ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ವ್ಯಾಯಾಮವಲ್ಲ; ಜೀವನ ಕ್ರಮ

ದೇಹ, ಮನಸ್ಸಿನ ಆರೋಗ್ಯಕ್ಕೆ ಯೋಗ ಅವಶ್ಯ; ಪತಂಜಲಿ ಚಿಕಿತ್ಸಾಲಯದ ಮುಖ್ಯಸ್ಥ ಸುರೇಶ್ ಭಕ್ತ
Last Updated 20 ಜೂನ್ 2019, 16:10 IST
ಅಕ್ಷರ ಗಾತ್ರ

ಯೋಗ ದೈಹಿಕ ಕಸರತ್ತಲ್ಲ; ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಸದೃಢವಾಗಿರಲು ಹಾಗೂ ಮನಸ್ಸು, ದೇಹವನ್ನು ಸಮತೋಲನವಾಗಿಟ್ಟುಕೊಳ್ಳಲು ಯೋಗ ಅಗತ್ಯ ಎನ್ನುತ್ತಾರೆ ಪತಂಜಲಿ ಯೋಗ ಸಮಿತಿಯ ಸುರೇಶ್‌ ಭಕ್ತ.

ಇಂದಿನ ಧಾವಂತದ ಬದುಕಿನಲ್ಲಿ ನಿತ್ಯ ಸಮಸ್ಯೆಗಳೊಂದಿಗೆ ಹೋರಾಡಬೇಕು. ಅದು ಮಾನಸಿಕ, ಆರ್ಥಿಕ ಅಥವಾ ಆರೋಗ್ಯದ ಸಮಸ್ಯೆಗಳಿರಬಹುದು. ಯೋಗ ಮೈಗೂಡಿಸಿಕೊಂಡರೆ ಇಂತಹ ಜಟಿಲ ಸಮಸ್ಯೆಗಳಿಗೆ ಎದೆಯೊಡ್ಡಿ ನಿಲ್ಲಬಹುದು ಎನ್ನುತ್ತಾರೆ ಅವರು.

ಯೋಗ ಎಲ್ಲರಿಗೂ ಕೈಗೆಟುಕುವಂಥದ್ದು. ದುಬಾರಿ ಸಾಧನಗಳು ಬೇಕಿಲ್ಲ. ಹಣ ವ್ಯಯಿಸುವ ಅಗತ್ಯವೂ ಇಲ್ಲ. ಮಕ್ಕಳಿಂದ ವೃದ್ಧರವರೆಗೂ ಸರಳವಾಗಿ ಯೋಗ ಕಲಿಯಬಹುದು. ನೀರು, ಗಾಳಿ, ವಾತಾವಾರಣ ಕಲುಷಿತವಾಗಿರುವ ಇಂದಿನ ಕಾಲಘಟ್ಟದಲ್ಲಿ ಆರೋಗ್ಯಯುತ ಜೀವನಕ್ಕೆ ಯೋಗವೇ ಮದ್ದು ಎನ್ನುತ್ತಾರೆ ಸುರೇಶ್‌.

ಯೋಗ ಸರ್ವವ್ಯಾಪಿಯಾಗಬೇಕು ಎಂಬ ಉದ್ದೇಶದಿಂದ ಪತಂಜಲಿ ಸಂಸ್ಥೆ ಎಲ್ಲೆಡೆ ಶಿಬಿರಗಳನ್ನು ಆಯೋಜಿಸುತ್ತಿದೆ. ಉಡುಪಿ ತಾಲ್ಲೂಕಿನಲ್ಲಿ 24 ಕಡೆ ಹಾಗೂ ಕುಂದಾಪುರ, ಕಾರ್ಕಳ ತಾಲ್ಲೂಕಿನ ಹಲವೆಡೆ ಉಚಿತ ಯೋಗ ಶಿಕ್ಷಣ ನೀಡಲಾಗುತ್ತಿದೆ. ಭಜನಾ ಮಂಡಳಿ, ಯುವಕ ಮಂಡಳಿ, ಮಹಿಳಾ ಸಂಘಗಳು ಆಸಕ್ತಿ ತೋರಿದರೆ ಅವರಿದ್ದಲ್ಲಿಯೇ ಹೋಗಿ ವಿಶೇಷ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಯೋಗ ಕಲಿಸುತ್ತಲೇ ಉತ್ತಮ ಯೋಗ ಶಿಕ್ಷಕರನ್ನು ತಯಾರು ಮಾಡುವುದು, ಅವರಿಂದ ಮತ್ತಷ್ಟು ಜನರಿಗೆ ಯೋಗ ಹೇಳಿಕೊಡುವುದು ಸಂಸ್ಥೆಯ ಉದ್ದೇಶ. ಯೋಗ ಎಂದರೆ ವ್ಯಾಯಾಮ ಮಾತ್ರವಲ್ಲ; ಅದೊಂದು ಜೀವನ ಕ್ರಮ.

ದೇಹ ಹಾಗೂ ಮನಸ್ಸಿನ ಆರೋಗ್ಯ ಆಹಾರ ಸೇವನೆಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಯೋಗದ ಜತೆಗೆ ದೈನಂದಿನ ದಿನಚರಿ ಕಲಿಸಲಾಗುತ್ತದೆ. ಪ್ರತಿದಿನ ಎಷ್ಟು ನೀರು ಸೇವಿಸಬೇಕು, ಯಾವ ಆಹಾರ ಆರೋಗ್ಯಯುತ ಎಂಬುದನ್ನು ಹೇಳಿಕೊಡಲಾಗುತ್ತಿದ್ದು, ಇದು ಯೋಗದ ಮೊದಲ ಪಾಠ ಎನ್ನುತ್ತಾರೆ ಸುರೇಶ್‌.

ದುಶ್ಚಟಗಳ ನಿಯಂತ್ರಣ ಸಾಧ್ಯ:ದುಶ್ಚಟಗಳಿಂದ ದೂರವಿರಲು ಯೋಗಕ್ಕಿಂತ ಉತ್ತಮ ಮದ್ದು ಬೇರೆ ಇಲ್ಲ. ಮಾನಸಿಕ ಖಿನ್ನತೆ, ದುಶ್ಚಟಗಳಿಗೆ ದಾಸರಾದವರು ಯೋಗದಿಂದ ಗುಣಮುಖರಾಗಿದ್ದಾರೆ. ಎಲ್ಲ ರೋಗಗಳನ್ನೂ ಎದುರಿಸಬಲ್ಲ ಶಕ್ತಿ ಯೋಗಕ್ಕೆ ಬಿಟ್ಟರೆ ಬೇರೆಯಾವ ಚಿಕಿತ್ಸಾ ಪದ್ಧತಿಗೂ ಇಲ್ಲ ಎನ್ನುತ್ತಾರೆ ಅವರು.

ನೋವಿಗೆ ರಾಮಬಾಣ:ಸೊಂಟ ನೋವು, ಬೆನ್ನು ನೋವು, ಮಣಿಗಂಟು ನೋವು, ಆರ್ಥರೈಟಿಸ್‌ನಂತಹ ಸಮಸ್ಯೆಗಳನ್ನು ಯೋಗದಿಂದ ನಿವಾರಿಸಿಕೊಳ್ಳಬಹುದು. ಜತೆಗೆ, ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಎಂತಹ ಕಠಿಣ ಸವಾಲುಗಳನ್ನು ಎದುರಿಸಬೇಕು. ಇದಕ್ಕೆ ಏಕಾಗ್ರತೆ, ಮಾನಸಿಕ ಸ್ಥಿರತ ಅಗತ್ಯವಿದ್ದು, ಯೋಗದಿಂದ ಇದೆಲ್ಲವೂ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT