ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಿಕಾ ಆತಂಕ: ಎಚ್ಚರವಾಗಿರಲು ಸಾರ್ವಜನಿಕರಿಗೆ ಸಲಹೆ

ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕು: ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ
Last Updated 12 ಜುಲೈ 2021, 14:58 IST
ಅಕ್ಷರ ಗಾತ್ರ

ಉಡುಪಿ: ಕೇರಳದಲ್ಲಿ ಝಿಕಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಉಡುಪಿಯಲ್ಲಿ ಎಚ್ಚರ ವಹಿಸಲಾಗಿದೆ. ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೊರೊನಾ ಮಧ್ಯೆ ಝಿಕಾ ವೈರಸ್ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ತೆರನಾದ ಜ್ವರ ಕಾಣಿಸಿಕೊಂಡರೂ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಝಿಕಾ ವೈರಸ್ ಹರಡುವ ವಿಧಾನ

ಡೆಂಗಿ, ಚಿಕುನ್‌ ಗುನ್ಯಾ, ವೆಸ್ಟ್‌ ನೈಲ್ ಹಾಗೂ ಹಳದಿ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಝಿಕಾ ವೈರಸ್ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೇವಲ ಸೊಳ್ಳೆಗಳ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಹಾಗೂ ದೇಹದ ದ್ರವಗಳ ವಿನಿಮಯದಿಂದಲೂ ರೋಗ ಹರಡುತ್ತದೆ.

ಸದ್ಯ ಮಳೆಗಾಲವಾಗಿರುವುದರಿಂದ ವೈರಸ್ ಹರಡಲು ಅನುಕೂಲಕರ ವಾತಾವರಣವಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಎಚ್ಚರವಹಿಸಬೇಕು. ರೋಗ ಹರಡುವ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವಂತಹವಾಗಿದ್ದು, ಜಾಗ್ರತೆ ವಹಿಸಬೇಕು.

ರೋಗ ಲಕ್ಷಣಗಳು

ತೀವ್ರ ಜ್ವರ, ಮೈಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು ಕಾಣಿಸಿಕೊಳ್ಳುವುದು ರೋಗದ ಪ್ರಮುಖ ಲಕ್ಷಣವಾಗಿದ್ದು, ರಕ್ತ ಹಾಗೂ ಮೂತ್ರ ಪರೀಕ್ಷೆಯಿಂದ ಸೋಂಕು ಪತ್ತೆಹಚ್ಚಬಹುದು.

ಅಪಾಯಗಳು

ಗರ್ಭಿಣಿಯರು ಝಿಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಗರ್ಭಪಾತ ಆತಂಕವಿದ್ದು, ಹುಟ್ಟಲಿರುವ ಮಗುವಿಗೂ ಸೋಂಕು ರವಾನೆಯಾಗಬಹುದು. ಹುಟ್ಟುವ ಮಕ್ಕಳಲ್ಲಿ ಅಂಗಾಗ ನ್ಯೂನತೆ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ವಯಸ್ಕರಲ್ಲಿ ನರಗಳ ದೌರ್ಬಲ್ಯ ಕಾಣಿಸಿಕೊಳ್ಳಬಹುದು.

ಸೊಳ್ಳೆಗಳ ತಾಣ ನಾಶಪಡಿಸಿ

ಮನೆಯ ಸಮೀಪದಲ್ಲಿರುವ ಡ್ರಮ್, ಬ್ಯಾರೆಲ್, ನೀರಿನ ತೊಟ್ಟಿ, ಏರ್ ಕೂಲರ್, ಅನುಪಯುಕ್ತ ಟೈರ್, ಒಡೆದ ಮಡಕೆ, ತೆಂಗಿನ ಚಿಪ್ಪು, ತಾರಸಿ ಮನೆಗಳ ಮೇಲ್ಚಾವಣಿ, ಘನ ತ್ಯಾಜ್ಯ ವಸ್ತುಗಳು, ಅಡಿಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳು, ರಬ್ಬರ್‌ ತೋಟಗಳಲ್ಲಿ ರಬ್ಬರ್‌ ಸಂಗ್ರಹಿಸುವ ಕಫ್, ಹೂವಿನ ಕುಂಡಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುತ್ತವೆ.

ಮುಂಜಾಗ್ರತಾ ಕ್ರಮಗಳು

ಎಲ್ಲಿಯೂ ನೀರು ನಿಲ್ಲದಂತೆ ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸಿ, ಹೊರಾಂಗಣದಲ್ಲಿ ಮಲಗುವುದು ಬೇಡ, ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿ, ನೀರಿನ ತೊಟ್ಟಿ ಹಾಗೂ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ, ಸೊಳ್ಳೆ ಕಡಿತದಿಂದ ರಕ್ಷಣೆಗೆ ಮೈತುಂಬಾ ಬಟ್ಟೆ ಧರಿಸಿ, ಮನೆಯ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT