ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಗಾನದಲ್ಲಿ ಆಧುನಿಕತೆ ಇರಲಿ, ಕಲೆಯ ಪರಿಧಿ ಮೀರದಿರಲಿ’

’ರಂಗವಿಚಿಕಿತ್ಸೆ’ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ವಿಮ‌ರ್ಶಕ ಎ.ಈಶ್ವರಯ್ಯ
Last Updated 24 ಜೂನ್ 2018, 11:04 IST
ಅಕ್ಷರ ಗಾತ್ರ

ಉಡುಪಿ: ಯಕ್ಷಗಾನ ಕಲಾವಿದರು ಸಿನಿಮಾ ಆಕರ್ಷಣೆಗೊಳಗಾಗಿ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ.ಸಣ್ಣ ವಿಷಯಗಳಿಗೂ ಬಳಕೆಯಾಗುತ್ತಿರುವ ಯಕ್ಷಗಾನವು ವಸ್ತು, ತಂತ್ರ, ಶೈಲಿ ಕಳೆದುಕೊಳ್ಳುತ್ತಿದೆ ಎಂದು ವಿಮ‌ರ್ಶಕ ಎ.ಈಶ್ವರಯ್ಯ ವಿಷಾಧಿಸಿದರು.

ಕಟೀಲುಸಿತ್ಲ ಫೌಂಡೇಶನ್‌, ಮಾಹೆ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಧ್ವನ್ಯಾಲೋಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟೀಲು ಸಿತ್ಲ ರಂಗನಾಥ ರಾವ್ ನಿರೂಪಿತ, ಡಾ.ಕೆ.ಎಂ. ರಾಘವ ನಂಬಿಯಾರ್ ರಂಗವಿಚಾರಗಳಿಗೆ ಸಂಬಂಧಿಸಿದ ’ರಂಗವಿಚಿಕಿತ್ಸೆ’ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಲಕ್ಕೆ ಅನುಗುಣವಾಗಿ ಪ್ರತಿಯೊಂದು ಕಲೆಯೂ ಆಧುನಿಕತೆಯನ್ನು ಅನುಸರಿಸಬೇಕು. ಆದರೆ, ಕಲೆಯ ಪರಿಧಿಯನ್ನು ಮೀರಕೂಡದು. ಕಲೆಯ ಚೌಕಟ್ಟಿನಲ್ಲಿ ನಡೆಸಲಾಗುವ ಆಧುನಿಕತೆ ಒಪ್ಪಿತ ಎಂದರು.

ಶ್ರೀಮಂತ ಕಲೆಯಾಗಿರುವ ಯಕ್ಷಗಾನ ವ್ಯಕ್ತಿಕೇಂದ್ರಿತ ಕಲೆ. ಅದಕ್ಕೆ ನಿರ್ದಿಷ್ಟ ನಿಯಂತ್ರಣ ಇಲ್ಲದ ಕಾರಣ ವಿಕಾಸವಾಗುವ ಬದಲು ಮೂಲಸ್ವರೂಪದಿಂದ ವಿಸ್ತಾರಗೊಳ್ಳುತ್ತಿದೆ.ಲಕ್ಷ್ಯ ಪ್ರಧಾನವಾದ ಯಕ್ಷಗಾನದಂಥ ಕಲೆಗಳ ದಾಖಲೀಕರಣ ಅತ್ಯಗತ್ಯ. ಈ ಮೂಲಕ ಹವ್ಯಾಸಿ ಯಕ್ಷಗಾನ ಸಂಘಟನೆಗಳಿಂದ ಪಾರಂಪರಿಕ ಯಕ್ಷಗಾನದ ಉಳಿವು ಸಾಧ್ಯ ಎಂದರು.

ಯಕ್ಷಗಾನ ಸಂಶೋಧಕ ಡಾ.ರಾಘವ ನಂಬಿಯಾರ್ ಮಾತನಾಡಿ, ಯಕ್ಷಗಾನದ ಮೂಲಆಶಯಕ್ಕೆ ಧಕ್ಕೆ ಬಾರದಂತೆ ಇರುವ ರೂಪದಲ್ಲಿಯೇ ಹೊಸತನವನ್ನು ಆಸ್ವಾಧಿಸುವುದೇ ಆಧುನಿಕತೆ ಎಂದರು.

ಯಕ್ಷಗಾನ ಬಡವರ ಕಲೆಯಲ್ಲ. ಅದೊಂದು ಸಿರಿವಂತರ ಕಲೆ, ಆರಾಧನಾ ರೂಪದಲ್ಲಿದ್ದ ದೇವಾಲಯಗಳಿಂದ ಪೋಷಿತ ಕಲೆ. ಅದನ್ನು ಶಿಸ್ತಿಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ ಎಂದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಕೃತಿ ಅನಾವರಣಗೊಳಿಸಿ ಮಾತನಾಡಿ, ಯಕ್ಷಗಾನದ ಪರಂಪರೆ, ಆಧುನಿಕತೆ, ಸಾಂಗತ್ಯ ಹಾಗೂ ಪರಿವರ್ತನೆಯ ಮುಂದುವರಿದ ಭಾಗ ಈ ಪುಸ್ತಕದಲ್ಲಿ ದಾಖಲಾಗಿದೆ ಎಂದರು.

ಲೇಖಕ ಕಟೀಲು ಸಿತ್ಲ ರಂಗನಾಥ ರಾವ್, ಪ್ರಕಾಶಕ ಕಲ್ಲೂರು ನಾಗೇಶ್, ಸಿತ್ಲ ಫೌಂಡೇಶನ್ ಅಧ್ಯಕ್ಷ ಕಟೀಲು ಸಿತ್ಲ ಭಾಸ್ಕರ ರಾವ್ ಇದ್ದರು. ವಿದುಷಿ ಭ್ರಮರಿ ಶಿವಪ್ರಕಾಶ್ ನಿರೂಪಿಸಿದರು. ಸುಷ್ಮಿತಾ ಎ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT