ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಬಳಿಕ ತೋಟ ನಿರ್ಮಿಸಿದ ಶಿಕ್ಷಕ!ನಿ

ತೋಟದಲ್ಲಿ ಬೆಳೆದು ನಿಂತ ಸಾವಿರಕ್ಕೂ ಹೆಚ್ಚು ಗಿಡಗಳು...
Last Updated 17 ಜೂನ್ 2018, 11:58 IST
ಅಕ್ಷರ ಗಾತ್ರ

ನಿವೃತ್ತಿ ಎಂಬುದು ಬಹುತೇಕರಿಗೆ ವಿಶ್ರಾಂತ ಜೀವನದ ದಾರಿ. ಆದರೆ, ಕೂಡ್ಲಿಗಿ ಪಟ್ಟಣದ ನಿವಾಸಿ 63ರ ವಯಸ್ಸಿನ ಬಿ. ಮಹಮದ್ ಶಫಿ ಉಲ್ಲಾ ಮಾತ್ರ ತಮ್ಮ ಕನಸಿನ ಸಾವಯವ ತೋಟವನ್ನು ನನಸು ಮಾಡುತ್ತಾ ಅವಿಶ್ರಾಂತ ದುಡಿಮೆಯಲ್ಲಿದ್ದಾರೆ.  ಅವರ ಎರಡು ಎಕರೆ ತೋಟದಲ್ಲಿ ಸಾವಿರಾರು ಮರಗಿಡಗಳು ನಳನಳಿಸುತ್ತಿವೆ.

ಅನುದಾನಿತ ಖಾಸಗಿ ಶಾಲೆಯಲ್ಲಿ ಸುಮಾರು 29 ವರ್ಷ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಸೇವಾವಧಿ ಮುಗಿಯಲು ಎರಡು ವರ್ಷ ಇರುವಾಗಲೇ ತೋಟ ಮಾಡುವ ಕುರಿತು ಯೋಚಿಸಿ, ಯೋಜಿಸಿದ್ದರು.

ನಿವೃತ್ತಿಗೆ ಒಂದು ವರ್ಷಕ್ಕೂ ಮೊದಲೇ, 2014ರ ನವಂಬರ್‌ನಲ್ಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಸಪೋಟ, ಪೇರಲ, ನಿಂಬೆ, ಸೀತಾಫಲ, ಮಾವು, ಪಪ್ಪಾಯಿ ತೆಂಗು, ಹಲಸು ಸೇರಿ ಸಾವಿರಕ್ಕ್ಕೂ ಹೆಚ್ಚು ಸಸಿಗಳನ್ನು ಆಂಧ್ರದ ರಾಜಮಂಡ್ರಿಯಿಂದ ತಂದು ನೆಟ್ಟಿದ್ದರು. ಅವುಗಳಲ್ಲಿ ಸೀತಾಫಲವೇ ಹೆಚ್ಚು. ಕೊಳವೆ ಬಾವಿಯ ನೀರನ್ನು ನೆಚ್ಚಿಕೊಂಡರುವ ಅವರು ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದು, ಯಾವುದೇ ರಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರದಿಂದ ತೋಟವನ್ನು ಬೆಳೆಸಿದ್ದಾರೆ. ಸಪೋಟ, ಪೇರಲ, ನಿಂಬೆ, ಮಾವು ಹಾಗೂ ಪಪ್ಪಾಯಿ ಮರಗಳಲ್ಲಿ ಹಣ್ಣುಗಳು ತೊನೆದಾಡುತ್ತಿವೆ. ತೆಂಗು, ಹಲಸು, ನೆರಳೆ, ನೆಲ್ಲಿ ಬೆಳೆಯುತ್ತಿವೆ.

ಎರಡು ವರ್ಷಗಳಿಂದ ದೊರಕಿರುವ ನಿಂಬೆ ಫಸಲನ್ನು ಮಾರಾಟ ಮಾಡದೆ ಸಂಬಂಧಿಗಳಿಗೆ ನೀಡಿರುವ ಅವರು ಹೆಚ್ಚು ಫಸಲು ಬಂದರೆ ಮಾರಾಟ ಮಾಡುವ ಚಿಂತನೆಯಲ್ಲಿ ಇದ್ದಾರೆ. ತೋಟದ ಉಳಿದ ಹಣ್ಣುಗಳು ಅವರ ಆದಾಯವನ್ನು ಹೆಚ್ಚಿಸಿವೆ.

ಅವರ ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಖಾಸಗಿ ಕಂಪನಿಗಳಲ್ಲಿದ್ದಾರೆ. ಮೂರನೆಯ ಮಗನಿಗೆ ಮೊಲ ಸಾಕಣೆಯಲ್ಲಿ ಅಸಕ್ತಿ ಇರುವುರಿಂದ ತೋಟದಲ್ಲೇ ಶೆಡ್ ನಿರ್ಮಾಣ ಕಾರ್ಯವೂ ನಡೆದಿದೆ.

‘ಆಳು ಅಗತ್ಯವಿಲ್ಲ’

ಮೊದಲ ಎರಡು ವರ್ಷಗಳಲ್ಲಿ 150 ಪಪ್ಪಾಯಿ ಗಿಡಗಳಿಂದ ಉತ್ತಮ ಆದಾಯ ಬಂದಿದೆ. ಸೀತಾಫಲ ಈ ವರ್ಷ ಸಾಕಷ್ಟು ಕಾಯಿ ಬಿಟ್ಟಿದ್ದು ಹೆಚ್ಚು ಆದಾಯ ತರಬಹುದು’ ಎಂದು ಷಫಿ ಉಲ್ಲಾ ಹೇಳಿದರು. ‘ನಮ್ಮ ಕೆಲಸಕ್ಕೆ ಆಳುಗಳನ್ನು ಇಟ್ಟುಕೊಂಡರೆ ಅವರಿಗೆ ನಾವೇ ಆಳುಗಳಾಗಬೇಕಾಗುತ್ತದೆ. ಅದ್ದರಿಂದ ನನ್ನ ಕೈಯಲ್ಲಿ ಶಕ್ತಿ ಇರುವವರಿಗೂ ನನ್ನ ತೋಟದ ಕೆಲಸವನ್ನು ನಾನೇ ಮಾಡಿಕೊಂಡು ಗಿಡಗಳನ್ನು ಬೆಳೆಸುತ್ತೇನೆಎಂಬುದು ಬಿ. ಮಹಮದ್ ಶಫಿ ಅವರ ವಿಶ್ವಾಸದ ನುಡಿ.

ಎ.ಎಂ. ಸೋಮಶೇಖರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT