4
ನಿರ್ವಹಣೆ ಕೊರತೆ, ಕೋಟ್ಯಂತರ ಹಣ ವ್ಯರ್ಥ

ಅವ್ಯವಸ್ಥೆ ಆಗರ ನಗರ ಸಾರಿಗೆ ಬಸ್‌ ತಂಗುದಾಣ

Published:
Updated:

ಶಿವಮೊಗ್ಗ: ನಗರದಲ್ಲಿರುವ ನಗರ ಸಾರಿಗೆ ಬಸ್‌ ತಂಗುದಾಣಗಳು ನಿರ್ವಹಣೆ ಕೊರತೆ ಎದುರಿಸುತ್ತಿದ್ದು, ಅವು ಅವ್ಯವಸ್ಥೆ ಆಗರವಾಗಿವೆ.

ಬಸ್‌ ತಂಗುದಾಣಗಳು ಸ್ವಚ್ಛವಾಗಿ ಅನೇಕ ವರ್ಷಗಳೇ ಕಳೆದಿವೆ ಎಂಬುವಷ್ಟು ಕಸ ಬಿದ್ದಿರುತ್ತದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ ಕಾಯುವ ಸ್ಥಿತಿ ಎದುರಾಗಿದೆ. ಸಂಸದರ ಮತ್ತು ಶಾಸಕರ ಅನುದಾನದಲ್ಲಿ ನಗರದಲ್ಲಿ 150ಕ್ಕೂ ಹೆಚ್ಚು ಸಿಟಿ ಬಸ್‌ ತಂಗುದಾಣಗಳು ನಿರ್ಮಾಣಗೊಂಡಿವೆ. ಅವುಗಳಲ್ಲಿ ಅನೇಕ ನಿಲ್ದಾಣಗಳಲ್ಲಿ ನಿರ್ವಹಣೆಯೇ ಇಲ್ಲದೆ ಕೋಟ್ಯಂತರ ಹಣ ವ್ಯರ್ಥವಾಗಿದೆ.

ಎಲ್ಲೆಲ್ಲಿ ನಿರ್ವಹಣೆ ಇಲ್ಲ: ಶಿವಪ್ಪ ನಾಯಕ ಪ್ರತಿಮೆ ಪಕ್ಕದ ಬಸ್‌ ತಂಗುದಾಣದಲ್ಲಿ ಪ್ರತಿದಿನ ನೂರಾರು ಪ್ರಯಾಣಿಕರು ಬಸ್‌ ಕಾಯುತ್ತಾರೆ. ಈ ನಿಲ್ದಾಣದ ಸುತ್ತಲೂ ಗಿಡಗಳು ಬೆಳೆದು ನಿಂತಿವೆ. ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಇನ್ನೂ ಸಿಟಿ ಸೆಂಟರ್ ಮಾಲ್‌ ಪಕ್ಕದಲ್ಲಿರುವ ತಂಗುದಾಣದಲ್ಲಿ ಕೂರಲು ಬೆಂಚುಗಳಿದ್ದರೂ ಅವುಗಳು ಮುರಿದು ಬಿದ್ದಿವೆ. ವೃದ್ಧರು, ರೋಗಿಗಳು ನೆಲದ ಮೇಲೆ ಕುಳಿತುಕೊಳ್ಳುವ ಸ್ಥಿತಿ ಇದೆ. ಬಾಲರಾಜ್ ಅರಸ್ ರಸ್ತೆಯ ಗಾಂಧಿ ಪಾರ್ಕ್‌ ಪಕ್ಕದ ನಿಲ್ದಾಣದಲ್ಲಿ ಶೌಚಾಲಯವು ಪಕ್ಕದಲ್ಲೇ ಇದ್ದು, ಪ್ರಯಾಣಿಕರು ಮೂಗು ಮುಚ್ಚಿ ನಿಲ್ಲುತ್ತಾರೆ. ಇನ್ನೂ ಹೊಳೆ ಬಸ್‌ ನಿಲ್ದಾಣ, ಗೋಪಾಳ, ನೆಹರೂ ರಸ್ತೆ, ವಿನೋಬನಗರ, ಕಲ್ಲಹಳ್ಳಿ, ಕಾಶೀಪುರ, ವಿದ್ಯಾನಗರ, ನವುಲೆ ಸೇರಿದಂತೆ ಅನೇಕ ಬಸ್‌ ತಂಗುದಾಣಗಳಲ್ಲಿ ಸ್ವಚ್ಛತೆ ಇಲ್ಲ. 

ಕೆಲವೆಡೆ ವಿದ್ಯುತ್‌ ದೀಪಗಳು ಇಲ್ಲದೆ ರಾತ್ರಿ ವೇಳೆ ಪುಂಡರು, ಪೋಕರಿಗಳ, ಕುಡುಕರ, ನಿರ್ಗತಿಕರ ತಾಣವಾಗಿ ಮಾರ್ಪಟ್ಟಿವೆ. ಎಲ್ಲೆಂದರಲ್ಲಿ ಬಿಸಾಡಿರುವ ಮದ್ಯದ ಬಾಟಲಿಗಳು ಕಾಣ ಸಿಗುತ್ತವೆ. ಖಾಸಗಿ ಕಂಪನಿಗಳ ಜಾಹಿರಾತು ಭಿತ್ತಿಪತ್ರಗಳಿಂದ ನಿಲ್ದಾಣದ ಗೋಡೆಗಳು ತುಂಬಿದ್ದು, ಬಸ್‌ ತಂಗುದಾಣಗಳು ಕಸದ ತೊಟ್ಟಿಗಳಾಗಿವೆ. ಕೆಲವು ತಂಗುದಾಣಗಳಲ್ಲಿ ಮಳೆ ಬಂದರೆ ನೀರು ಸೋರುವ ಸ್ಥಿತಿ ತಲುಪಿದರೆ. ಕೆಲವು ಬಸ್‌ ತಂಗುದಾಣಗಳು ಹೂವು, ಹಣ್ಣು, ಪಾನಿಪುರಿ ಮಾರುವ ಕೇಂದ್ರಗಳಾಗಿವೆ. 

ನಿರ್ವಹಣೆ ಏಕಿಲ್ಲ : ಸಿಟಿ ಬಸ್‌ ತಂಗುದಾಣಗಳು ನಿರ್ಮಾಣವಾದ ಪ್ರಾರಂಭದಲ್ಲಿ ಜಾಹಿರಾತು ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಂಡು ಅದರಿಂದ ಬಂದ ಹಣದಲ್ಲಿ ಬಸ್‌ ನಿಲ್ದಾಣಗಳ ನಿರ್ವಹಣೆ ಮಾಡಬೇಕು ಎಂಬ ಷರತ್ತಿನೊಂದಿಗೆ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಜಾಹಿರಾತು ಫಲಕಗಳು, ಶಾಸಕರ ಮತ್ತು ಸಂಸದರ ಭಾವಚಿತ್ರಗಳೊಂದಿಗೆ ರಾರಾಜಿಸುತ್ತಿದ್ದವು. ಆದರೆ, ಕ್ರಮೇಣ ಈಗ ಬಸ್‌ ತಂಗುದಾಣಗಲ್ಲಿ ಜಾಹಿರಾತು ಫಲಕಗಳ ಜಾಗದಲ್ಲಿ ಭಿತ್ತಿ ಪತ್ರಗಳು ರಾರಾಜಿಸುತ್ತಿದ್ದು, ಜಾಹಿರಾತು ಫಲಕಗಳು ಒಡೆದಿವೆ. ಇದರಿಂದ ಪಾಲಿಕೆಗೆ ಜಾಹಿರಾತು ಆದಾಯ ನಿಂತಿದ್ದು, ನಿರ್ವಹಣೆ ಕಾಣದಾಗಿವೆ.

ಕೆಲವೆಡೆ ಬಸ್‌ ತಂಗುದಾಣವೇ ಇಲ್ಲ: ಉಷಾ ನರ್ಸಿಂಗ್‌ ಹೋಂ, ಕಮಲಾ ನರ್ಸಿಂಗ್‌ ಹೋಂ, ಸವಳಂಗ ರಸ್ತೆ, ಮೈಲಾರಲಿಂಗೇಶ್ವರದ ಪಕ್ಕ, ವಿದ್ಯಾನಗರದ ಚನ್ನಗಿರಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕರ್ನಾಟಕ ಸಂಘದ ಎದುರು, ಬೊಮ್ಮನಕಟ್ಟೆ ಇನ್ನೂ ಅನೇಕ ಕಡೆಗಳಲ್ಲಿ ಬಸ್‌ ತಂಗುದಾಣವೇ ಇಲ್ಲ. ಹಲವೆಡೆ ರಸ್ತೆಯ ಒಂದು ಬದಿ ಮಾತ್ರ ಬಸ್‌ ತಂಗುದಾಣಗಳಿದ್ದು, ಮತ್ತೊಂದು ಬದಿಯಲ್ಲಿ ಇಲ್ಲ. ಇದರಿಂದ ಪ್ರಯಾಣಿಕರು ಅಂಗಡಿಗಳ ಮುಂದೆ, ರಸ್ತೆಯ ಬದಿಯಲ್ಲಿಯೇ ಮಳೆ, ಬಿಸಿಲು ಲೆಕ್ಕಿಸದೆ ನಿಂತಿರುತ್ತಾರೆ. 

ಕೆಲವೆಡೆ ಬಸ್‌ ತಂಗುದಾಣಗಳೇ ಇಲ್ಲ, ಕೆಲವೆಡೆ ತಂಗುದಾಣಗಳಲ್ಲಿ ಸ್ವಚ್ಛತೆ ಇಲ್ಲ. ಅಂತಹ ನಿಲ್ದಾಣದಲ್ಲಿ ನಿಂತರೆ ಸಾಂಕ್ರಾಮಿಕ ರೋಗಗಳು ಹರಡುವಲ್ಲಿ ಸಂಶಯವಿಲ್ಲ. ಬಸ್‌ ಕಾಯಲು ಕಿರಿಕಿರಿ ಅನುಭವಿಸುವಂತಾಗಿದೆ. ಮೊದಲು ಪಾಲಿಕೆ ಅವುಗಳ ಸ್ವಚ್ಛತೆ ಕಾಪಾಡುವ ಕ್ರಮಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಆಗ್ರಹ.

ನಗರದಲ್ಲಿರುವ ನಗರ ಸಾರಿಗೆ ಬಸ್‌ ತಂಗುದಾಣಗಳಲ್ಲಿ ಭಿತ್ತಿ ಪತ್ರಗಳಿಂದ ತುಂಬಿದ್ದು, ಸ್ವಚ್ಛತೆಯೇ ಇಲ್ಲವಾಗಿವೆ. ಬಸ್‌ ಕಾಯಲು ಹಿಂಸೆ ಎನಿಸುತ್ತದೆ. ಶೀಘ್ರವೇ ಜಿಲ್ಲಾಡಳಿತ ಮತ್ತು ಪಾಲಿಕೆಯು ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಉದ್ಯೋಗಿ ಶಿಲ್ಪಾ ಆಗ್ರಹಿಸುತ್ತಾರೆ.

ಬಸ್‌ ತಂಗುದಾಣಗಳಲ್ಲಿ ಬಸ್‌ ಬರುವ ಸಮಯವನ್ನು ಹಾಕಿದರೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ. ಸಾರ್ವಜನಿಕರು ಸಹ ತಂಗುದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಬೇಕು ಎನ್ನುತ್ತಾರೆ ವಿದ್ಯಾರ್ಥಿ ಮಧು ಸೂದನ್.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !