ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಸ್ಟ್‌ ಎವರ್‌ ಅಲ್ಟ್ರಾ ಮ್ಯಾರಥಾನ್‌’ಗೆ ಸ್ವಾಗತ

ಸಮಾನ ಅವಕಾಶ ಜಾಗೃತಿಗಾಗಿ 150 ಕಿ.ಮೀ. ಓಡಲಿದ್ದಾರೆ ಅಂಧ ಕ್ರೀಡಾಪಟುಗಳು
Last Updated 24 ಜನವರಿ 2019, 12:25 IST
ಅಕ್ಷರ ಗಾತ್ರ

ರಾಮನಗರ: ಸಮಾನ ಅವಕಾಶ ಜಾಗೃತಿಗೆ ಆಗ್ರಹಿಸಿ ಆರು ಮಂದಿ ಅಂಧರು ‘ಫಸ್ಟ್‌ ಎವರ್‌ ಅಲ್ಟ್ರಾ ಮ್ಯಾರಥಾನ್‌’ ಹಮ್ಮಿಕೊಂಡಿದ್ದು, 150 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ.

ಸಮರ್ಥನಂ ಅಂಗವಿಕಲರ ಸಂಸ್ಥೆ, ಪಿಂಕಥಾನ್‌ ಸಹಯೋಗದಲ್ಲಿ ಆಯೋಜಿಸಿರುವ ಈ ಮ್ಯಾರಥಾನ್‌ನಲ್ಲಿ ದೃಷ್ಟಿಹೀನ ಕ್ರೀಡಾಪಟುಗಳಾದ ಎನ್‌.ಡಿ. ಸುನಿತಾ, ಎನ್‌.ಆರ್‌.ಕಾವ್ಯಾ, ಎಸ್‌.ಮಾಲಾ ಕೋಲ್ಕರ್‌, ನಂದೀಶ್‌ ಜನಾರ್ಧನ, ರೇಣುಕಾ ರಜಪೂತ್‌, ಅಜಯ್‌ ಈರಣ್ಣ ಪಾಲ್ಗೊಂಡಿದ್ದಾರೆ. ಬುಧವಾರ ಮುಂಜಾನೆ ಮೈಸೂರಿನಲ್ಲಿ ಮ್ಯಾರಥಾನ್‌ಗೆ ಚಾಲನೆ ದೊರೆತಿತ್ತು. ಅಲ್ಲಿಂದ ಹೊರಟ ಈ ತಂಡವು ರಾತ್ರಿ ಮದ್ದೂರಿನಲ್ಲಿ ವಿಶ್ರಮಿಸಿತ್ತು. ಗುರುವಾರ ಚನ್ನಪಟ್ಟಣ, ರಾಮನಗರದ ಮೂಲಕ ಪ್ರಯಾಣ ಮುಂದುವರಿಸಿದ್ದು, ಬಿಡದಿಯಲ್ಲಿ ವಿಶ್ರಮಿಸಿತು. ಶುಕ್ರವಾರ ಬೆಂಗಳೂರು ತಲುಪಲಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಓಟ ಮುಕ್ತಾಯವಾಗಲಿದೆ.

ಸಮರ್ಥನಂ ಟ್ರಸ್ಟ್‌ನ ಮುಖ್ಯ ತರಬೇತುದಾರ ಭೂಮಿಕಾ ಪಟೇಲ್ ಮಾರ್ಗದರ್ಶನದಲ್ಲಿ ಸಂಸ್ಥೆಯ ವೆಂಕಟೇಶ ಮೂರ್ತಿ, ರಾಜೇಶ್‌, ಭದ್ರೇಶ್‌, ನಂದೀಶ್, ಅಜಯ್‌ ಅರು ಈ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಸ್ವಾಗತ: ಮ್ಯಾರಥಾನ್‌ನ ಈ ಸ್ಪರ್ಧಿಗಳು ಗುರವಾರ ರಾಮನಗರದಲ್ಲಿ ತಮ್ಮ ಓಟ ಮುಂದುವರಿಸಿದರು. ಈ ಸಂದರ್ಭ ಇಲ್ಲಿನ ಅರ್ಚಕರಹಳ್ಳಿಯ ಬಾಲಗಂಗಾಧರನಾಥ ಸ್ವಾಮೀಜಿ ಅಂಧರ ಶಾಲೆಗೆ ಭೇಟಿ ನೀಡಿದರು.

ಈ ವೇಳೆ ಅಂಧರ ಶಾಲೆಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಲ್ಲಿ ಸ್ಪೂರ್ತಿ ತುಂಬಿದರು. ‘ ಕ್ರೀಡೆ ಪ್ರತಿಯೊಬ್ಬರ ಸ್ವತ್ತು. ಅಂಗವಿಕಲರೂ ಕ್ರೀಡೆಗಳಲ್ಲಿ ಭಾಗವಹಿಸುವ, ಸಂತೋಷವನ್ನು ಅನುಭವಿಸುವ ಹಕ್ಕಿದೆ. ಹಿಂಜರಿಕೆ, ಕೀಳರಿಮೆ ಬಿಟ್ಟು ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಸಿದ್ದರಾಗಬೇಕು’ ಎಂದು ಸ್ಪರ್ಧಿಗಳು ಕಿವಿಮಾತು ಹೇಳಿದರು.

ಅಂಗವೈಕಲ್ಯ ಶಾಪವಲ್ಲ: ಕ್ರೀಡಾಪಟುಗಳನ್ನು ಸ್ವಾಗತಿಸಿ ಮಾತನಾಡಿದ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರ ಸ್ವಾಮೀಜಿ ‘ಅಂಗವಿಕಲತೆಗೆ ಒಳಗಾದವರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅವರನ್ನು ಪ್ರೋತ್ಸಾಹಿಸಿ ನೈತಿಕ ಬೆಂಬಲ ನೀಡುವ ಅಗತ್ಯವಿದೆ’ ಎಂದು ಈ ಸಂದರ್ಭ ಹೇಳಿದರು.

‘ಸಾಮಾನ್ಯ ಮಕ್ಕಳಿಗಿಂತ ಅಂಗವಿಕಲ ಮಕ್ಕಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ. ಅದನ್ನು ಗುರುತಿಸುವಂತಹ ಜವಾಬ್ದಾರಿ ಪೋಷಕರ ಮತ್ತು ಶಿಕ್ಷಕರ ಮೇಲಿರುತ್ತದೆ’ ಎಂದು ತಿಳಿಸಿದರು.

ಬಿಜಿಎಸ್ ಅಂಧರ ಶಾಲೆಯ ಮುಖ್ಯಶಿಕ್ಷಕ ಶಿವರಾಂ ಇದ್ದರು.

*ಅಂಗವೈಕಲ್ಯ ಶಾಪವಲ್ಲ. ನೂರಾರು ಅಂಗವಿಕಲರು ಸಾಧನೆ ಮಾಡಿ ತೋರಿಸಿದ್ದಾರೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಬೇಕು
–ಅನ್ನದಾನೇಶ್ವರ ಸ್ವಾಮೀಜಿ,ಆದಿಚುಂಚನಗಿರಿ ಶಾಖಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT