ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗೀಂದ್ರ ಮರವಂತೆ ಅವರ ಪುಸ್ತಕ ಲಂಡನ್‌ನಲ್ಲಿ ಬಿಡುಗಡೆ

Published : 22 ಸೆಪ್ಟೆಂಬರ್ 2024, 7:26 IST
Last Updated : 22 ಸೆಪ್ಟೆಂಬರ್ 2024, 7:26 IST
ಫಾಲೋ ಮಾಡಿ
Comments

ಬೈಂದೂರು: ಲೇಖಕ ಯೋಗೀಂದ್ರ ಮರವಂತೆ ಅವರ ‘ನೀಲಿ ಫಲಕಗಳಲ್ಲಿ ನೆನಪಾಗಿ ನಿಂತವರು’ ಪುಸ್ತಕವನ್ನು ಇಂಗ್ಲೆಂಡ್‌ ಪ್ರವಾಸದಲ್ಲಿರುವ ಲೇಖಕ, ವಿಮರ್ಶಕ ಎಸ್. ದಿವಾಕರ್ ಶನಿವಾರ ಬಿಡುಗಡೆಗೊಳಿಸಿದರು. ಲಂಡನ್‌ನ ವೇಲ್ ಆಫ್ ಹೀತ್ ಬೀದಿಯಲ್ಲಿನ, ರವೀಂದ್ರನಾಥ ಟ್ಯಾಗೋರ್ ಅವರು ನೆಲೆಸಿದ್ದ ಮನೆಯ ಎದುರು ಕಾರ್ಯಕ್ರಮ ನಡೆಯಿತು.

ಲೇಖಕ ದಿವಾಕರ್ ಮಾತನಾಡಿ, ಲಂಡನ್ ಪ್ರಾಚೀನತೆ, ಆಧುನಿಕತೆಗಳ ವಿರೋಧಾಭಾಸವಾಗಿರುವ, ಜನಜಂಗುಳಿಯ ಮಾರುಕಟ್ಟೆಗಳ, ಪ್ರಶಾಂತ ಪಾರ್ಕ್‌, ಅರಮನೆಗಳು, ಪಬ್‌ಗಳ ಮಹಾನಗರ. ಇತಿಹಾಸ ಪ್ರಸಿದ್ಧರು ಇಲ್ಲಿ ಹಿಂದೊಮ್ಮೆ ವಾಸಿಸಿದ್ದ ಕಟ್ಟಡಗಳ ಗೋಡೆಯ ಮೇಲೆ ಬ್ಲೂಫ್ಲೆಕ್ಸ್ ಅಥವಾ ನೀಲಿಫಲಕ ಅಳವಡಿಸುವ ಪರಂಪರೆ ಇದೆ. ಅವುಗಳಲ್ಲಿ ಅಲ್ಲಿ ವಾಸಿಸಿದ್ದ ವ್ಯಕ್ತಿಯ ಹೆಸರು, ಅವನ ಜೀವಮಾನ, ಸಾಧನೆ, ಕ್ಷೇತ್ರದ ಸಂಕ್ಷಿಪ್ತ ಮಾಹಿತಿ ಇರುತ್ತದೆ. ಅಂತಹ ಸಾಧಕರ ಕುರಿತಾದ ಆಯ್ದ 28 ನಿರೂಪಣೆ ಪುಸ್ತಕದಲ್ಲಿದೆ ಎಂದರು.

ಇಂತಹ ನಗರದ ಕತೆಯನ್ನು ಸೂಚ್ಯವಾಗಿ, ಧ್ವನಿಪೂರ್ಣವಾಗಿ ನಿರೂಪಿಸಬಯಸುವ ಲೇಖಕನಿಗೆ ಇತಿಹಾಸ, ಅಪೂರ್ವ ಸಾಹಸಿಗಳ, ರಾಜಕೀಯ, ಕಲೆ, ಸಂಸ್ಕೃತಿಗಳ ಜ್ಞಾನವಿರಬೇಕು. ಲಂಡನ್ ಸಮೀಪದ ಬ್ರಿಸ್ಟಲ್ ನಗರದ ಏರ್‌ಬಸ್ ವಿಮಾನ ನಿರ್ಮಾಣ ಸಂಸ್ಥೆಯಲ್ಲಿ ತಂತ್ರಜ್ಞನಾಗಿ ದುಡಿಯುತ್ತಿರುವ ಯೋಗೀಂದ್ರ ಅವರಿಗೆ ಈ ಜ್ಞಾನ, ಸೂಕ್ಷ್ಮ ನಿರೀಕ್ಷಣಾ ಕೌಶಲ, ವಿಶಿಷ್ಟ ಭಾಷಾಶೈಲಿ ಇರುವುದನ್ನು ಈವರೆಗೆ ಪ್ರಕಟವಾದ ಅವರ ‘ಲಂಡನ್ ಡೈರಿ’, ‘ಮುರಿದ ಸೈಕಲ್ ಹುಲಾಹೂಪ್ ಹುಡುಗಿ’, ‘ನನ್ನ ಕಿಟಕಿ’, ‘ಏರೊ ಪುರಾಣ’ ಪ್ರಬಂಧ ಸಂಕಲನಗಳಲ್ಲಿ ಸಾದರಪಡಿಸಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದ ಈ ಪುಸ್ತಕವೂ ಓದುಗರ ಮೆಚ್ಚುಗೆ ಗಳಿಸಲಿದೆ ಎಂದರು.

ದಿವಾಕರ ಅವರ ಪತ್ನಿ, ಪ್ರಾಧ್ಯಾಪಕಿ, ಲೇಖಕಿ ಜಯಶ್ರೀ ಕಾಸರವಳ್ಳಿ, ಲಂಡನ್ ವಾಸಿ, ಮನೋವೈದ್ಯ ಡಾ.ಗೋಪಾಲಕೃಷ್ಣ ಹೆಗಡೆ, ಅವರ ಪುತ್ರಿ ಪೂರ್ಣಿಮಾ ಹೆಗಡೆ, ಬ್ರಿಸ್ಟಲ್‌ವಾಸಿ ತಂತ್ರಜ್ಞ ದೀಪಕ್ ಬಿ.ಜೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT