ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯದಲ್ಲಿ ಯೋಗ ಅಡಗಿದೆ: ವಿದ್ಯಾಧೀಶ ಸ್ವಾಮೀಜಿ

ಭರತಮುನಿ ಜಯಂತ್ಯುತ್ಸವ ಉದ್ಘಾಟನೆ
Last Updated 25 ಡಿಸೆಂಬರ್ 2018, 12:32 IST
ಅಕ್ಷರ ಗಾತ್ರ

ಉಡುಪಿ: ನೃತ್ಯ ಕಲೆಗೆ ಮನಸ್ಸಿನ ಕ್ಲೇಶ ಹಾಗೂ ದೇಹದ ಆಲಸ್ಯ ನಿವಾರಣೆ ಮಾಡುವ ಶಕ್ತಿ ಇದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಪರ್ಯಾಯ ಪಲಿಮಾರು ಮಠ, ಶ್ರೀಕಷ್ಣ ಮಠದ ಆಶ್ರಯದಲ್ಲಿ ಮಂಗಳವಾರ ರಾಜಾಂಗಣದಲ್ಲಿ ರಾಧಾಕಷ್ಣ ನತ್ಯ ನಿಕೇತನ ಸಂಸ್ಥೆ ಹಮ್ಮಿಕೊಂಡಿದ್ದ ಭರತಮುನಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ನೃತ್ಯ ಕೇವಲ ಮನರಂಜನೆಗೆ ಸೀಮಿತವಾಗದೆ, ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯ ಎದುರಿಸುತ್ತಿರುವ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿ ರೂಪುಗೊಂಡಿದೆ. ನೃತ್ಯ ಮನಸ್ಸಿಗೆ ಮುದ ನೀಡುವುದರೊಂದಿಗೆ ಮಾನಸಿಕ ಒತ್ತಡ ನಿವಾರಿಸುತ್ತದೆ. ದೈಹಿಕ ಬಳಲಿಕೆಯನ್ನು ನಿವಾರಿಸಿ ಮನಸ್ಸನ್ನು ಪ್ರಶಾಂತವಾಗಿರಿಸುತ್ತದೆ. ನೃತ್ಯದಿಂದ ಚಿತ್ತ ಶಾಂತಿ ದೊರೆತು ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ ಎಂದರು.

ಪ್ರಾಶ್ಚಾತ್ಯ ಸಂಸ್ಕೃತಿಯು ಬೇರೆ ಬೇರೆ ರೀತಿಯಲ್ಲಿ ದೇಶವನ್ನು ಪ್ರವೇಶಿಸಿದೆ. ಈ ಕಾಲಘಟ್ಟದಲ್ಲಿ ಪ್ರಾಚೀನ ಸಂಸ್ಕೃತಿ ಉಡುಗೆ ತೊಡುಗೆ, ಹಾಡುಗಾರಿಕೆಯನ್ನು ರಕ್ಷಣೆ ಮಾಡಬೇಕಿದೆ. ನಾಟ್ಯ ಆರಾಧನೆಯ ಮೂಲಕ ಭಗವಂತನ ದರ್ಶನ ಪಡೆಯಲು ಸಾಧ್ಯ ಎಂದು ಹೇಳಿದರು.

ರಾಧಾ ಕೃಷ್ಣ ಸಂಸ್ಥೆ 17ವರ್ಷಗಳಿಂದ ಶ್ರೀಕೃಷ್ಣನಿಗೆ ನೃತ್ಯ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. ಸಂಸ್ಥೆಯ ಕಾರ್ಯ ಶ್ಲಾಘನೀಯ; ಸೇವೆ ನಿರಂತರವಾಗಿರಲಿ ಎಂದರು.

ಸಾಹಿತಿ ಅಂಬಾತನಯ ಮುದ್ರಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಅಲೆವೂರು ಸುಂದರ ಸೇರಿಗಾರ್, ವಿದುಷಿ ರೂಪಶ್ರೀ ಮಧುಸೂದನ್‌, ವಿದುಷಿ ಪೊನ್ನಮ್ಮ ದೇವಯ್ಯ, ಕುಚುಪುಡಿ ನೃತ್ಯ ಗುರು ಡಾ.ಸರಸ್ವತಿ ರಜತೇಶ್‌, ವಿದುಷಿ ಗಾಯತ್ರಿ ಅಭಿಷೇಕ್, ಕಲ್ಯಾಣಿ ಜೆ.ಪೂಜಾರಿ, ಶ್ವೇತಶ್ರೀ ಭಟ್‌, ಸುಷ್ಮಾ ಡಿ.ಪ್ರಭು, ವಿಜಯ ಕುಮಾರ್ ಉಪಸ್ಥಿತರಿದ್ದರು.

ಸಂಜೆ ಭರತ ನಾಟ್ಯ, ಕುಚುಪುಡಿ ಯಕ್ಷಗಾನ ಜುಗಲ್‌ಬಂದಿ, ಭರತ ನಾಟ್ಯ ಕಥಕ್ ಜುಗಲ್‌ಬಂದಿ, ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.

ಸಾಧಕರಿಗೆ ಪ್ರಶಸ್ತಿ

ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಅಲೆವೂರು ಸುಂದರ ಸೇರಿಗಾರ್, ವಿದುಷಿ ರೂಪಶ್ರೀ ಮಧುಸೂದನ್‌, ವಿದುಷಿ ಪೊನ್ನಮ್ಮ ದೇವಯ್ಯ, ಕೂಚುಪುಡಿ ನೃತ್ಯ ಗುರು ಡಾ.ಸರಸ್ವತಿ ರಜತೇಶ್‌ ಅವರಿಗೆ ಭರತ ಪ್ರಶಸ್ತಿ ಹಾಗೂ ವಿದುಷಿಗಳಾದ ಗಾಯತ್ರಿ ಅಭಿಷೇಕ್, ಕಲ್ಯಾಣಿ ಜೆ.ಪೂಜಾರಿ, ಶ್ವೇತಶ್ರೀ ಭಟ್‌, ಸುಷ್ಮಾ ಡಿ.ಪ್ರಭು ಅವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಹಾಗೂ ವಿಜಯ ಕುಮಾರ್ ಅವರಿಗೆ ಕಲಾರ್ಪಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT