ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ವಾರಾಣಸಿಯಿಂದ ಯಕ್ಷಗಾನ ಕಲಿಯಲು ಉಡುಪಿಗೆ ಬಂದ 20 ವಿದ್ಯಾರ್ಥಿಗಳು

ಯಕ್ಷಗಾನ – ರಂಗಭೂಮಿಯ ಸಮ್ಮಿಲನ
Last Updated 15 ಮಾರ್ಚ್ 2022, 2:48 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲೆಗೆ ಮನಸೋತಿರುವ ಉತ್ತರ ಪ್ರದೇಶದ ವಾರಾಣಸಿಯ ರಾಷ್ಟ್ರೀಯ ನಾಟಕ ಶಾಲೆಯ (ನ್ಯಾಷನಲ್‌ ಸ್ಕೂಲ್ ಆಫ್ ಡ್ರಾಮ) ವಿದ್ಯಾರ್ಥಿಗಳು ಯಕ್ಷಗಾನ ಕಲಿಯಲು ಉಡುಪಿಗೆ ಬಂದಿದ್ದಾರೆ.

ಹಯಗ್ರೀವ ನಗರದಲ್ಲಿರುವ ಯಕ್ಷಗಾನ ಕಲಾಕೇಂದ್ರದಲ್ಲಿ ಎನ್‌ಎಸ್‌ಡಿಯ 20 ವಿದ್ಯಾರ್ಥಿಗಳಿಗೆ ಊಟ, ವಸತಿ ಸಹಿತ 1 ತಿಂಗಳ ಯಕ್ಷಗಾನ ತರಬೇತಿ (ಕೇಂದ್ರ ಸರ್ಕಾರದ ಪ್ರಾಯೋಜಿತ) ನೀಡಲಾಗುತ್ತಿದೆ. ಕರಾವಳಿಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ.

ಉತ್ತರ ಪ್ರದೇಶ, ಗುಜರಾತ್‌, ಜಾರ್ಖಂಡ್‌, ದೆಹಲಿ, ಮಧ್ಯಪ್ರದೇಶ, ಛತ್ತೀಸ್‌ಘಡ, ಒಡಿಶಾ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳು ಕೇಂದ್ರಕ್ಕೆ ಬಂದಿದ್ದು, ಆಯಾ ರಾಜ್ಯಗಳ ಜಾನಪದ ಕಲೆಗಳ ವಿನಿಮಯಕ್ಕೂ ಯಕ್ಷಗಾನ ಕಲಾಕೇಂದ್ರ ವೇದಿಕೆಯಾಗಿದೆ.

ತರಬೇತಿ ಹೇಗೆ?:ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಈಗಾಗಲೇ 3 ತಿಂಗಳು ರಂಗ ತರಬೇತಿ ಪಡೆದಿರುವ ವಿದ್ಯಾರ್ಥಿಗಳಿಗೆ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ನಾಟ್ಯದ ರಂಗಕ್ರಿಯೆಯ ಬಗ್ಗೆ, ರಂಗ ಸಾಧ್ಯತೆಗಳ ಬಗ್ಗೆ ಹಾಗೂ ರಂಗಭೂಮಿಗೆ ಪೂರಕವಾದ ಯಕ್ಷಾಭಿನಯವನ್ನು ಕಲಿಸಲಾಗುತ್ತಿದೆ.

ಗುರು ಸಂಜೀವ ಸುವರ್ಣರ ಗರಡಿಯಲ್ಲಿ ವಿದ್ಯಾರ್ಥಿಗಳು ಯಕ್ಷ ಹೆಜ್ಜೆಗಳನ್ನು ಹಾಕುತ್ತಿದ್ದು, ನಾಟಕ, ನೃತ್ಯ, ಅಭಿನಯ, ವಾಚಕಗಳನ್ನೊಳಗೊಂಡ ಸಂಪೂರ್ಣ ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

ತರಗತಿ ಅವಧಿ

ಪ್ರತಿದಿನ ಬೆಳಿಗ್ಗೆ 6 ರಿಂದ 8, 10 ರಿಂದ ಮಧ್ಯಾಹ್ನ 1, 3 ರಿಂದ 5 ಹಾಗೂ ಸಂಜೆ 6ರಿಂದ 9ರವರೆಗೆ ಒಟ್ಟು ನಾಲ್ಕು ಅವಧಿಯಲ್ಲಿ 12 ಗಂಟೆ ತರಬೇತಿ ನೀಡಲಾಗುತ್ತಿದೆ. 1 ತಿಂಗಳ ತರಬೇತಿ ಪೂರ್ಣವಾದ ಬಳಿಕ ವಿದ್ಯಾರ್ಥಿಗಳೇ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.

ಯಕ್ಷಗಾನದ ಜತೆಗೆ ಭೂತ ಕೋಲ, ದೈವಾರಾಧನೆ, ಭೂತಾರಾಧನೆ, ನಾಗಮಂಡಲ, ಕಂಬಳ ಸೇರಿದಂತೆ ಕರಾವಳಿಯ ಸಂಸ್ಕೃತಿ, ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ತಜ್ಞರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಡಿಯೋ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು ಎಂದು ಗುರು ಬನ್ನಂಜೆ ಸಂಜೀವ ಸುವರ್ಣ ಮಾಹಿತಿ ನೀಡಿದರು.

ಪ್ರತಿವರ್ಷ ಯಕ್ಷಗಾನ ಕೇಂದ್ರವು ರಾಷ್ಟ್ರೀಯ ಮಟ್ಟದ ಯಕ್ಷಗಾನ ಕಮ್ಮಟ ಆಯೋಜಿಸುತ್ತಾ ಬಂದಿದ್ದು, ಇದುವರೆಗೂ 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಯಕ್ಷಗಾನ ತರಬೇತಿ ಪಡೆದುಕೊಂಡಿದ್ದಾರೆ. ಹಿಂದಿ ಚಿತ್ರರಂಗ , ಧಾರಾವಾಹಿ ಕ್ಷೇತ್ರಗಗಳಲ್ಲಿ ನಟರಾಗಿ ಬದುಕು ರೂಪಿಸಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು ಸಂಜೀವ ಸುವರ್ಣರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT