ಶನಿವಾರ, ನವೆಂಬರ್ 23, 2019
23 °C
14ನೇ ಹಣಕಾಸು ಯೋಜನೆ: ಹಣ ಸರ್ಕಾರಕ್ಕೆ ವಾಪಸ್ ಹೋಗದಂತೆ ಕ್ರಮ

ಖರ್ಚಾಗದ ₹ 13 ಕೋಟಿ ಅನುದಾನ

Published:
Updated:
Prajavani

ಶಿರಸಿ: ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಿಗೆ 14ನೇ ಹಣಕಾಸು ಯೋಜನೆಯಡಿಯಲ್ಲಿ ನೀಡಲಾದ ₹ 13 ಕೋಟಿಯಷ್ಟು ಅನುದಾನ ಖರ್ಚಾಗಿಲ್ಲ. ಅದು ಸರ್ಕಾರಕ್ಕೆ ವಾಪಸ್ ಹೋಗುವ ಮೊದಲು ಅಗತ್ಯ ಕಾಮಗಾರಿ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ನಗರದಲ್ಲಿ ಪ್ರಕೃತಿ ವಿಕೋಪ ಹಾಗೂ ಇತರ ವಿಷಯಗಳ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಗ್ರಾಮ ಪಂಚಾಯ್ತಿಗಳು ಕೂಡಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ಖರ್ಚು ಮಾಡುವಂತೆ ಕೋರಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಮಾತನಾಡಿ, ‘ಈ ಹಣಕ್ಕೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ದೊರೆತರೂ ಬಳಕೆ ಮಾಡಿಲ್ಲ. 2015ರಿಂದ 2019ರವರೆಗಿನ ಹಣ ಖರ್ಚಾಗಿಲ್ಲ. ಇದೇ ರೀತಿ ವಿಳಂಬ ಮಾಡಿದರೆ ಸರ್ಕಾರಕ್ಕೆ ವಾಪಸಾಗುತ್ತದೆ’ ಎಂದರು. ಇದಕ್ಕೆ ಕಾಗೇರಿ ಪ್ರತಿಕ್ರಿಯಿಸಿ, ‘ಕೆಲವು ಪಂಚಾಯ್ತಿಗಳಲ್ಲಿ ಕ್ರಿಯಾಯೋಜನೆ ಮಾಡಿಲ್ಲ. ಕ್ರಿಯಾಯೋಜನೆ ಆದರೂ ಮಂಜೂರಾತಿ ಪಡೆಯದೇ ಹಣ ಹಾಗೆ ಉಳಿದಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕೂಡಲೇ ಹಣ ಖರ್ಚು ಮಾಡಿ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ₹ 15 ಕೋಟಿಗೂ ಅಧಿಕ ಹಾನಿಯಾಗಿದೆ. ಶಿರಸಿ– ಸಿದ್ದಾಪುರ ಕ್ಷೇತ್ರಕ್ಕೆ ಕಾರ್ಯಪಡೆಗೆ ₹ 1 ಕೋಟಿ ಬಂದಿದೆ. ಇದರಲ್ಲಿ ಶಿರಸಿ ನಗರಕ್ಕೆ ₹ 20 ಲಕ್ಷ, ಗ್ರಾಮೀಣ ಪ್ರದೇಶಕ್ಕೆ ₹ 40 ಲಕ್ಷ ಹಾಗೂ ಸಿದ್ದಾಪುರ ತಾಲ್ಲೂಕಿಗೆ ₹ 40 ಲಕ್ಷ ಹಂಚಿಕೆ ಮಾಡಿ ಕ್ರಿಯಾಯೋಜನೆ ಮಾಡಲಾಗುವುದು. ಜಿಲ್ಲಾ ಪಂಚಾಯ್ತಿ ರಸ್ತೆ ದುರಸ್ತಿಗೆ ಶಿರಸಿ ತಾಲ್ಲೂಕಿಗೆ ₹ 1.22 ಕೋಟಿ ಬಿಡುಗಡೆಯಾಗಿದೆ. ₹ 74 ಲಕ್ಷ ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಿದ್ದು, ಕ್ರಿಯಾಯೋಜನೆ ಮಾಡಬೇಕಿದೆ ಎಂದರು.

ಜಿಲ್ಲಾ ಪಂಚಾಯ್ತಿ ರಸ್ತೆ ಸುಧಾರಣೆಗೆ ₹ 7 ಕೋಟಿ ಅನುದಾನದ ಅಗತ್ಯವಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಗಾಂವಕರ್ ಸಭೆಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ 71 ಕಾಮಗಾರಿಗಳಿಗೆ ₹ 25 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಎಂಜಿನಿಯರ್ ಸತೀಶ ಜಹಗೀರದಾರ್ ತಿಳಿಸಿದರು.

‘ತಾತ್ಕಾಲಿಕವಾಗಿ ದುರಸ್ತಿ ಮಾಡಿ’: ತಾಲೂಕಿನಲ್ಲಿ ಬಹುತೇಕ ರಸ್ತೆಗಳು ಭಾಗಶಃ ಹಾಳಾಗಿ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯ್ತಿ ರಸ್ತೆಗಳನ್ನು ಕೂಡಲೇ ತಾತ್ಕಾಲಿಕವಾಗಿ ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು. ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದ್ದ, ವಿಶೇಷ ಅನುದಾನಕ್ಕೆ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಈ ವೇಳೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಎಂ.ಆರ್.ಕುಲಕರ್ಣಿ ಇದ್ದರು.

ಪ್ರತಿಕ್ರಿಯಿಸಿ (+)