ಶುಕ್ರವಾರ, ಡಿಸೆಂಬರ್ 2, 2022
23 °C

ಯಕ್ಷಗಾನ ಕಲಾವಿದ | ಭಾವಕ್ಕೆ ಜೀವ ತುಂಬುವ ಕೇಶವ

ಸಂದೇಶ್ ಶೆಟ್ಟಿ ಆರ್ಡಿ Updated:

ಅಕ್ಷರ ಗಾತ್ರ : | |

Prajavani

ಬಾಲ್ಯದಿಂದಲೆ ಯಕ್ಷಗಾನ ಕಲಾವಿದನಾಗಬೇಕೆಂದು ಆಸೆಹೊಂದಿದ ವ್ಯಕ್ತಿ ಹಲವು ಏಳುಬೀಳುಗಳೊಂದಿಗೆ ಕಠಿಣ ಅಭ್ಯಾಸದ ಪ್ರಯತ್ನವಾಗಿ ಕಲಾಭಿಮಾನಿಗಳಿಗೆ ರಂಜನೆ ನೀಡುತ್ತಿರುವ ಕೃಷಿ ಕುಟುಂಬದ ಯಶಸ್ವಿ ಕಲಾವಿದ. ರಂಗದಲ್ಲಿ ಪೋಷಕ ಪಾತ್ರ ನಿರ್ವಹಿಸುವ ಮೂಲಕ ಯಶಸ್ಸಿನ ಹೆಜ್ಜೆಯನ್ನಿರಿಸಿ ಸಾಗುತ್ತಿರುವ ಮಂದಾರ್ತಿ ಮೇಳದ ಉದಯೋನ್ಮುಖ ಕಲಾವಿದ ಕೇಶವ ಆಚಾರ್ಯ ಯಡಮೊಗೆ.

ಮಂದಾರ್ತಿ ಮೇಳದಲ್ಲಿ ಪ್ರಸ್ತುತ ಮುಂಡಾಸು ವೇಷಧಾರಿಯಾಗಿ ಗುರುತಿಸಿಕೊಂಡಿದ್ದರೂ, ಆ ವೇಷಕ್ಕೆ ಮಾತ್ರ ಸೀಮಿತವಾಗದೆ, ಖಳನಾಯಕ, ಹಾಸ್ಯ ವೇಷಕ್ಕೂ ಸೈ ಎನಿಸಿದ್ದಾರೆ ಅವರು. ತೆಂಕುತಿಟ್ಟು ಅಭ್ಯಾಸ ಮಾಡದಿದ್ದರೂ ತೆಂಕಿನ ಕಲಾವಿದರಂತೆ ರಂಗದಲ್ಲಿ ದಿಗಿಣ ಹಾಕುವುದನ್ನು ಗುರುವಿಲ್ಲದೆ ಅಭ್ಯಾಸ ಮಾಡಿದ ಹೆಗ್ಗಳಿಕೆ ಇವರದು. ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋ ನೋಡಿ, ತಾನು ಅವರಂತೆ ದಿಗಿಣ ಹೊಡೆಯಬೇಕೆನ್ನುವ ಛಲ ಮೂಡಿದಾಗಲೆ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡು ಅದನ್ನು ಕರಗತ ಮಾಡಿಕೊಂಡ ಸಾಧನೆಯ ಪಥದಲ್ಲಿರುವ ಸೌಮ್ಯ ಸ್ವಭಾವದ ಕಲಾವಿದ.

ಬನ್ನಂಜೆ ಕೇಂದ್ರದಲ್ಲಿ ಶಿಕ್ಷಣ: ’ಮುದ್ರಾಡಿ ಅಶೋಕ ಪೂಜಾರಿಯವರು ಯಕ್ಷಗಾನದ ಆಸಕ್ತಿ ಗುರುತಿಸಿ ಉಡುಪಿ ಯಕ್ಷಗಾನ ಕೇಂದ್ರದ ವಿಳಾಸ ನೀಡಿ ಸಹಕರಿಸಿದ್ದರು ಎನ್ನುವ ಕೇಶವ ಆಚಾರ್ಯ ಅವರು ಲಕ್ಷ್ಮೀನಾರಾಯಣ ಹಾಗೂ ಸಂಜೀವ ಸುವರ್ಣ ಅವರಿಂದ ಯಕ್ಷಗಾನದ ಮೂಲಪಾಠ ಕಲಿತರು. ಬಡಗು ತಿಟ್ಟಿನ ಸಂಪ್ರದಾಯದ ಕೊಂಡಿಯಂತಿದ್ದ ದಿವಂಗತ ಸುಬ್ರಹ್ಮಣ್ಯ ಆಚಾರ್ಯ, ಸತೀಶ ಕೆದ್ಲಾಯ, ಚೇರ್ಕಾಡಿ ಗಣೇಶ್ ನಾಯಕ್ ಅವರಿಂದ ತಾಳ, ನಾಟ್ಯ ಅಭ್ಯಾಸ ಮಾಡಿದರು.

ಯಾವುದೇ ವೇಷಕ್ಕೂ ಸೈ
ಸ್ಫುಟವಾದ ಮಾತು, ಹಿತವಾದ ನಾಟ್ಯದೊಂದಿಗೆ ಮುಂಡಾಸು ವೇಷ ಸೇರಿದಂತೆ ಖಳನಾಯಕನ ವೇಷಕ್ಕೂ ಸೈ ಎನಿಸಿಕೊಂಡಿದ್ದಾರೆ. ಆರ್ಗೋಡು ಮೋಹನದಾಸ ಶೆಣೈ, ತಾರಿಕೋಡ್ಲು ಉದಯಕುಮಾರ್, ಕೋಡಿ ವಿಶ್ವನಾಥ ಗಾಣಿಗ, ಹೆನ್ನಾಬೈಲು ಸಂಜೀವ ಶೆಟ್ಟಿ, ಹೆನ್ನಾಬೈಲು ವಿಶ್ವನಾಥ ಪೂಜಾರಿ, ನಿಟ್ಟೂರು ಅನಂತ ಹೆಗ್ಡೆ ಇವರುಗಳು ಯಕ್ಷಗಾನದ ನಾಟ್ಯ ಹಾಗೂ ಅರ್ಥಗಾರಿಕೆ ತಿದ್ದಿರುವುದನ್ನು ಸ್ಮರಿಸುತ್ತಾರೆ.ಅಭಿಮನ್ಯು ಕಾಳದ ಕರ್ಣ, ದೇವಿಮಹಾತ್ಮೆಯ ಚಂಡ-ಮುಂಡ, ಮಧುಕೈಟಭ, ವಿದ್ಯುನ್ಮಾಲಿ, ಶ್ವೇತಕುಮಾರ ಚರಿತ್ರೆಯ ಪ್ರೇತ, ರುದ್ರಕೋಪದ ಅಜ್ಜಿ, ಹಿರಣ್ಯಾಕ್ಷ, ಕುಂಭಕರ್ಣ, ರತಿಕಲ್ಯಾಣದ ಕೌಂಡ್ಲಿಕ, ವಸ್ತ್ರಾಪಹರಣದ ದುಶ್ಯಾಸನ, ಮಂದಾರ್ತಿ ಕ್ಷೇತ್ರಮಹಾತ್ಮೆಯ ದುರ್ಮುಖ, ರತ್ನಾಖ್ಯ ಇತ್ಯಾದಿ ಪಾತ್ರಗಳು ಬಹಳಷ್ಟು ಖ್ಯಾತಿ ಗಳಿಸಿಕೊಟ್ಟಿವೆ. ಕನಕಾಂಗಿ ಕಲ್ಯಾಣದಲ್ಲಿ ದಿಬ್ಬಣಕ್ಕೆ ಹೋದಾಗ ನಡೆಸಿದ ಹಾಸ್ಯ ಸನ್ನಿವೇಶ ಯೂಟ್ಯೂಬ್‌ನಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿದೆ. ಸೌಮ್ಯ ಹಾಗೂ ಖಳನಾಯಕ ಎರಡೂ ಪಾತ್ರಗಳಲ್ಲಿ ಮಿಂಚುತ್ತಿರುವ ಕೇಶವ ಆಚಾರ್ಯ ಅವರ ಪತ್ನಿ ಸುಶ್ಮಿತಾ. ಮಗ ಸುಮುಖ. ಹೊಸಂಗಡಿ ಯಡಮೊಗೆಯಲ್ಲಿ ವಾಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು