ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಸಮ್ಮೇಳನಕ್ಕೆ ಚಪ್ಪರ ಮೂಹೂರ್ತ

ಫೆ 11, 12ರಂದು ನಡೆಯಲಿರುವ ಸಮ್ಮೇಳನ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ
Last Updated 6 ಫೆಬ್ರುವರಿ 2023, 14:21 IST
ಅಕ್ಷರ ಗಾತ್ರ

ಉಡುಪಿ: ಫೆ.11 ಹಾಗೂ 12ರಂದು ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸೋಮವಾರ ಕಚೇರಿ ಹಾಗೂ ವೇದಿಕೆಯ ಕಚೇರಿಯ ಚಪ್ಪರ ಮೂಹೂರ್ತ ನೆರವೇರಿತು.

ಶಾಸಕ ರಘುಪತಿ ಭಟ್‌ ಮಾತನಾಡಿ, ಉಡುಪಿಯಲ್ಲಿ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಯುತ್ತಿದ್ದು ಅಭೂತಪೂರ್ವ ಯಶಸ್ಸಿಗೆ ಪೂರ್ವ ತಯಾರಿಗಳು ನಡೆಯುತ್ತಿವೆ. ಸಮ್ಮೇಳನ ಆಯೋಜನೆಗೆ ಸರ್ಕಾರದಿಂದ ₹2 ಕೋಟಿ ಮಂಜೂರಾಗಿದ್ದು ತಾಂತ್ರಿಕ ಸಮಸ್ಯೆಯ ಕಾರಣದಿಂದ ಇನ್ನೂ ಕೈಸೇರಿಲ್ಲ. ಶೀಘ್ರ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.

10,000 ಮಂದಿ ಕೂರುವ ಸಾಮರ್ಥ್ಯವಿರುವ ಬೃಹತ್ ಪ್ರಧಾನ ವೇದಿಕೆ ಹಾಗೂ ಯಕ್ಷಗಾನ ಸಂಬಂಧಿ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಎರಡು ಉಪ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಸಮ್ಮೇಳನ ನಡೆಯುವ ಎರಡೂ ದಿನ 40,000 ಮಂದಿಗೆ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಊಟೋಪಚಾರಕ್ಕೆ ₹ 4 ಕೋಟಿ ವ್ಯಯಿಸಲಾಗುತ್ತಿದೆ. ಕರಾವಳಿಯ ದಾನಿಗಳು ಸಮ್ಮೇಳನಕ್ಕೆ ಉದಾರ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.

ಫೆ.11ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಕ್ಷಗಾನ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿದ ಪರಿಕರಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಪ್ರದರ್ಶಿನಿ ಮಳಿಗೆಗಳನ್ನು ತೆರೆಯಲಾಗುತ್ತಿದೆ. ವಾಣಿಜ್ಯ ಮಳಿಗೆಗಳು ಇರಲಿವೆ. ಯಕ್ಷಗಾನದ ವೇಷತೊಟ್ಟು ಬಣ್ಣ ಹಾಕಿಕೊಂಡು ಫೋಟೊ ತೆಗೆಸಿಕೊಳ್ಳಲು ಪ್ರತ್ಯೇಕ ಮಳಿಗೆ ಇರಲಿದೆ. ಯುವ ಜನತೆಯನ್ನು ಸೆಳೆಯಲು ಸೆಲ್ಫಿ ಪಾಯಿಂಟ್‌ ನಿರ್ಮಿಸಲಾಗುತ್ತಿದೆ.

ಯಕ್ಷಗಾನ ಕರಾವಳಿಗೆ ಸೀಮಿತವಾದ ಕಲೆಯಲ್ಲ. ಸಮ್ಮೇಳನಕ್ಕೆ ರಾಜ್ಯದೆಲ್ಲೆಡೆಗಳಿಂದ ಯಕ್ಷಾಭಿಮಾನಿಗಳು, ಕಲಾವಿದರು ಆಗಮಿಸಬೇಕು. ಯಕ್ಷಗಾನದ ಸಂಭ್ರಮವನ್ನು ಸವಿಯಬೇಕು ಎಂದು ಶಾಸಕ ರಘುಪತಿ ಭಟ್ ಮನವಿ ಮಾಡಿದರು.

ಸಮ್ಮೇಳನದ ಯಶಸ್ಸಿಗೆ ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಚರ್ಚೆ ನಡೆಸಲಾಗಿದೆ ಎಂದರು.

ಈ ಸಂದರ್ಭ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್‌.ಹೆಗಡೆ, ಪ್ರಧಾನ ಸಂಚಾಲಕ ಪಿ.ಕಿಶನ್ ಹೆಗ್ಡೆ, ಸಂಚಾಲಕ ಮುರಳಿ ಕಡೇಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಾಘವೇಂದ್ರ ಕಿಣಿ ಹಾಗೂ ಸಲಹಾ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT