ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕ್ಕೆ ಯೋಗ ಕೊಟ್ಟಿದ್ದು ಭಾರತ’

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಯೋಗ ದಿನ: ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತಿ
Last Updated 23 ಜೂನ್ 2021, 16:37 IST
ಅಕ್ಷರ ಗಾತ್ರ

ಉಡುಪಿ: ಭಾರತ ಜಗತ್ತಿಗೆ ಯೋಗ ದಯಪಾಲಿಸಿತು. ವಿಶ್ವಯೋಗ ದಿನಾಚರಣೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಯೋಗದ ಮಹತ್ವವನ್ನು ವಿಶ್ವಕ್ಕೆ ತಿಳಿಸಿದರು ಎಂದು ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಈಚೆಗೆ ನಡೆದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ‘ಜಗತ್ತು ಆರೋಗ್ಯ ಬಯಸಿದಾಗ ಯೋಗವನ್ನು ಒಪ್ಪಿಕೊಂಡಿತು. ಯೋಗದ ಮಹತ್ವದ ಅರಿವು ಜನರಿಗೆ ಬರಲು ಕೊರೊನಾ ಬರಬೇಕಾಯಿತು’ ಎಂದರು.

‘ದೇಶಕ್ಕೆ ಯೋಗ ಎಂಬ ಔಷಧಿಯನ್ನು ಋಷಿಮುನಿಗಳು ಕೊಟ್ಟಿದ್ದಾರೆ. ಯೋಗ ಅವಧಿ ಮುಗಿಯದ ಔಷಧಿಯಂತೆ; ಅನೂರ್ಜಿತಗೊಳ್ಳುವುದಿಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಬಳಸಿಕೊಂಡು ಅವಧಿ ರಹಿತವಾಗಿ ಜೀವಿಸಬೇಕು. ಯಾವ ಕಾಯಿಲೆಗೆ ಯಾವ ಆಸನ ಮಾಡಬೇಕು ಎಂಬುದು ಯೋಗ ವಿದ್ಯೆಯಲ್ಲಿದೆ. ಅದನ್ನರಿತು ಯೋಗ ಮಾಡಿದರೆ ಭಾರತ ಆರೋಗ್ಯವಂತ ರಾಷ್ಟ್ರವಾಗುವುದು’ ಎಂದರು.

ಯೋಗ ಗುರು ಡಾ. ಶ್ರೀಕಾಂತ ಸಿದ್ಧಾಪುರ ಮಾತನಾಡಿ, ‘ಯೋಗ ಎಂದರೆ ಆಸನ, ಪ್ರಾಣಾಯಾಮ ಹಾಗೂ ಧ್ಯಾನ ಮಾತ್ರವಲ್ಲ, ಯೋಗ ವಿಸ್ತಾರವಾದುದು. ಸಮಾಜದ ಆರೋಗ್ಯದ ದೃಷ್ಟಿಯಿಂದ ಆಸನ, ಪ್ರಾಣಯಾಮ ಹಾಗೂ ಧ್ಯಾನಗಳಿಗೆ ಪ್ರಾಮುಖ್ಯ ಕೊಡಬೇಕಾಗಿದೆ. ಆಸನ ಹಾಗೂ ಪ್ರಾಣಾಯಾಮಗಳನ್ನು ಹಂತಹಂತವಾಗಿ ಗುರು ಮುಖೇನ ಅಭ್ಯಸಿಸಬೇಕು. ದೇಹ ಹಾಗೂ ಶ್ವಾಸಕೋಶ ಯೋಗಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ಹಾಗಾಗಿ ತಾಳ್ಮೆಯಿಂದ ಅಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.

ಯೋಗ ಮಾಡುವಾಗ ಉಸಿರಾಟದ ಕಡೆ ಗಮನವಿರಲಿ. ಇದರಿಂದ ಮನಸ್ಸಿನ ನಿಯಂತ್ರಣ ಸಾಧ್ಯ. ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಗಿನ ಆಮ್ಲಜನಕವನ್ನು ದೇಹದ ವಿವಿಧ ಭಾಗಗಳ ಚಟುವಟಿಕೆಗಳಿಗೆ ಪೂರಕವಾಗಿ ಒದಗಿಸಬಹುದು. ಆಸನಗಳು ಹೆಚ್ಚಿನ ಆಮ್ಲಜನಕ ಸ್ವೀಕರಿಸಲು ಸಹಕರಿಸುತ್ತವೆ. ಕೊರೊನ ರೋಗದಿಂದ ಆಗುವ ಗಂಭೀರ ಪರಿಣಾಮಗಳನ್ನು ಪ್ರಾಣಾಯಾಮದ ಮೂಲಕ ಎದುರಿಸಬಹುದು ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುಕನ್ಯಾ ಮೇರಿ ಅಧ್ಯಕ್ಷತೆ ವಹಿಸಿದರು. ಆನ್‌ಲೈನ್‌ ಯೋಗದಲ್ಲಿ 200ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ರಮಾನಂದ ರಾವ್ ಸ್ವಾಗತಿಸಿದರು. ಸುಧಾಕರ್ ಸಹಕರಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT