ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೇಡು ಹತ್ಯೆ ತಡೆಗೆ ಕಾನೂನು ಶೀಘ್ರ ರಚನೆಯಾಗಲಿ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅಂತರಧರ್ಮೀಯ ಅಥವಾ ಅಂತರಜಾತಿ ವಿವಾಹದಲ್ಲಿ ಖಾಪ್ ಪಂಚಾಯಿತಿ ಅಥವಾ ಜಾತಿ ಪಂಚಾಯಿತಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತೆ ಎಚ್ಚರಿಕೆ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಬಗೆಯ ಎಚ್ಚರಿಕೆ ನೀಡುತ್ತಿರುವುದು ಇದು ಎರಡನೇ ಬಾರಿ. ವಯಸ್ಕ ಹುಡುಗ– ಹುಡುಗಿ ಮದುವೆಯಾದರೆ ಯಾರೂ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಜನವರಿ ತಿಂಗಳಲ್ಲೂ ಸುಪ್ರೀಂ ಕೋರ್ಟ್ ಹೇಳಿತ್ತು.

ಖಾಪ್ ಪಂಚಾಯಿತಿಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಅಗತ್ಯವಾಗಿದೆ ಎಂಬುದೇ ನಮ್ಮ ಸಮಾಜದ ಸ್ಥಿತಿಗತಿ ಯಾವ ಬಗೆಯಲ್ಲಿದೆ ಎಂಬುದಕ್ಕೆ ಸೂಚಕ. ಖಾಪ್ ಪಂಚಾಯಿತಿಗಳು, ‘ಸಮಾಜದ ಸಾಕ್ಷಿಪ್ರಜ್ಞೆಗಳಾಗುವುದೇನೂ ಬೇಡ’ ಎಂದು ಕೋರ್ಟ್ ತೀವ್ರವಾಗಿ ಟೀಕಿಸಿದೆ. ಪರಸ್ಪರ ಸಮ್ಮತಿಯ ವಿವಾಹಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿರುವ ಕೋರ್ಟ್, ಖಾಪ್ ಪಂಚಾಯಿತಿಗಳ ಹಸ್ತಕ್ಷೇಪ ನಿಯಂತ್ರಣಕ್ಕೆ ಸೂಕ್ತ ಕಾನೂನನ್ನು ಸಂಸತ್ತು ರಚಿಸಬೇಕಿರುವ ಅಗತ್ಯವನ್ನು ಪ್ರತಿಪಾದಿಸಿದೆ.

ಸಂಸತ್ತು ಕಾನೂನು ರಚಿಸುವವರೆಗೆ ಖಾಪ್ ಪಂಚಾಯಿತಿಗಳ ಹಸ್ತಕ್ಷೇಪ ತಡೆಯಲು ಮಾರ್ಗದರ್ಶಿ ಸೂತ್ರಗಳನ್ನು ಸುಪ್ರೀಂ ಕೋರ್ಟ್ ನೀಡಿರುವುದು ಮಹತ್ವದ್ದು. ಸಂಸತ್ತು ಕಾನೂನು ರೂಪಿಸುವವರೆಗೂ ಈ ಮಾರ್ಗದರ್ಶಿ ಸೂತ್ರಗಳು ಜಾರಿಯಲ್ಲಿರುತ್ತವೆ ಎಂದು ಕೋರ್ಟ್ ಹೇಳಿದೆ.

ಖಾಪ್ ಪಂಚಾಯಿತಿಗಳು ಸಭೆ ಸೇರುವುದನ್ನು ನಿಷೇಧಿಸಲು ಸಿಆರ್‌ಪಿಸಿ 144ನೇ ವಿಧಿ ಬಳಸಬೇಕೆಂಬ ನಿರ್ದೇಶನವೂ ಈ ಮಾರ್ಗದರ್ಶಿ ಸೂತ್ರದಲ್ಲಿದೆ. ಅಲ್ಲದೆ ಕೋರ್ಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಬೆದರಿಕೆಗೆ ಒಳಗಾಗುವ ದಂಪತಿಗೆ ಸುರಕ್ಷಿತ ಮನೆಗಳನ್ನು ಒದಗಿಸಿಕೊಡುವ ಹೊಣೆ ಪೊಲೀಸರಿಗಿದೆ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಖಾಪ್ ಪಂಚಾಯಿತಿಗಳು ಅಕ್ರಮ ಎಂದು 2011ರಲ್ಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹೀಗಿದ್ದೂ ಈ ತೀರ್ಪಿನ ಉಲ್ಲಂಘನೆ ಮುಂದುವರಿದಿದೆ. ಮದುವೆಯಂತಹ ವೈಯಕ್ತಿಕ ವಿಚಾರದಲ್ಲಿ ಖಾಪ್ ಪಂಚಾಯಿತಿಗಳು ತೀರ್ಮಾನಗಳನ್ನು ಕೊಡುವುದು ಮುಂದುವರಿದಿದೆ. ಹೀಗಾಗಿ, ಪರಸ್ಪರ ಇಷ್ಟಪಟ್ಟು ಮದುವೆ ಮಾಡಿಕೊಂಡ ಜೋಡಿಯ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ.

ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ಉತ್ತರಪ್ರದೇಶಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಮತಬ್ಯಾಂಕ್ ಓಲೈಕೆಯ ರಾಜಕಾರಣದಿಂದಾಗಿ ರಾಜಕೀಯ ನಾಯಕರ ಪರೋಕ್ಷ ಬೆಂಬಲವೂ ಈ ಖಾಪ್ ಪಂಚಾಯಿತಿಗಳಿಗಿದೆ ಎಂಬುದು ದುರದೃಷ್ಟಕರ. ಈ ಪಂಚಾಯಿತಿಗಳ ವಿರುದ್ಧ ಸುಪ್ರೀಂ ಕೋರ್ಟ್ ಎಷ್ಟೇ ನಿರ್ದೇಶನಗಳನ್ನು ನೀಡಿದರೂ ಅವನ್ನು ಗಣನೆಗೇ ತೆಗೆದುಕೊಳ್ಳದ ಸ್ಥಿತಿ ಶೋಚನೀಯ.

‘ಸಂಪ್ರದಾಯದ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದನ್ನು ಸುಪ್ರೀಂ ಕೋರ್ಟ್ ನಿಲ್ಲಿಸಬೇಕು’ ಎಂದು ಕಳೆದ ತಿಂಗಳು ಈ ಖಾಪ್ ಪಂಚಾಯಿತಿಗಳನ್ನು ಪ್ರತಿನಿಧಿಸುವ ನಾಯಕರು ಹೇಳಿಕೆ ನೀಡಿದ್ದಂತೂ ದೊಡ್ಡ ವಿಪರ್ಯಾಸ. ಆದರೆ ಯಾವುದೋ ಸಮುದಾಯದ ಮರ್ಯಾದೆ ಕಾಪಾಡಲು, ಸಂವಿಧಾನದ ಅಡಿ ನಾಗರಿಕರಿಗೆ ನೀಡಲಾಗಿರುವ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಮಾತುಗಳಲ್ಲಿ ತಿಳಿಹೇಳಿದೆ.

ಖಾಪ್ ಪಂಚಾಯಿತಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ನ ಈ ಮಾತುಗಳು ರಾಜ್ಯ ಸರ್ಕಾರಗಳಿಗೆ ದಾರಿದೀಪವಾಗಬೇಕು. ಮಧ್ಯಯುಗೀನ ಮೌಲ್ಯಗಳನ್ನು ಪ್ರತಿನಿಧಿಸುವಂತಹ ಖಾಪ್ ಪಂಚಾಯಿತಿಗಳ ಕ್ರೂರ ನಿರ್ಧಾರಗಳ ವಿರುದ್ಧ ಆಡಳಿತಯಂತ್ರ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಇನ್ನಾದರೂ ನಿಲ್ಲಬೇಕು.

ಮರ್ಯಾದೆಗೇಡು ಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇರುವುದಕ್ಕೆ ಆಡಳಿತಯಂತ್ರದ ನಿಷ್ಕ್ರಿಯವೂ ಒಂದು ಕಾರಣ. ಮರ್ಯಾದೆಗೇಡು ಹತ್ಯೆಗಳು ಉತ್ತರ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಕರ್ನಾಟಕ, ತಮಿಳುನಾಡುಗಳಲ್ಲೂ ಇತ್ತೀಚಿನ ವರ್ಷಗಳಲ್ಲಿ ಇಂತಹ ಅನೇಕ ಹತ್ಯೆ ಪ್ರಕರಣಗಳು ನಡೆದಿವೆ.

ಸಮುದಾಯಕ್ಕೆ ಸಂಬಂಧಿಸಿದ ವಿಚಾರ ಎಂದು ಸಾಮಾನ್ಯವಾಗಿ ಕಾನೂನು ಜಾರಿ ಅಧಿಕಾರಿಗಳು ಅಥವಾ ಪೊಲೀಸರು ಮಧ್ಯಪ್ರವೇಶಿಸುವುದಿಲ್ಲ. ಅಪರಾಧ ನಡೆದ ನಂತರ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಇದು ತಪ್ಪಬೇಕು. ಜೊತೆಗೆ ಈ ಸಮಸ್ಯೆಯನ್ನು ಕಾನೂನಿನಿಂದ ಮಾತ್ರವೇ ಪರಿಹರಿಸಲಾಗದು. ಉದಾರ ದೃಷ್ಟಿಕೋನದ ಆಧುನಿಕ ಮೌಲ್ಯಗಳ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT