೆಸಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್‌.ಶರ್ಮಿಳಾ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಅಡುಗೆ ಮನೆಯಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೂ ಕಾಲಿಟ್ಟಿದ್ದಾಳೆ. ಎಲ್ಲ ರಂಗಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

ಸಮಾಜ ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಬೇಕು. ಈಗಲೂ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ಫೋಕ್ಸೋಗಳಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಆತಂಕಕಾರಿ. ಮಹಿಳೆಯರು ಸಂವಿಧಾನ ಅಡಿಯಲ್ಲಿ ನೀಡಲಾಗಿರುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳದೆ ಹೆಚ್ಚು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ನವೀನ್ ಕುಮಾರ್ ಎಚ್.ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವಿನಿ ಮತ್ತು ಸ್ವ-ಸಹಾಯ ಗುಂಪುಗಳಲ್ಲಿ ಸಾಧನೆಗೈದ ಮಹಿಳಾ ಒಕ್ಕೂಟಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಲೆಕ್ಕಾಧಿಕಾರಿ ಪ್ರಸನ್ನ, ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ, ಬೈಂದೂರು ಉನ್ನತಿ ಸಂಜೀವಿನಿ ತಾಲ್ಲೂಕು ಮಟ್ಟದ ಸುಶೀಲಾ, ಹೆಬ್ರಿ ಸಂಜೀವಿನಿ ಮಟ್ಟದ ಕಲಾವತಿ, ಸ್ವರ್ಣ ಸಂಜೀವಿನಿ ಮಟ್ಟದ ಜಿಲ್ಲಾಧ್ಯಕ್ಷೆ ಲತಾ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT