ಬುಧವಾರ, ಮೇ 25, 2022
26 °C

ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ (96) ಭಾನುವಾರ ರಾತ್ರಿ ನಿಧನರಾದರು.

ಮೃತರಿಗೆ ಇಬ್ಬರು ಪುತ್ರರು, ಇಬ್ಭರು ಪುತ್ರಿಯರು ಇದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಂದಾಪುರ ತಾಲ್ಲೂಕಿನ ಬಸ್ರೂರಿನ ಮಾರ್ಗೋಳಿಯ ಗೋವಿಂದ ಶೇರಿಗಾರರು ಬಡಗು ನಡುತಿಟ್ಟು ಯಕ್ಷಗಾನ ರಂಗ ಕಂಡ ಪಾರಂಪರಿಕ ಶೈಲಿಯ ಅಗ್ರಮಾನ್ಯ ಸ್ತ್ರೀವೇಷಧಾರಿಗಳಲ್ಲಿ ಪ್ರಮುಖರು.

1926ರಲ್ಲಿ ಜನಿಸಿದ ಗೋವಿಂದ ಶೇರಿಗಾರರು ನಾಲ್ಕನೇ ತರಗತಿವರೆಗೆ ಓದು ಪೂರೈಸಿ ಯಕ್ಷಗಾನ ರಂಗದ ಬೆಡಗಿಗೆ ಮಾರು ಹೋಗಿ ಯಕ್ಷ ರಂಗವೇರಿದವರು. ಮಂದಾರ್ತಿ ಮೇಳಕ್ಕೆ ಕೋಡಂಗಿಯಾಗಿ ಸೇರಿ ಗೆಜ್ಜೆಕಟ್ಟಿ ತಿರುಗಾಟ ಶುರುವಿಟ್ಟರು. ವೀರಭದ್ರ ನಾಯಕರಿಂದ ನಾಟ್ಯ ಹಾಗೂ ರಂಗನಡೆ ಅಭ್ಯಾಸ ಮಾಡಿ ಸೌಕೂರು ಮೇಳ ಸೇರಿ ತಿರುಗಾಟದಲ್ಲಿ ಹಂತ ಹಂತವಾಗಿ ಕೋಡಂಗಿ, ಬಾಲಗೋಪಾಲ, ಸಖಿ, ಸ್ತ್ರೀ ವೇಷಗಳನ್ನು ಮಾಡಿ ಅನುಭವ ಗಳಿಸಿದರು.

ಮುಂದೆ ಬಡಗುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತರ ಒಡನಾಟದಲ್ಲಿ ಸಖಿ ಸ್ತ್ರೀವೇಷದ ಸ್ಥಾನ ಪಡೆದದ್ದು ಇವರ ಯಕ್ಷ ಜೀವನದ ಹಾದಿಯಲ್ಲಿ ದೊಡ್ಡ  ಮೈಲಿಗಲ್ಲಾಯಿತು.

ಅಮೃತೇಶ್ವರಿ ಮೇಳದಲ್ಲಿ ಹಾರಾಡಿ ನಾರಾಯಣ ಗಾಣಿಗರ ನಿರ್ದೇಶನದಲ್ಲಿ ಸಿಕ್ಕಿದ ಅವಕಾಶ ಸದುಪಯೋಗಪಡಿಸಿಕೊಂಡ  ಮಾರ್ಗೋಳಿಯವರು ಸ್ತ್ರೀವೇಷಧಾರಿಯಾಗಿ ಪರಿಪೂರ್ಣತೆಯತ್ತ ಹೆಜ್ಜೆ ಹಾಕಿದರು.

ನಿರಂತರ 53 ವರ್ಷಗಳ ತಿರುಗಾಟದಲ್ಲಿ  ಮಂದಾರ್ತಿ, ಮಾರಣಕಟ್ಟೆ ,ಅಮೃತೇಶ್ವರಿ, ಸೌಕೂರು, ಇಡಗುಂಜಿ ಮೇಳಗಳಲ್ಲಿ ತಿರುಗಾಟ ಮಾಡಿದ ಶೇರಿಗಾರರು 26 ವರ್ಷಗಳ ತಿರುಗಾಟವನ್ನು ಮಾರಣಕಟ್ಟೆ ಮೇಳದಲ್ಲೇ ಮಾಡಿದ್ದು ವಿಶೇಷ. ಜೊತೆಗೆ  ಯಕ್ಷಗಾನ ಲೋಕ ಕಂಡ  ಅಗ್ರಮಾನ್ಯ ಕಲಾವಿದರಾದ ಹಾರಾಡಿ ರಾಮ ಹಾರಾಡಿ, ಕುಷ್ಠ ಗಾಣಿಗರು, ವೀರಭದ್ರ ನಾಯಕರು ಶಿವರಾಮ ಹೆಗ್ಡೆಯವರು,   ಕೊಕ್ಕರ್ಣೆ ನರಸಿಂಹ ಕಾಮತರು, ಕೊಳಕೆಬೈಲು ಶೀನ ನಾಯ್ಕ್ , ಹಾರಾಡಿ ನಾರಾಯಣ ಗಾಣಿಗರು, ಉಪ್ಪೂರುದ್ವಯರು ಹಾಗೂ ಮರವಂತೆ ದಾಸ ಭಾಗವತರ ಜೊತೆ ತಿರುಗಾಟ ಮಾಡಿದವರು.

5 ದಶಕಗಳ ಕಾಲ ನಿರಂತರವಾಗಿ ಸ್ತ್ರೀ ವೇಷಧಾರಿಯಾಗಿದ್ದ ಮಾರ್ಗೋಳಿಯವರು ರಂಗದಲ್ಲಿ  ಶಶಿಪ್ರಭೆ ಮೀನಾಕ್ಷಿ, ಚಿತ್ರಾಂಗದೆ, ಪ್ರಭಾವತಿ, ಮೋಹಿನಿ ,ದಮಯಂತಿ, ಸುಗರ್ಭೆ, ಸುಭದ್ರೆ ,ಮದನಾಕ್ಷಿ, ತಾರಾವಳಿ, ಕೈಕೆ, ದೇವಿ ಮುಂತಾದ ವಿಭಿನ್ನ ಸ್ವಭಾವದ  ಸ್ತ್ರೀ ವೇಷಗಳನ್ನು ಸಮರ್ಥವಾಗಿ  ನಿರ್ವಹಿಸಿದ್ದಾರೆ. ಮೀನಾಕ್ಷಿ ಪಾತ್ರ ಪ್ರಸಿದ್ಧಿ ನೀಡಿದ ಪಾತ್ರ.

ಸ್ತ್ರೀ ಪಾತ್ರಗಳಿಗೆ ಸೀಮಿತವಾಗದೆ  ಪುರುಷ ವೇಷಗಳಾದ ಅರ್ಜುನ, ಕೃಷ್ಣ ,ರಾಮ ,ಈಶ್ವರ, ಕಮಲಭೂಪ, ಹಂಸಧ್ವಜ ವೇಷಗಳಲ್ಲಿ ಕೂಡ ಪರಿಪೂರ್ಣ ಅಭಿನಯವನ್ನು ಸಾಧಿಸಿ ಪ್ರಸಿದ್ಧಿ ಪಡೆದಿದ್ದಾರೆ.

ಇವರ ಪ್ರತಿಭೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. 2004ರಲ್ಲಿ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ  ಹಾಗೂ 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು