ಜೇನುಗೂಡಿನ ‘ಉಸಿರು ಅಭಿಯಾನ’..!

7

ಜೇನುಗೂಡಿನ ‘ಉಸಿರು ಅಭಿಯಾನ’..!

Published:
Updated:
Deccan Herald

ಸ್ವಚ್ಛತೆಯ ಮಹತ್ವದ ಜತೆ, ಪರಿಸರ ಜಾಗೃತಿ ಮೂಡಿಸುತ್ತಿದ್ದ ಬಸವನಬಾಗೇವಾಡಿಯ ಜೇನುಗೂಡು ಸಂಘಟನೆ, ಇದೀಗ ಅರಣ್ಯ ಇಲಾಖೆ ಸಹಯೋಗದೊಂದಿಗೆ ‘ಉಸಿರು ಅಭಿಯಾನ’ದ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ, ಸಸಿ ವಿತರಿಸುತ್ತಿರುವ ಕಾರ್ಯಕ್ಕೆ ಸ್ಥಳೀಯರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಜೇನುಗೂಡು ಸಂಘಟನೆಯ ಸದಸ್ಯರು ಕೆಲ ವರ್ಷದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ದೇವಸ್ಥಾನಗಳ ಆವರಣ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸ್ವಚ್ಛತಾ ಅಭಿಯಾನದೊಂದಿಗೆ ಗಿಡ–ಮರ ಬೆಳೆಸುವುದರಿಂದ ಉತ್ತಮ ಪರಿಸರ ನಿರ್ಮಾಣ ಮಾಡಬಹುದು ಎಂಬ ಸಂದೇಶವನ್ನು ಸಾರುತ್ತಿದ್ದಾರೆ. ಪರಿಸರ ಜಾಗೃತಿಯನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ, ಅದನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಈಗಾಗಲೇ ಒಂಭತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಅವುಗಳ ಪೋಷಣೆಯತ್ತ ಗಮನ ಹರಿಸಿದ್ದಾರೆ.

ಕಳೆದ ಜೂನ್ 5ರ ಪರಿಸರ ದಿನಾಚರಣೆ ದಿನದಂದು ಭೂಮಿಗೆ ಬೀಜದ ಉಂಡೆಗಳನ್ನು ಹಾಕುವ ಕಾರ್ಯದೊಂದಿಗೆ ಈ ವರ್ಷದ ಪರಿಸರ ಜಾಗೃತಿ ಕಾರ್ಯ ಆರಂಭಿಸಿರುವ ಸದಸ್ಯರು 10 ಸಾವಿರ ಸಸಿಗಳ ವಿತರಣೆ ಮಾಡುವುದು ಹಾಗೂ ಸ್ವತಃ ಸದಸ್ಯರೇ ಸಾವಿರಾರು ಸಸಿ ನೆಟ್ಟು ಅವುಗಳ ಸಂರಕ್ಷಣೆ ಮಾಡುವ ಗುರಿ ಹೊಂದಿದ್ದಾರೆ.

ಪಟ್ಟಣದಲ್ಲಿ ಜರುಗುವ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರಿಗೆ ಜೇನುಗೂಡು ಸಂಘಟನೆ ಸದಸ್ಯರು ಸಸಿಗಳನ್ನು ವಿತರಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದಂದು 500 ಸಸಿಗಳನ್ನು ವಿತರಣೆ ಮಾಡಿ, ಅವಗಳನ್ನು ನೆಟ್ಟು ಪೋಷಣೆ ಮಾಡುವಂತೆ ಜಾಗೃತಿ ಮೂಡಿಸಿದ್ದರು.

ಇದೇ 1ರ ಬುಧವಾರ ಪಟ್ಟಣದಲ್ಲಿ ನಡೆದ ಪಿಕೆಪಿಎಸ್‌ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ, ಜೇನುಗೂಡು ಸಂಘಟನೆ ಹಮ್ಮಿಕೊಂಡಿದ್ದ ಉಸಿರು ಅಭಿಯಾನಕ್ಕೆ ವ್ಯಾಪಕ ಬೆಂಬಲ ದೊರಕಿತು. ಜನ ಮುಗಿ ಬಿದ್ದು ಸಸಿ ಪಡೆದರು. ಇದೇ ಸಂದರ್ಭ ಸಸಿಗಳನ್ನು ಮರಗಳನ್ನಾಗಿ ಬೆಳೆಸುವ ಸಂಕಲ್ಪ ತೊಟ್ಟಿದ್ದು ವಿಶೇಷ.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಸಕ್ತರಿಗೆ ಸಸಿ ವಿತರಿಸಿ, ಸಂಘಟನೆ ಸದಸ್ಯರ ಪರಿಸರ ಜಾಗೃತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೆಬ್ಬೇವು ತಳಿಯ ಮೂರು ಸಾವಿರ ಸಸಿಗಳನ್ನು ಸಮಾರಂಭದಲ್ಲಿ ವಿತರಿಸಿದ್ದು ಎಲ್ಲರ ಗಮನ ಸೆಳೆಯಿತು.

ಪರಿಸರ ಜಾಗೃತಿ ಮೂಡಿಸುತ್ತಿರುವ ಜೇನುಗೂಡು ಸಂಘಟನೆಗೆ ಅರಣ್ಯ ಇಲಾಖೆಯೂ ಸಾಥ್‌ ನೀಡುತ್ತಿದೆ. ಸದಸ್ಯರ ಬೇಡಿಕೆಗೆ ತಕ್ಕಂತೆ ತಾಲ್ಲೂಕಿನ ಸಂಕನಾಳ ಸಮೀಪದ ಗೋಮಾಳದಲ್ಲಿನ ನರ್ಸರಿಯಲ್ಲಿ ಬೆಳೆಸಿರುವ ಸಸಿಗಳನ್ನು ಒದಗಿಸಿದೆ.

ಶ್ರಾವಣ ಮಾಸದಲ್ಲಿ ನಡೆಯುವ ಪಟ್ಟಣದ ಐತಿಹಾಸಿಕ ಬಸವೇಶ್ವರ ಜಾತ್ರೆ ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರಿಗೆ ಸಸಿಗಳನ್ನು ವಿತರಿಸಿ, ಅವುಗಳನ್ನು ನೆಟ್ಟು ಬೆಳೆಸಬೇಕು ಎಂದು ಮನವಿ ಮಾಡಿಕೊಳ್ಳುವ ಕಾರ್ಯವನ್ನು ಜೇನುಗೂಡು ಸಂಘಟನೆ ಮಾಡಲಿದೆ ಎಂದು ಸದಸ್ಯರಾದ ಪ್ರದೀಪ ಮುಂಜಾನೆ, ಬಸವರಾಜ ಮಾದನಶೆಟ್ಟಿ, ಬಸವರಾಜ ಕಡಕೋಳ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !